





ಬಡಗನ್ನೂರು : ಕೇರಳ ಕರ್ನಾಟಕ ಗಡಿಭಾಗದ ಸುಳ್ಯಪದವು ಸಮೀಪದ ದೇವಸ್ಯ ಎಂಬಲ್ಲಿ ಕೇರಳದಿಂದ ಕರ್ನಾಟಕ ಪ್ರದೇಶಕ್ಕೆ ಕೆಂಪು ಕಲ್ಲು ಸಾಗಟದ ಲಾರಿಯೊಂದು ಪಲ್ಟಿಯಾಗಿ ಲಾರಿ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಅ.24ರಂದು ಸಂಜೆ ನಡೆದಿದೆ.


ಕಾಸರಗೋಡು ಜಿಲ್ಲೆಯ ಮಿಂಚಿಪದವು ಪ್ರದೇಶದ ಕಲ್ಲಿನ ಕೋರೆಯಿಂದ ಕೆಂಪು ಕಲ್ಲು ಹೇರಿಕೊಂಡು ಬಂದ ಲಾರಿ ಕೇರಳ ಕರ್ನಾಟಕ ಗಡಿ ದೇವಸ್ಯ ಸೇತುವೆಯ ಬಳಿ ವೇಗವಾಗಿ ಮಕ್ಕಳು ಇರುವ ಕಾರೊಂದಕ್ಕೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ತೋಟ ಕ್ಕೆ ಉರುಳಿ ಬಿದ್ದು ಪಲ್ಟಿಯಾಗಿದೆ. ಲಾರಿ ಚಾಲಕ,ಕ್ಲೀನರ್ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.






ಕಾರಿನಲ್ಲಿ ಇಬ್ಬರು ವಯಸ್ಕರು,ನಾಲ್ಕು ಮಂದಿ ಮಕ್ಕಳು ಇದ್ದರು. ರಸ್ತೆಯ ಎರಡೂ ಬದಿ ಅಪಾಯಕಾರಿ ಇರುವುದರಿಂದ ವೇಗವಾಗಿ ಬಂದ ಕಾರಿಗೆ ಮುಖಾಮುಖಿ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಲಾರಿ ತೋಟಕ್ಕೆ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಇನ್ನೂ ಈಡೇರದ ನೂತನ ಸೇತುವೆ ಕನಸು
ಕೇರಳ ಕರ್ನಾಟಕ ಗಡಿ ಪ್ರದೇಶದ ದೇವಸ್ಯ ಸೇತುವೆ ಕಿರಿದಾಗಿದ್ದು ಕುಸಿತ ಕಂಡಿದೆ. ಇದರ ಎರಡು ಬದಿಯ ತಡೆ ಬೇಲಿ ಮುರಿದು ಹೋಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ.ಕೇರಳ ಪಿಡಬ್ಲ್ಯೂಡಿ ರಸ್ತೆ ಅಭಿವೃದ್ಧಿಗೊಳಿಸಿ, ರಸ್ತೆ ಅಗಲೀಕರಣಗೊಳಿಸಿದೆ. ಆದರೆ ಕರ್ನಾಟಕ ಭಾಗದ ಕಾಂಕ್ರೀಟ್ ರಸ್ತೆ ಕಿರಿದಾಗಿದ್ದು ಸೈಡು ಕೊಡುವ ಸಂದರ್ಭ ಆಗಾಗ ಪ್ರತಿ ನಿತ್ಯ ಸಣ್ಣಪುಟ್ಟ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ. ಕಾಂಕ್ರೇಟ್ ರಸ್ತೆ ಇಕ್ಕೆಲಗಳು ಅಪಾಯಕಾರಿಯಾಗಿದ್ದು ಅನಾಹುತಗಳಿಗೆ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದೆ ಆಗುವ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.










