





ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಅಶೋಕ್ ಕುಮಾರ್ ರೈ


ಪುತ್ತೂರು: ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ರೂ.1ಕೋಟಿ ಬಿಡುಗಡೆಯಾಗಿದೆ. ಇದರ ಜೊತೆಯಲ್ಲಿ ಹಿರೇಬಂಡಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.65 ಲಕ್ಷ, ಬಡಗನ್ನೂರು ಕೇಂದ್ರಕ್ಕೆ ರೂ.65ಲಕ್ಷ, ಕರ್ನೂರು ಕೇಂದ್ರಕ್ಕೆ ರೂ.65 ಲಕ್ಷ ಹಾಗೂ ಕೆಮ್ಮಿಂಜೆ ಕೇಂದ್ರಕ್ಕೆ ರೂ.65 ಲಕ್ಷ ಸೇರಿದಂತೆ ಪುತ್ತೂರಿನಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಒಟ್ಟು ರೂ. 2.60 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.





ಸಾಮೆತ್ತಡ್ಕದಲ್ಲಿ ರೂ.1ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ನ.8ರಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ಪ್ರಾರಂಭಗೊಂಡು ಕಳೆದ ಆರು ವರ್ಷಗಳಿಂದ ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ವೈದ್ಯರು ಸೇರಿದಂತೆ ಪೂರ್ಣಪ್ರಮಾಣದಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದರ ನೂತನ ಕಟ್ಟಡಕ್ಕೆ 24 ಸೆಂಟ್ಸ್ ಜಾಗದ ಆವಶ್ಯಕತೆಯಿತ್ತು. ಜಾಗ ಮಂಜೂರಾಗಲು ಸಮಸ್ಯೆಯಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದು ಶಾಸಕನಾಗಿ ಆಯ್ಕೆಯಾದ ಆರೇ ತಿಂಗಳಲ್ಲಿ ಮಂಜೂರು ಮಾಡಿಸಿದ್ದೇನೆ. ಜಾಗ ಮಂಜೂರು, ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಈಗಾಗಲೇ ನಿರ್ಮಾಣವಾಗಬೇಕಿತ್ತು. ಈಗ ತಡವಾಗಿಯಾದರೂ ಶಿಲಾನ್ಯಾಸ ನೆರವೇರಿದೆ. ಮುಂದಿನ ಆರು ತಿಂಗಳಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡು ಲೋಕರ್ಪಾಣೆಗೊಂಡು ಜನರಿಗೆ ಆರೋಗ್ಯ ಸೇವೆ ದೊರೆಯಲಿದೆ ಎಂದು ಶಾಸಕರು ಹೇಳಿದರು.
ವಿಳಂಬಕ್ಕೆ ಶಾಸಕರ ಅಸಮಾಧಾನ
ಜಾಗ ಮಂಜೂರಾಗಿ, ಅನುದಾನ ಬಿಡುಗೆಯಾಗಿದ್ದರೂ ಶಿಲಾನ್ಯಾಸ ವಿಳಂಬವಾಗಿರುವುದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿನವರು ದುಡ್ಡು ವಸೂಲಿ ಮಾಡುತ್ತಿದ್ದರು. ಆಗ ಸರಿ ಮಾಡುತ್ತಿದ್ದರು. ಈಗ ಹಾಗಾಗುವುದಿಲ್ವಲ್ಲ. ಹೀಗಾಗಿ ಅವರಷ್ಟಕ್ಕೇ ಮಾಡುತ್ತಾ ಹೋಗುವುದು. ನಮ್ಮನ್ನು ಕರೆದರೂ, ಕರಿಯದಿದ್ದರೂ ಆಗುತ್ತದೆ. ಈ ಡಾಕ್ಟರ್ಗೆ ಅವರ ಕ್ಲಬ್ಗೆ ಬೇಕಾದರೆ ದಿನದ 24 ಗಂಟೆಯು ಕೆಲಸ ಮಾಡುತ್ತಾರೆ. ನಾವು ನಮ್ಮವರು ವೈದ್ಯರು ಅಂತ ಸುಮ್ಮನಿದ್ದೇವು. ಜಾಗವೂ ಮಂಜೂರಾಗಿದೆ. ಹಣವೂ ಬಿಡುಗಡಗೆಯಾಗಿದೆ. ಜಾಗ ಮಂಜೂರಾಗಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಇನ್ನೂ ಪ್ರಾರಂಬಿಸಿಲ್ಲ. ಒಂದೂವರೆ ವರ್ಷದಿಂದ ಏನೂ ಮಾಡುತ್ತಿದ್ದೀರಿ ಎಂದು ಶಾಸಕರು ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಬಾಕಿಯಿತ್ತು ಹೀಗಾಗಿ ವಿಳಂಬವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದಾಗ, ಸಮಸ್ಯೆಯಿದ್ದರೆ ನಮ್ಮ ಗಮನಕ್ಕೆ ತರಬೇಕು. ನಿಮಗೆ ಅರುವತ್ತು ವರ್ಷಕ್ಕೆ ನಿವೃತ್ತಿ, ನಮಗೆ ಐದು ವರ್ಷ. ಜನ ನಮ್ಮನ್ನು ಕೇಳುತ್ತಾರೆ. ಬಂದ ಅನುದಾನವನ್ನು ಬಳಸಿಕೊಂಡು ಜನರಿಗೆ ಅರ್ಪಣೆ ಮಾಡಬೇಕು. ಉಳಿದ ನಾಲ್ಕು ಕೇಂದ್ರಗಳಿಗೆ ಯಾಕೆ ಶಿಲಾನ್ಯಾಸ ನೆರವೇರಿಸಿಲ್ಲ. ಗ್ರಾಮದ ಜನತೆಗೆ ಏನಂತ ಗೊತ್ತಾಗಬೇಕು ಹಾಗಾಗಿ. ಗ್ರಾಮದವರನ್ನು ಸೇರಿಸಿಕೊಂಡು ಶೀಘ್ರವೇ ಶಿಲಾನ್ಯಾಸ ನೆರವೇರಿಸುವಂತೆ ಶಾಸಕರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಸಾಮೆತ್ತಡ್ಕ ಗೋಪಾಲಕೃಷ್ಣ ಮಾತನಾಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಜಾಗ, ಅನುದಾನವನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಾಮೆತ್ತಡ್ಕ ನಿವಾಸಿಗಳು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಕಟ್ಟಡ ಶೀಘ್ರ ಲೋಕಾರ್ಪಣೆಗೊಂಡು ಜನರಿಗೆ ಸೌಲಭ್ಯ ದೊರೆಯುವಂತಾಗಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉದ್ಯಮಿಗಳಾದ ಶಿವರಾಮ ಆಳ್ವ ಬಳ್ಳಮಜಲು, ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀದರ ರೈ, ಇಂಜಿನಿಯರ್ ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಶ್ಮಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಮೆಡಿಕಲ್ ಕಾಲೇಜು ಈಗಾಗಲೇ ಸಿಎಂ ಘೋಷಣೆ ಮಾಡಿದ್ದಾರೆ. ಅದಕ್ಕೆ ಟೆಂಡರ್ ಕರೆಯುವ ಕೆಲಸ ಆಗಲಿದೆ. ಇದರ ಕಡತವನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಇಲಾಖೆಗೆ ಬದಲಾವಣೆಗೆ ಮನವಿ ಮಾಡಲಾಗಿದೆ. ಬನ್ನೂರಿನ ಹೊಸ ಜಾಗದಲ್ಲಿ ಮಾಡಬೇಕು ಕಲ್ಪನೆಯಿದೆ. ಅಲ್ಲಿ ಫಿಝಿಯೋತೆರಫಿ, ನರ್ಸಿಂಗ್, ಆಯುರ್ವೇದಿಕ್ ಕಾಲೇಜಿಗೂ 25 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 30 ಬೆಡ್ನ ಆಯುರ್ವೇದಿಕ್ ಕಾಲೇಜು ನಿರ್ಮಾಣವಾಗಲಿದೆ. ಪುತ್ತೂರಿನ ಅಭಿವೃದ್ಧಿ ನಮ್ಮ ಸೇವೆ.
ಅಶೋಕ್ ಕುಮಾರ್ ರೈ, ಶಾಸಕರು









