ಬಂಟರ ಸಂಘಕ್ಕೆ ನಿವೇಶನ ಮಂಜೂರಾದ ಬೆನ್ನಲ್ಲೇ ಕುಲಾಲ ಸಂಘಕ್ಕೂ ನಿವೇಶನ ಮಂಜೂರು : ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

0

ಪುತ್ತೂರು: ಪುತ್ತೂರು ಬಂಟರ ಸಂಘಕ್ಕೆ 5.5 ಎಕ್ರೆ ನಿವೇಶನ ಪುತ್ತೂರಿನಲ್ಲಿ ಮಂಜೂರುಗೊಂಡಿದ್ದು ಇದರ ಬೆನ್ನಲ್ಲೇ ಬೆಂಗಳೂರು ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಮಂಜೂರುಗೊಂಡಿದ್ದು, ಪುತ್ತೂರು ಶಾಸಕ ಅಶೋಕ್ ರೈ ಮನವಿಗೆ ಸರಕಾರ ಸ್ಪಂದನೆ ನೀಡುವ ಮೂಲಕ ಕುಲಾಲ ಸಂಘದ ಬಹುಕಾಲದ ಬೇಡಿಕೆಯೊಂದು ಈಡೇರಿದೆ.


ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಕುಂಬಾರ ಮಾಡಿಕೊಂಡಿರುವ ಕುಲಕಸುಬು ಸಮುದಾಯವು ಜಿಲ್ಲೆಯಲ್ಲಿ ಕುಂಬಾರಿಕೆ ಕುಲಾಲ/ಮೂಲ್ಯ/ಹಾಂಡ ಹೆಸರುಗಳಿಂದ ಕರೆಯಲ್ಪಡುತ್ತಿದ್ದು ಈ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿರುತ್ತದೆ. ಕುಂಬಾರಿಕೆ ವೃತ್ತಿಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಉದ್ಯೋಗಕ್ಕಾಗಿ ಸದರಿ ಸಮುದಾಯದ ಬೆಂಗಳೂರಿಗೆ ಆಗಮಿಸಿ ಇಲ್ಲಿ ನೆಲೆಸಿ ಉದ್ಯೋಗ, ಉದ್ಯಮದಲ್ಲಿ ಹಾಗೂ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ನೆಲೆಸಿದ್ದು, ಸಮುದಾಯದ ಕೆಳಹಂತದಿಂದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ’ಕುಲಾಲ ಸಂಘ ಬೆಂಗಳೂರು (ರಿ.) ಸಂಘ ರಚಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಸಂಘವು ಸಮುದಾಯದ ಜನರಿಗೆ ಕುಂಬಾರಿಕೆ ತರಬೇತಿ ನೀಡಲು ಮತ್ತು ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಹಾಗೂ ಸಂಘದ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಬೆಂಗಳೂರು ನಗರದಲ್ಲಿ ಒಂದು ಸಾಂಸ್ಕೃತಿಕ ಭವನವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದ ಈ ಸಮುದಾಯ ಸ್ವಂತ ಸಂಪನ್ಮೂಲದಿಂದ ನೀವೇಶನ ಖರೀಸುವುದು ಸಾಧ್ಯವಿಲ್ಲವಾದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಲಹಳ್ಳಿಯಲ್ಲಿ ಸುಮಾರು 15 ಸಾವಿರ ಚ.ಅ ನಿವೇಶನ ಮಂಜೂರಗೊಳಿಸುವಂತೆ ಶಾಸಕ ಅಶೋಕ್ ರೈ ಅವರ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್ ಎ ಹ್ಯಾರಿಸ್ ರವರಿಗೆ ಮನವಿ ಮಾಡಲಾಗಿದ್ದು , ಮಂಗಳವಾರ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿಯಾದ ಶಾಸಕ ಅಶೋಕ್ ರೈ ಹಾಗೂ ಕುಲಾಲ ಸಂಘದ ಪ್ರಮುಖರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು ಕುಲಾಲ ಸಂಘದವರು ನಿವೇಶನ ಮಂಜೂರಾತಿ ಮಾಡಿಸಿಕೊಡುವಂತೆ ನನ್ನನ್ನು ಭೇಟಿಯಾಗಿದ್ದರು. ನಿವೇಶನಕ್ಕಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕೆಲದಿನಗಳ ಹಿಂದೆ ಮನವಿ ಮಾಡಿದ್ದೆ. ಡಿ ಕೆ ಶಿವಕುಮಾರ್ ಅವರು ಮನವಿಯನ್ನು ಸ್ವೀಕರಿಸಿ ನಿವೇಶನ ಮಂಜೂರುಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಇಂದು ಕುಲಾಲ ಸಂಘದ ಪ್ರಮುಖರನ್ನು ಕರೆದುಕೊಂಡು ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಎನ್ ಎ ಹಾರಿಸ್ ಅವರನ್ನು ಭೇಟಿಯಾಗಿ ಇದೇ ವಿಚಾರಕ್ಕೆ ಸಂಬಂದಿಸಿದಂತೆ ಚರ್ಚೆ ನಡೆಸಿದ್ದೇವೆ. ಜಾಲಹಳ್ಳಿಯಲ್ಲಿ ಸುಮಾರು 15 ಸಾವಿರ ಚ.ಅ. ನಿವೇಶನ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಅತ್ಯಂತ ಸಂತೋಷಕರ ವಿಚಾರವಾಗಿದೆ. ಹಲವು ವರ್ಷಗಳಿಂದ ನಿವೇಶನಕ್ಕಾಗಿ ಮನವಿ ಮಾಡುತ್ತಿದ್ದವರಿಗೆ ಈ ವರ್ಷ ಅದು ಕೂಡಿಬಂದಿದೆ. ಈಗಾಗಲೇ ಬಂಟರ ಸಂಘಕ್ಕೆ 5.5 ಎಕ್ರೆ ನಿವೇಶನ ಮಂಜೂರಾಗಿದೆ, ಕುಲಾಲ ಸಂಘದವರಿಗೂ ಮಂಜೂರಾಗಿದೆ. ಇತರೆ ಜಾತಿ ಸಂಘಟನೆಯವರೂ ಈ ವಿಚಾರದಲ್ಲಿ ಫಾಲೋಅಪ್ ಮಾಡಿದ್ದಲ್ಲಿ ಖಂಡಿತವಾಗಿಯೂ ನಾನು ಸಹಕಾರವನ್ನು ನೀಡುವೆ.
ಅಶೋಕ್ ರೈ , ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here