





ಪುತ್ತೂರು:ಒಂಭತ್ತು ವರ್ಷ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೀಗೆ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ನ.6ರಂದು ಸೊಸೈಟಿಯ ಸಭಾಂಗಣದಲ್ಲಿ ನೆರವೇರಿತು.


ಜಯಂತಿ ಭಾಸ್ಕರ್ರವರಿಂದ ಸೊಸೈಟಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ-ಶಶಿಕುಮಾರ್ ರೈ:
ಮುಖ್ಯ ಅತಿಥಿ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ನಿವೃತ್ತಿಗೊಂಡ ಆರ್ಯಾಪು ಸೊಸೈಟಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಯಂತಿ ಭಾಸ್ಕರ್ರವರನ್ನು ಸನ್ಮಾನಿಸಿ ಮಾತನಾಡಿ, ನಿವೃತ್ತಿಗೊಂಡ ಜಯಂತಿ ಭಾಸ್ಕರ್ರವರು ಆರ್ಯಾಪು, ಕುರಿಯ, ಕೆಮ್ಮಿಂಜೆ ಈ ಭಾಗದ ರೈತ ಸದಸ್ಯರಿಗೆ ಸೇವೆ ಒದಗಿಸುವ ಕಾರ್ಯ ಮಾಡಿರುತ್ತಾರೆ. ತನ್ನ ಹತ್ತೊಂಬನೇ ವರ್ಷಕ್ಕೆ ಸೊಸೈಟಿಗೆ ಸೇವೆಗೆ ಸೇರಿ ನಾನಾ ಸ್ತರದ ಹುದ್ದೆಗಳನ್ನು ಸ್ವೀಕರಿಸಿ ಕಳೆದ ಒಂಭತ್ತು ವರ್ಷಗಳಿಂದ ಸೊಸೈಟಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘವಾಗಿ ಮೂಡಿ ಬರಲು ಕಾರಣರಾಗಿ ರುತ್ತಾರೆ ಎಂದ ಅವರು ಗ್ರಾಹಕರ ಮೂಲಭೂತ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಮಾಡಿ ಕೊಡುತ್ತಾ ಬರುತ್ತಿರುವ ಜಯಂತಿ ಭಾಸ್ಕರ್ರವರು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೊಸೈಟಿಯ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಅಡಚಣೆ ಉಂಟಾದಾಗ ಅಧ್ಯಕ್ಷರೊಂದಿಗೆ ಬೆಂಬಲ ವಾಗಿ ನಿಂತು ಅಡಚಣೆಯನ್ನು ನಿವಾರಿಸಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿ ಶ್ರೀಮತಿ ಜಯಂತಿ ಭಾಸ್ಕರ್ರವರ ಮುಂದಿನ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.





