ಸಂಗೀತ ಕಲಾಕ್ಷೇತ್ರದಲ್ಲಿನ ಸೇವೆಗೆ ನೆಲ್ಯಾಡಿಯ ವಿಶ್ವನಾಥ ಶೆಟ್ಟಿಯವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ, ನೆಲ್ಯಾಡಿ ಕುಂಡಡ್ಕ ನಿವಾಸಿ, ಬಹುಮುಖ ಪ್ರತಿಭೆ ವಿಶ್ವನಾಥ ಶೆಟ್ಟಿ ಅವರು ಸಂಗೀತ ಕಲಾಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇದರ ನಿರ್ದೇಶಕರಾಗಿರುವ ವಿಶ್ವನಾಥ ಶೆಟ್ಟಿಯವರು ತಮ್ಮ ಕಲಾಕೇಂದ್ರದ ಮೂಲಕ ಸಂಗೀತಾಸಕ್ತ ಮಕ್ಕಳಿಗೆ ಕೀಬೋರ್ಡ್, ಸುಗಮ ಸಂಗೀತ ತರಬೇತಿ ನೀಡುತ್ತಿದ್ದಾರೆ. ಇವರು ಉತ್ತಮ ಗಾಯಕರಾಗಿದ್ದು ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ತುಳು ನಾಟಕ ಸಂಗೀತ ನಿರ್ದೇಶಕರಾಗಿ ಕುವೈಟ್ ಮತ್ತು ದುಬೈ ಮುಂತಾದ ಕಡೆಗಳಲ್ಲಿ ತುಳು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅತ್ಯುತ್ತಮ ಕೀಬೋರ್ಡ್ ವಾದಕರು, ಉತ್ತಮ ಹಾಡುಗಾರರು. ನಾಟಕ ರಚನೆ,ನಿರ್ದೇಶನ, ಯಕ್ಷಗಾನ ಕಲಾವಿದರೂ ಆಗಿದ್ದಾರೆ.


ಕೇಪುದ ಬೆಡಿ, ಮಾತೃದೇವೋಭವ, ಭೂತ ಉಂಡುಗೆ, ತೂದು ಕಲ್ಪೊಡು, ಕೊಲೆಗಾರೆ ಏರ್? ಇವರು ರಚಿಸಿದ ತುಳು ನಾಟಕ ಕೃತಿಗಳಾಗಿವೆ. ಅಲ್ಲದೇ ಅನೇಕ ತುಳು ನಾಟಕಗಳಿಗೆ ಹಾಡುಗಳ ರಚನೆ, ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ಆಕಾಶವಾಣಿ ಯುವವಾಣಿ ವಿಭಾಗದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕನ್ನಡ ಸಂಘ ದೆಹಲಿ, ಮುಂಬೈಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅಶಕ್ತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ನೆರವು, ಕೋವಿಡ್ ಸಂದರ್ಭದಲ್ಲಿ ನೆರವು ನೀಡಿದ್ದಾರೆ.

ನೆಲ್ಯಾಡಿ ಜೆಸಿಐ ಅಧ್ಯಕ್ಷರಾಗಿ, ಆಲಂಕಾರು ಲಯನ್ಸ್ ಕ್ಲಬ್ ಸದಸ್ಯರಾಗಿ, ನೆಲ್ಯಾಡಿ ಸೀನಿಯರ್ ಚೇಂಬರ್ ಸದಸ್ಯರಾಗಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಇವರ ಬಹುಮುಖ ಕಲಾಪ್ರತಿಭೆಗೆ 2023ರಲ್ಲಿ ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರಿಂದ ಕಲಾಪ್ರತಿಭೋತ್ಸವ-2008 ನಾಟಕ ನಿರ್ದೇಶನ ಪ್ರಶಸ್ತಿ, ಜೆಸಿಐ ಕಲಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

LEAVE A REPLY

Please enter your comment!
Please enter your name here