





ಉಪ್ಪಿನಂಗಡಿ: ಇಲ್ಲಿನ ಕುಮಾರಧಾರ ಸೇತುವೆಯ ಬಳಿ ಠಿಕಾಣಿ ಹೂಡಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಹೊರ ಜಿಲ್ಲೆಯ ತಂಡವನ್ನು ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಅವರು ನ.6ರಂದು ತೆರವುಗೊಳಿಸಿದ್ದು, ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿಯಲ್ಲಿ ಮೀನು ಹಿಡಿಯಬಾರದೆಂದು ಸೂಚನೆ ನೀಡಿದ್ದಾರೆ.



ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ಈ ಹಿಂದೆ ಹಲವು ಜಾತಿಯ ಮತ್ಸ ಸಂಪತ್ತು ಹೇರಳವಾಗಿತ್ತು. ಆದರೆ ಗಾಳ ಹಾಕುವುದು, ಬಲೆ ಬೀಸುವುದು, ರಾತ್ರಿ ಹೊತ್ತು ದೋಣಿಯಲ್ಲಿ ತೆರಳಿ ಕಾರ್ಬೆಟ್ ಉಪಯೋಗಿಸಿ ಮೀನು ಹಿಡಿಯುವುದು ಸ್ಥಳೀಯ ಕೆಲವರಿಂದ ನಿರಂತರ ನಡೆಯುತ್ತಿತ್ತು. ಇನ್ನೊಂದೆಡೆ ವರ್ಷಂಪ್ರತಿ ನಾಲ್ಕೈದು ಬೆಸ್ತ ಕುಟುಂಬಗಳು ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ನದಿ ದಡದಲ್ಲೇ ಠಿಕಾಣಿ ಹೂಡಿ ತೆಪ್ಪದ ಮೂಲಕ ಬಲೆ ಹಾಕಿ ದಿನಂಪ್ರತಿ ಬುಟ್ಟಿ ಬುಟ್ಟಿ ಮೀನುಗಳನ್ನು ಹಿಡಿದು ಪೇಟೆಯಲ್ಲಿ ಮಾರಾಟ ಮಾಡುವ ಕಾಯಕ ನಡೆಸುತ್ತಿತ್ತು. ಇದರಿಂದ ಮತ್ಸ್ಯ ಸಂಪತ್ತು ನಾಶವಾಗಿ ನದಿ ಮಲೀನ ಹೆಚ್ಚಾಗಲು ಕಾರಣವಾಗಿತ್ತು. ಇವರು ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ಹಿಡಿಯಲು ರಸಾಯನಿಕ ಪದಾರ್ಥಗಳನ್ನು ಬಳಸುತ್ತಾರೆಂಬ ಆರೋಪವೂ ಕೇಳಿ ಬರುತ್ತಿತ್ತು.
ಈ ನಿಟ್ಟಿನಲ್ಲಿ ಗ್ರಾ.ಪಂ. ಪಿಡಿಒ ಅವರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಈ ಸಂದರ್ಭ ಗ್ರಾ.ಪಂ. ಸಿಬ್ಬಂದಿ ಶ್ರೀನಿವಾಸ, ಇಸಾಕ್ ಇದ್ದರು.






‘ಸುದ್ದಿ ಬಿಡುಗಡೆ’ ವರದಿಯ ಫಲಶೃತಿ
ಇಲ್ಲಿನ ಮತ್ಸ್ಯ ಸಂಪತ್ತು ಬರಿದಾಗುತ್ತಿರುವ ಕುರಿತು ‘ಸುದ್ದಿ ಬಿಡುಗಡೆ’ ಪತ್ರಿಕೆಯು ನ.5ರ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ದಿಢೀರ್ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಹಾಗೂ ಗ್ರಾ.ಪಂ. ಸಿಬ್ಬಂದಿಯ ತಂಡ ಸ್ಥಳಕ್ಕೆ ತೆರಳಿ ಅವರನ್ನು ಅಲ್ಲಿಂದ ತೆರವುಗೊಳಿಸಿದ್ದು, ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿಯಲ್ಲಿ ಮೀನು ಹಿಡಿಯುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.