ಆಡಳಿತ ಮಂಡಳಿ, ಗ್ರಾಹಕರೊಂದಿಗೆ ಸ್ನೇಹಪರ ಕೆಲಸದೊಂದಿಗೆ ಸಂಘದ ಅಭಿವೃದ್ಧಿ ಹೆಗ್ಗಳಿಕೆ-ಎಚ್.ಮಹಮದ್ ಆಲಿ:
ಅಧ್ಯಕ್ಷತೆ ವಹಿಸಿದ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿರವರು ಮಾತನಾಡಿ, ನಿರ್ದೇಶಕನಾಗಿ ಕಳೆದ ಮೂವತ್ತು ವರ್ಷದಿಂದ ಜಯಂತಿ ಭಾಸ್ಕರ್ ರವರ ಕಾರ್ಯವೈಖರಿಯನ್ನು ಬಲ್ಲೆ. ಹಣಕಾಸಿನ ವ್ಯವಹಾರದೊಂದಿಗೆ ಸರಕಾರದ ರಿಯಾಯಿತಿ ಬಡ್ಡಿ ದರದ ಸಾಲಗಳ ವಿತರಣೆ, ಬೆಳೆ ವಿಮೆಯೋಜನೆ, ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಮಾಡಿದ್ದು,ಮಹತ್ತರ ಜವಾಬ್ದಾರಿಯಿರುವ ಜನರಿಗೆ ರೇಶನ್ ವಿತರಿಸುವ ಕೆಲಸ ವನ್ನು ಬಹಳ ವ್ಯವಸ್ಥಿತವಾಗಿ ಸೊಸೈಟಿ ಮಾಡುತ್ತಾ ಬಂದಿದ್ದು ನಮ್ಮ ಆಡಳಿತವು ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತವನ್ನು ಕೊಡುವಲ್ಲಿ ಜಯಂತಿ ಭಾಸ್ಕರ್ ರವರ ಪಾತ್ರ ಬಹಳಷ್ಟಿದೆ. ನಮ್ಮ ಆಡಳಿತವು ಜಯಂತಿ ಭಾಸ್ಕರ್ ರವರಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಭಡ್ತಿ ನೀಡಿದ್ದು ಇದೀಗ ನಿವೃತ್ತಿ, ಬೀಳ್ಕೊಡುಗೆ ಕೂಡ ಮಾಡುತ್ತಿರುವುದು ನಮ್ಮ ಅವಧಿಯಲ್ಲೇ ಆಗಿದೆ ಎಂಬುದು ಸಂತಸ ತಂದಿರುತ್ತದೆ, ಸಹಕಾರಿ ಸಂಘದಲ್ಲಿ ಸೇವೆ ಖಾಯಂ ಆಗುವ ಮೊದಲು ಜಯಂತಿ ಭಾಸ್ಕರ್ ರವರು ಎರಡು ವರ್ಷ ಉಚಿತವಾಗಿ ಸೇವೆ ನೀಡಿರುತ್ತಾರೆ. ಈ ಹಿಂದಿನ ಸಿಇಒ ಶಿಸ್ತಿನ ಸಿಪಾಯಿ ಶ್ರೀಧರ್ ರೈರವರ ಗರಡಿಯಲ್ಲಿ ಪಳಗಿರುವ ಜಯಂತಿ ಭಾಸ್ಕರ್ ರವರು ಎಲ್ಲರನ್ನೂ ಆತ್ಮೀಯತೆಯಿಂದ, ಹೊಂದಾಣಿಕೆಯಿಂದ ಕೆಲಸ ಮಾಡುವ ವ್ಯಕ್ತಿತ್ವಧವರು ಎಂದು ಅವರು ಹೇಳಿದರು.
ಸಾಲಗಾರರಿಗೆ ಸಾಲ ಇದೆ, ಸರಿ ಮಾಡಿಕೊಳ್ಳಿ ಹೇಳುವ ಗುಣ ಅವರದು-ಮಹಾಬಲ ರೈ:
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಮಾತನಾಡಿ, ಆರ್ಯಾಪು ಸೊಸೈಟಿಯನ್ನು ದೇವಸ್ಥಾನಕ್ಕೆ ಹೋಲಿಸಿದಾಗ ಹೇಗೆ ದೇವಸ್ಥಾನದಲ್ಲಿ ಅರ್ಚಕರು ಭಕ್ತರೊಂದಿಗೆ ಒಳ್ಳೆಯ ರೀತಿಯ ಒಡನಾಟ, ಬಾಂಧವ್ಯವಿದ್ದಾಗ ದೇವಸ್ಥಾನಕ್ಕೆ ಭಕ್ತರ ಆಗಮನವಾಗುತ್ತಿದೆಯೇ ಹಾಗೆಯೇ ಸೊಸೈಟಿಯಲ್ಲಿ ಅಧ್ಯಕ್ಷ ಹಾಗೂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯವಾಗಿದೆ. ನಿವೃತ್ತಿಗೊಂಡ ಜಯಂತಿ ಭಾಸ್ಕರ್ರವರು ಸಾಲಗಾರ ಗ್ರಾಹಕರಿಗೆ ಸಾಲ ಕಟ್ಟಿ ಎಂದು ಹೇಳಲಿಲ್ಲ ಬದಲಾಗಿ ಸಾಲ ಇದೆ, ಸರಿ ಮಾಡಿಕೊಳ್ಳಿ ಹೇಳುವ ಗುಣ ಅವರದು. ಸೊಸೈಟಿಯು ನಡೆಯುವುದೇ ಸಾಲಗಾರರಿಂದ. ಸಾಲಗಾರರು ಲೋನ್ ತೆಗೆದುಕೊಂಡು ಸಾಲವನ್ನು ಮರುಪಾವತಿ ಮಾಡಿದಾಗ ಸೊಸೈಟಿಯು ಬೆಳೆಯುತ್ತದೆ. ಉತ್ತಮ ರೀತಿಯಲ್ಲಿ ಸೊಸೈಟಿಯನ್ನು ಮುನ್ನಡೆಸಿಕೊಂಡು ಬಂದ ಜಯಂತಿ ಭಾಸ್ಕರ್ ರವರು ನಿವೃತ್ತಿ ಬಳಿಕ ತನ್ನ ಕುಟುಂಬದ ಸಹಕಾರಿ ಬ್ಯಾಂಕ್ ಸ್ಥಾಪಿಸಲಿ ಎಂದು ಹಾರೈಸಿದರು.
ವೈಮನಸಿಲ್ಲದೆ ಬಾಂಧವ್ಯದಿಂದ ಸೊಸೈಟಿಯನ್ನು ಕಟ್ಟಿ ಬೆಳೆಸಿದ್ದಾರೆ-ಶರತ್:
ಜಿಲ್ಲಾ ಸಹಕಾರಿ ಬ್ಯಾಂಕ್ನ ಪ್ರತಿನಿಧಿ ಶರತ್ ಮಾತನಾಡಿ, ನೋಟು ಅಮಾನ್ಯೀಕರಣ, ಕೊರೋನಾ ಸಂದರ್ಭ, ಸಾಲ ಮನ್ನಾ ಮುಂತಾದ ಸಂದರ್ಭದಲ್ಲಿ ಆರ್ಯಾಪು ಸೊಸೈಟಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದವರು ಜಯಂತಿ ಭಾಸ್ಕರ್ರವರು. ಯಾರಲ್ಲೂ ವೈಮನಸ್ಸು ಇಲ್ಲದೆ ಬಾಂಧವ್ಯದಿಂದ ಸೊಸೈಟಿಯನ್ನು ಕಟ್ಟಿ ಬೆಳೆಸಿದ್ದಾರೆ ಜಯಂತಿ ಭಾಸ್ಕರ್ರವರು. ಜೊತೆಗೆ ನೂತನ ಸಿಇಒ ಅಜಿತ್ ಕುಮಾರ್ ರೈರವರು ಸೊಸೈಟಿಯ ಉತ್ತರೋತ್ತರ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದರು.
ಕರ್ತವ್ಯಕ್ಕೆ ಒತ್ತು ನೀಡಿದಾಗ ಸಂಘ ಅಭಿವೃದ್ಧಿಯಾಗಬಲ್ಲುದು-ಶುಭಾಷಿನಿ ರೈ:
ಆರ್ಯಾಪು ಸೊಸೈಟಿಯ ಸಿಬ್ಬಂದಿಗಳ ಪರವಾಗಿ ಶಾಖಾ ವ್ಯವಸ್ತಾಪಕಿ ಶ್ರೀಮತಿ ಶುಭಾಷಿನಿ ರೈ ಮಾತನಾಡಿ, ನಿವೃತ್ತಿಗೊಂಡ ಜಯಂತಿ ಭಾಸ್ಕರ್ರವರ ಸುದೀರ್ಘ 41 ವರ್ಷಗಳ ಸೇವೆಗೆ ನಮ್ಮ ಅಭಿನಂದನೆಗಳು. ನಮ್ಮ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಜಯಂತಿ ಭಾಸ್ಕರ್ರವರು ಹೊಂದಿದ್ದು ಕರ್ತವ್ಯಕ್ಕೆ ಒತ್ತು ನೀಡಿದಾಗ ಸಂಘ ಅಭಿವೃದ್ಧಿಯಾಗಬಲ್ಲುದು ಎಂಬುದಕ್ಕೆ ಜಯಂತಿ ಭಾಸ್ಕರ್ರವರು ಉದಾಹರಣೆಯಾಗಿದ್ದಾರೆ ಎಂದರು.
