





ಪುತ್ತೂರು: ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆ ಮೇಲಿನ ಗುಂಡಿಗಳು ಬಾಯ್ತೆರೆದು ಕುಳಿತಂತೆ ಕಾಣುತ್ತಿದೆ. ಎಲ್ಲಿ ನೋಡಿದರೂ ರಸ್ತೆ ತುಂಬಾ ಗುಂಡಿಗಳೆ ತುಂಬಿಕೊಂಡಿದ್ದು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹಾರಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕುಂಬ್ರ-ಮಾಡಾವು-ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ ಮೂರು ಕಿ.ಮೀ ದೂರದ ತ್ಯಾಗರಾಜನಗರದಲ್ಲೊಂದು ರಸ್ತೆಯನ್ನು ತುಂಡು ಮಾಡಿದಂತೆ ರಸ್ತೆ ಮಧ್ಯೆಯೇ ಅಪಾಯಕಾರಿ ಗುಂಡಿ ನಿರ್ಮಾಣಗೊಂಡಿದ್ದು ವಾಹನ ಸವಾರರಿಗೆ ಜೀವ ಕಂಟಕವಾಗಿದೆ.
ನೇರ ರಸ್ತೆಯಲ್ಲಿ ತ್ಯಾಗರಾಜನಗರ ಬಸ್ಸು ತಂಗುದಾಣದ ಸಮೀಪ ರಸ್ತೆ ಮಧ್ಯೆಯೇ ಈ ಗುಂಡಿ ನಿರ್ಮಾಣಗೊಂಡಿದೆ. ಆರಂಭದಲ್ಲಿ ಚಿಕ್ಕದಾದ ಗುಂಡಿಯಾಗಿದ್ದು ಇದನ್ನು ಹಲವು ಬಾರಿ ಸ್ಥಳೀಯರು ಮಣ್ಣು, ಜಲ್ಲಿ ಹಾಕಿ ಮುಚ್ಚಿದ್ದರು ಆದರೆ ಮಳೆಗೆ ಜಲ್ಲಿ, ಮಣ್ಣು ಎದ್ದು ಹೋಗಿ ಇಡೀ ರಸ್ತೆಯೇ ಸಂಪೂರ್ಣ ಗುಂಡಿಯಾಗಿದೆ. ಇದು ಅತ್ಯಂತ ಅಪಾಯಕಾರಿ ಗುಂಡಿಯಾಗಿದೆ ಏಕೆಂದರೆ ವಾಹನ ಸವಾರರಿಗೆ ಇಲ್ಲಿ ಗುಂಡಿ ಇದೆ ಎಂಬುದು ಹತ್ತಿರ ಬಂದ ಮೇಲಷ್ಟೆ ತಿಳಿಯುತ್ತದೆ ನೇರ ರಸ್ತೆ ಇದಾಗಿರುವುದರಿಂದ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸಿಕೊಂಡು ಬರುತ್ತಾರೆ ಇದರಿಂದ ಗುಂಡಿಗೆ ವಾಹನಗಳನ್ನು ಇಳಿಸದೇ ಬೇರೆ ಉಪಾಯವಿಲ್ಲದಂತಾಗಿದೆ.



ಡಾಂಬರ್ ಜಲ್ಲಿ ಸಂಪೂರ್ಣ ಎದ್ದು ಹೋಗಿ ಇಡೀ ರಸ್ತೆ ಗುಂಡಿಯಾಗಿರುವುದರಿಂದ ಇದಕ್ಕೆ ಮಣ್ಣು, ಕಲ್ಲು ಹಾಕಿ ಸರಿಪಡಿಸುವ ಅಸಾಧ್ಯವಾಗಿದೆ. ಈ ಹಿಂದೆ ಹಲವು ಬಾರಿ ಸ್ಥಳೀಯರು ಕಲ್ಲು, ಮಣ್ಣು ಹಾಕಿ ಸರಿಪಡಿಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಡಾಂಬರ್ ಹಾಕಿಯೇ ಸರಿಪಡಿಸಬೇಕಾಗಿದೆ. ದುರಂತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಇದಕ್ಕೆ ಪ್ಯಾಚ್ವರ್ಕ್ ಮಾಡುತ್ತಾರೋ ಕಾದು ನೋಡಬೇಕಾಗಿದೆ.





ಪ್ರಾಣ ಬಲಿ ಪಡೆದ ಗುಂಡಿಯಾಗಿದೆ
ಈ ಹಿಂದೆ ಇಲ್ಲಿದ್ದ ಗುಂಡಿಯೊಂದಕ್ಕೆ ದ್ವಿಚಕ್ರ ವಾಹನ ಸವಾರರೋರ್ವರು ರಾತ್ರಿ ವೇಳೆ ಬಿದ್ದು ಪ್ರಾಣವನ್ನೇ ಕಳೆದುಕೊಂಡಿರುವುದು ಇನ್ನೂ ನೆನಪಿನಿಂದ ಮಾಸುವ ಮುನ್ನವೇ ಮತ್ತೆ ಇಲ್ಲಿ ಗುಂಡಿ ನಿರ್ಮಾಣಗೊಂಡಿದೆ. ಮತ್ತೆ ದುರಂತ ಸಂಭವಿಸುವ ಮುನ್ನ ಲೋಕಪೋಯೋಗಿ ಇಲಾಖೆಯವರು ತುರ್ತಾಗಿ ಈ ಗುಂಡಿಗೆ ಡಾಂಬರ್ ಹಾಕುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










