ಕೌಕ್ರಾಡಿ ಸರ್ವೆ ನಂ.123/1ರ ಪ್ಲಾಟಿಂಗ್ ಪ್ರಕ್ರಿಯೆ ವಿಳಂಬ; ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ, ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

0

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಸರ್ವೆ ನಂ.123/1 ರಲ್ಲಿ 3634.70 ಎಕರೆ ಜಾಗದ ಪ್ಲಾಟಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ಸೂಚಿಸಿ, ಶೀಘ್ರದಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿ ಪಹಣಿ ಪತ್ರ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಸದ್ರಿ ಸರ್ವೆ ನಂಬ್ರದ ಜಾಗದಲ್ಲಿ ಕೃಷಿ ಮಾಡುತ್ತಿರುವ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಅ.28ರಂದು ಕಡಬದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದರು. ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಯ ತಾಂತ್ರಿಕ ಸಹಾಯಕರು, ಅರಣ್ಯಾಧಿಕಾರಿಗಳು ಹಾಗೂ ಕಡಬ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಕಳೆದ ಫೆ.20 ಮತ್ತು 25ರಂದು ಸದ್ರಿ ಜಾಗದ ಜಂಟಿ ಸರ್ವೆ ನಡೆಸಿತ್ತು. ನಂತರ ನಕ್ಷೆ ತಯಾರಿಸಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಲಾಗಿತ್ತು. ಅಲ್ಲಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ವರದಿ ಹಾಗೂ ನಕ್ಷೆಯ ಪ್ರತಿಯನ್ನು ಕಳುಹಿಸಿ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಆರ್‌ಟಿಸಿ ತಯಾರಿಸಿ ಎಂದು ಸೂಚನೆ ನೀಡಲಾಗಿತ್ತು. ಮುಂದಿನ ಕ್ರಮಕ್ಕಾಗಿ ಪುತ್ತೂರಿನ ಸಹಾಯಕ ಆಯುಕ್ತರಿಗೆ ಆದೇಶಿಸಲಾಗಿತ್ತು. ನಂತರ ಕಡಬ ತಹಶೀಲ್ದಾರರಿಗೆ ಪರಿಶೀಲನೆಗಾಗಿ ದಾಖಲೆಗಳನ್ನು ಕಳಿಸಲಾಗಿತ್ತು. ಆದರೆ ಈ ಆದೇಶದ ಪ್ರತಿ ಟಪಾಲ್ ವಿಭಾಗದಲ್ಲೇ ಬಾಕಿ ಉಳಿದಿದೆ ಎಂಬ ವಿಚಾರವನ್ನು ಫಲಾನುಭವಿಗಳು ಶಾಸಕರ ಗಮನಕ್ಕೆ ತಂದರು. ಈ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ಶಾಸಕರ ಸೂಚನೆ;
ಮನವಿ ಸ್ವೀಕರಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಸಾರ್ವಜನಿಕ ಹಿತದ ಕೆಲಸ ವಿಳಂಬ ಮಾಡದೇ ಅಧಿಕಾರಿಗಳು ತ್ವರಿತವಾಗಿ ಮಾಡಬೇಕು. ಉಪ ತಹಶೀಲ್ದಾರ್ ಅವರು ಕಡತ ಸಿದ್ಧಪಡಿಸಿ ಸಹಾಯಕ ಆಯುಕ್ತರಿಂದ ಅನುಮತಿ ಪಡೆದು ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಇರುವ ಕಡತ ಚಲಾವಣೆ ಶೀಘ್ರ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಪಹಣಿ ಪತ್ರ ಸಿಗುವಂತೆ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್‌ರಾದ ಸಾಹೀದ್ದುಲ್ಲಾ ಖಾನ್, ಗೋಪಾಲ, ಸರ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಮಹೇಶ್, ಜನಾರ್ದನ, ಭವಾನಿ, ಸ್ಥಳೀಯ ಮುಖಂಡರಾದ ತುಕ್ರಪ್ಪ ಶೆಟ್ಟಿ ನೂಜೆ, ಮಹೇಶ್, ನಾರಾಯಣ ಗೌಡ, ಗೋಪಾಲ ಗೌಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here