





ಉಪ್ಪಿನಂಗಡಿ: ಗ್ರಾಮಾಂತರ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಕ್ರೀಡೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸಮಾನಮನಸ್ಕ ಯುವಕರಿಂದ ಆರಂಭಗೊಂಡ ಉಬಾರ್ ಸ್ಪೋರ್ಟ್ಸಿಂಗ್ ಕ್ಲಬ್ ಮತ್ತು ಉಬಾರ್ ಡೋನಾರ್ಸ್ಗೆ ಈ ಬಾರಿಯ ದ.ಕ. ಜಿಲ್ಲಾ ರಾಜ್ಯ ಪ್ರಶಸ್ತಿಯು ಒಲಿದು ಬಂದಿದೆ.


ಉಪ್ಪಿನಂಗಡಿಯ ಉದ್ಯಮಿ ಶಬೀರ್ ಕೆಂಪಿಯವರ ಅಧ್ಯಕ್ಷತೆಯಲ್ಲಿ 2015ರಲ್ಲಿ ಉಬಾರ್ ಡೋನಾರ್ಸ್ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ಜಾತಿ- ಮತಗಳ ಬೇಧವಿಲ್ಲದೆ ಬಡವರಿಗೆ ಚಿಕಿತ್ಸೆಯ ವೆಚ್ಚ, ಬಟ್ಟೆಗಳ ದಾನ, ಆಹಾರ ಸಾಮಗ್ರಿಗಳ ದಾನ ಸೇರಿದಂತೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. 2017ರಲ್ಲಿ ಕ್ರೀಡೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸಮಾನಮನಸ್ಕ ಯವಕರನ್ನು ಒಗ್ಗೂಡಿಸಿಕೊಂಡು ಉಬಾರ್ ಸ್ಪೋರ್ಟಿಂಗ್ ಕ್ಲಬ್ ಅನ್ನು ಸ್ಥಾಪಿಸಿ ಅದನ್ನು ಅಧಿಕೃತವಾಗಿ ನೋಂದಾಯಿಸಿ ಇದರಲ್ಲಿ ಉಬಾರ್ ಡೋನಾರ್ಸ್ ಸಂಸ್ಥೆಯನ್ನು ವಿಲೀನಗೊಳಿಸಲಾಯಿತು. ಉಬಾರ್ ಸ್ಪೋರ್ಟಿಂಗ್ ಕ್ಲಬ್ನ ಮೂಲಕ ಕ್ರೀಡೆಗಳ ಆಯೋಜನೆ, ಕ್ರೀಡೆಗಳಿಗೆ ಉತ್ತೇಜನ, ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಹೀಗೆ ಕ್ರೀಡೆಗೆ ಸಂಬಂಧಿಸಿದ ಹತ್ತು ಹಲವು ಚಟುವಟಿಕೆಗಳು ನಡೆಸಲಾಗುತ್ತಿದ್ದರೆ, ಉಬಾರ್ ಡೋನಾರ್ಸ್ನ ಮೂಲಕ ರಕ್ತದಾನ ಶಿಬಿರ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.





ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಬಾರ್ ಸ್ಪೋರ್ಟಿಂಗ್ ಕ್ಲಬ್ನ ಅಧ್ಯಕ್ಷ ಶಬೀರ್ ಕೆಂಪಿಯವರು, ನಮ್ಮ ಸಂಸ್ಥೆಯಲ್ಲಿ ಎಲ್ಲಾ ಧರ್ಮಗಳ ಸಮಾನಮನಸ್ಕ ಸದಸ್ಯರಿದ್ದೂ, ಅನಿವಾಸಿ ಭಾರತೀಯರೂ ಇದರಲ್ಲಿ ಇದ್ದಾರೆ. ಇದರಲ್ಲಿರುವ ಯುವಕರ ತಂಡವೂ ಸಂಸ್ಥೆಯ ಮೂಲಕ ಮಾಡುವ ಪ್ರತಿಯೊಂದು ಕಾರ್ಯಕ್ಕೂ ಕೈ ಜೋಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಥೆಗೆ ಈ ಪ್ರಶಸ್ತಿ ಬರಲು ಸಾಧ್ಯವಾಯಿತು. ಇದು ನಮಗೆ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಲಿದೆ ಎಂದರು.