ಜಯಂತಿ ಭಾಸ್ಕರ್ರವರದ್ದು ನಗುಮುಖದ ವ್ಯಕ್ತಿತ್ವ:
ಆರ್ಯಾಪು ಸೊಸೈಟಿಯ ನಿರ್ದೇಶಕರಾದ ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಬಳ್ಳಮಜಲು, ಇಸ್ಮಾಯಿಲ್ ಮಲಾರು, ಗಣೇಶ್ ರೈ ತೊಟ್ಲಮೂಲೆ, ತಿಮ್ಮಪ್ಪ ಜಂಗಮುಗೇರು, ಸತೀಶ್ ನಾಕ್, ರಂಜಿತ್ ಬಂಗೇರರವರು ಮಾತನಾಡಿ, ಜಯಂತಿ ಭಾಸ್ಕರ್ರವರದ್ದು ನಗುಮುಖದ ವ್ಯಕ್ತಿತ್ವ, ಎಲ್ಲ ರೊಂದಿಗೆ ಒಳ್ಳೆಯ ಒಡನಾಟ, ಬಾಂಧವ್ಯ ಹೊಂದಿರುವ ಅವರನ್ನು ನಾವೆಲ್ಲಾ ನಗುಮುಖದಿಂದಲೇ ಬೀಳ್ಕೊಡಬೇಕು. ದೇವರು ಅವರಿಗೆ ಆಯುರಾರೋಗ್ಯವನ್ನು ಕರುಣಿಸಲಿ ಜೊತೆಗೆ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿ ವಹಿಸಿ ಕೊಂಡಿರುವ ಅಜಿತ್ ಕುಮಾರ್ ರವರಿಗೆ ಯಶಸ್ವಿಯಾಗಲಿ ಎಂದು ಹೇಳಿ ಒಗ್ಗಟ್ಟಾಗಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಶೀನಪ್ಪ ಮರಿಕೆ, ಶಂಶುದ್ದೀನ್ ನೀರ್ಕಜೆ, ನವೋದಯ ಸ್ವ-ಸಹಾಯ ಸಂಘದ ಪ್ರೇರಕಿ ಶ್ರೀಮತಿ ಮೋಹಿನಿ ಹಾಗೂ ಸ್ವಸಹಾಯ ಸಂಘದ ಸದಸ್ಯರು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಚಂದ್ರಕಲಾ ಓಟೆತ್ತಿಮಾರು ಸ್ವಾಗತಿಸಿ, ನಿರ್ದೇಶಕಿ ತೆರೇಜಾ ಸಿಕ್ವೇರಾ ವಂದಿಸಿದರು. ಸಿಬ್ಬಂದಿ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಸಿಬ್ಬಂದಿಗಳಾದ ಅರ್ಜುನ್ ಭಾಸ್ಕರ್, ವಿನಯ ಕುಮಾರ್, ಶ್ರೀಮತಿ ಪ್ರಶಾಂತಿ ಸಹಕರಿಸಿದರು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿಯಿದೆ…
1985ರಲ್ಲಿ ದಿ.ಇಬ್ರಾಹಿಂ ಹಾಜಿ ಯವರು ಅಧ್ಯಕ್ಷರಾಗಿದ್ದಾಗ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತಾನು ಲೆಕ್ಕಿಗಳಾಗಿ ಕರ್ತವ್ಯಕ್ಕೆ ಸೇರಿಕೊಂಡೆ. ಕಳೆದ ಒಂಭತ್ತು ವರ್ಷ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿಯ ಸೇವೆಯನ್ನು ಹೊತ್ತಿದ್ದೇನೆ. ನನ್ನ 41 ವರ್ಷಗಳ ಸೇವಾವಧಿಯಲ್ಲಿ ಆಯಾ ಅವಧಿಯ ನಿರ್ದೇಶಕ ಮಂಡಳಿಯ ಅಧ್ಯಕ್ಷರು ಹಾಗೂ ನಿರ್ದೇಶಕರು, ಸಿಬ್ಬಂದಿ ವರ್ಗದ ಸಹಕಾರ, ಗ್ರಾಹಕರ ಪ್ರೋತ್ಸಾಹ ಜೊತೆಗೆ ಡಿಸಿಸಿ ಬ್ಯಾಂಕಿನ ಸಹಕಾರಕ್ಕೆ ನನ್ನ ಮನದಾಳದ ಕೃತಜ್ಞತೆಗಳು. ನನ್ನ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿಯೊಂದಿಗೆ, ಎಲ್ಲರ ಪ್ರೀತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ. ಯಾರಿಗಾದರೂ ನಾನು ನೋಯಿಸಿದ್ದಲ್ಲಿ ಕ್ಷಮೆಯಿರಲಿ. ಎಲ್ಲರಿಗೂ ದೇವರು ಆಯುರಾರೋಗ್ಯವನ್ನು ಕರುಣಿಸಲಿ, ಸೊಸೈಟಿಯು ಮತ್ತಷ್ಟು ಅಭಿವೃದ್ಧಿ ಹೊಂದುವ ಆಶಯ ನನ್ನದು.
-ಶ್ರೀಮತಿ ಜಯಂತಿ ಭಾಸ್ಕರ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ನೂತನ ಸಿಇಒ ಆಗಿ ಅಜಿತ್ ರೈ..
ಆರ್ಯಾಪು ಸೊಸೈಟಿಯ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡ ಅಜಿತ್ ಕುಮಾರ್ ರೈರವರನ್ನು ಸೊಸೈಟಿ ಅಧ್ಯಕ್ಷ ಎಚ್.ಮಹಮದ್ ಆಲಿರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಅಜಿತ್ ರೈರವರು, ಕಳೆದ 22 ವರ್ಷಗಳಿಂದ ನಾನು ನಿವೃತ್ತಗೊಂಡ ಜಯಂತಿ ಭಾಸ್ಕರ್ರವರೊಂದಿಗೆ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು ನನಗೆ ಅವರು ತುಂಬಾನೇ ಕಲಿಸಿಕೊಟ್ಟಿದ್ದು ಜೀವನದಲ್ಲಿ ಮುಂದೆ ಬರಬೇಕು ಎನ್ನುವ ನಿಲುವು ಅವರದಾಗಿತ್ತು. ನನ್ನ ತಂದೆ ಶ್ರೀಧರ್ ರೈಯವರು ಇಲ್ಲಿ ಸಿಇಒ ಆಗಿದ್ದ ಸಂದರ್ಭದಲ್ಲಿ ಅವರು ಹೆಚ್ಚಾಗಿ ನಾಲ್ಕು ಸಲ ಹೇಳಿ ಕೊಡುತ್ತಿದ್ದರು ಆದರೆ ಜಯಂತಿ ಭಾಸ್ಕರ್ರವರು ನಾವು ಬೆಳೆಯಬೇಕು ಎನ್ನುವ ದೃಷ್ಟಿಯಿಂದ ಎಲ್ಲವನ್ನೂ ಹೇಳಿ ಕೊಡುವ ಮೂಲಕ ಅವರು ನಮಗೆ ನಿಜವಾಗಿಯೂ ಆದರ್ಶ ಎಂದರು.








