





ಎಂಎಲ್‌ಎ, ಎಂಎಲ್‌ಸಿಗಳು ಚಳಿಗಾಲದ ಅಧಿವೇಶನಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬೇಕು
ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ


ಪುತ್ತೂರು: ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಗರ ಯೋಜನಾ ಪ್ರಾಧೀಕಾರ ಇರುವಂತೆ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಸರಿಪಡಿಸಲು ಪ್ರತ್ಯೇಕ ಪ್ರಾಧೀಕಾರ ರಚನೆ ಮಾಡಬೇಕು. ಇದರ ಹೊರತಾಗಿ ಪಂಚಾಯತ್‌ನ್ನು ನಗರ ಯೋಜನಾ ಪ್ರಾಧೀಕಾರಕ್ಕೆ ನೀಡಿ ಪಂಚಾಯತ್‌ನ ಹಕ್ಕನ್ನು ಮೊಟಕುಗೊಳಿಸಬಾರದು. ಪಂಚಾಯತ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರು, ವಿಧಾನ ಪರಿಷತ್ ಸದಸ್ಯರು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.





ಸಭೆಯು ನ.4ರಂದು ಅಧ್ಯಕ್ಷೆ ಗೀತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿಂಗಲ್ ಸೈಟ್‌ಗೂ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ ಪಂಚಾಯತ್‌ನ ಅಧಿಕಾರವನ್ನು ಮೊಟಕುಗೊಳಿಸಿ ನಗರ ಯೋಜನಾ ಪ್ರಾಧೀಕಾರಕ್ಕೆ ನೀಡಿರುವುದು ಶೇ.100ರಷ್ಟು ತಪ್ಪು. ಇದರಿಂದ ಗ್ರಾಮಸ್ಥರ ಹಣ, ಸಮಯ ವ್ಯರ್ಥವಾಗುತ್ತಿದೆ. ಇದು ಐಎಎಸ್ ಅಧಿಕಾರಿಗಳಿಂದಾಗಿರುವ ಎಡವಟ್ಟಾಗಿದೆ. ಅವರಿಗೆ ಜನ ಸಾಮಾನ್ಯರ ಕಷ್ಟ ಅರಿವಾಗುವುದಿಲ್ಲ. ಅರ್ಜಿ ಸಲ್ಲಿಸಿ 10 ತಿಂಗಳು ಕಳೆದರೂ ಪೂಡಾದಲ್ಲಿ ಆಗುವುದಿಲ್ಲ. ಅಲ್ಲಿ ಅಧಿಕಾರಿ ವಾರದಲ್ಲಿ ಒಂದೇ ದಿನ ಇದ್ದು ಯಾವುದೇ ಕಡತಗಳು ಆಗುವುದಿಲ್ಲ. ಅಲ್ಲಿ ಮಧ್ಯವರ್ತಿಗಳು ತುಂಬಿದ್ದಾರೆ. ಸಾರ್ವಜನಿಕರ ಕೆಲಸಗಳು ಆಗುವುದಿಲ್ಲ. ಮಧ್ಯವರ್ತಿಗಳ ಮುಖಾಂತರ ಹೋದಾಗ ಮಾತ್ರ ಆಗುತ್ತದೆ. ಹೀಗಾಗಿ ಈ ಹಿಂದಿನಂತೆ ಗ್ರಾಮ ಪಂಚಾಯತ್‌ಗೆ ಅವಕಾಶ ನೀಡಬೇಕು. ಕನಿಷ್ಠ 10 ಸೆಂಟ್ಸ್‌ಗಾದರೂ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲು ಪಂಚಾಯತ್‌ಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು. ಸದಸ್ಯ ಹರೀಶ್ ನಾಯಕ್ ಮಾತನಾಡಿ, ಗ್ರಾಮಾಂತರದ ಕೆಲಸಗಳನ್ನು ಪೂಡಾಕ್ಕೆ ನೀಡುವುದು ಸರಿಯಲ್ಲಿ. ನಗರದ ಸಮಸ್ಯೆಗಳಿಗೆ ನಗರ ಯೋಜನಾ ಪ್ರಾಧೀಕಾರವಿರುವಂತೆ ಗ್ರಾಮ ಪಂಚಾಯತ್‌ಗಳಿಗೆ ಪ್ರತ್ಯೇಕ ಪ್ರಾಧೀಕಾರ ರಚನೆ ಮಾಡಬೇಕು. ಅದರ ಮೂಲಕ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಪಂಚಾಯತ್ ವ್ಯಾಪ್ತಿಯ ಕೆಲಸಗಳಿಗೆ ಪಂಚಾಯತ್‌ನಲ್ಲಿ ಅಧಿಕಾರ ಇಲ್ಲದಿದ್ದರೆ ಸ್ಥಳೀಯ ಆಡಳಿತಗಳ ಆವಶ್ಯಕತೆ ಏನು? ಸ್ಥಳೀಯ ಸರಕಾರ ಎಂದೇ ಕರೆಯಲ್ಪಡುವ ಪಂಚಾಯತ್ ಅವಶ್ಯಕತೆ ಇದೆಯಾ? ಪಂಚಾಯತ್‌ನ್ನು ಬರ್ಖಾಸ್ತು ಮಾಡಲಿ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳ ಆಡಳಿತ ಅವಧಿ ಮುಗಿದು 4 ವರ್ಷ ಕಳೆದರೂ ಇನ್ನೂ ಚುನಾವಣೆ ನಡೆಯದೇ ಇದ್ದರೂ ಏನೂ ಆಗಿಲ್ಲ. ಅದೇ ರೀತಿ ಪಂಚಾಯತ್‌ಗೂ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಂದು ಹೋದರೂ ಸರಿಯಾಗದ ಆಡಳಿತ ವ್ಯವಸ್ಥೆ:
ಫ್ಲಾಟೀಂಗ್ ಅಗದೇ ಬಹಳಷ್ಟು ಕಡತಗಳು ಪೆಂಡಿಂಗ್ ಇತ್ತು. ಮುಖ್ಯ ಮಂತ್ರಿಗಳು ಬಂದು ಹಕ್ಕು ಪತ್ರ ನೀಡುವುದಾಗಿ ಮಾಹಿತಿಯಿತ್ತು. ಹೀಗಾಗಿ ಅಧಿಕಾರಿಗಳು ಕೂಡಲೇ ಎಲ್ಲಾ ಕಡತ ಸಿದ್ದಪಡಿಸಿದ್ದರು. ಮುಖ್ಯಮಂತ್ರಿಗಳು ಬಂದು ಹೋದ ಬಳಿಕ ಈ ಹಿಂದಿನಂತೆ ಆಗಿದೆ. ನಂತರ ಕಡತಗಳು ಮೊದಲಿನಂತೆ ಆಗಿದೆ. ಅಧಿಕಾರಿಗಳಿಗೆ ಇಚ್ಚಾಶಕ್ತಿಯಿದ್ದರೆ ಮಾಡಬಹುದು. ಅಧಿಕಾರಿಗಳ ಸಮಸ್ಯೆಗಳಿಂದಲೇ ಕಡತ ಪೆಂಡಿಂಗ್ ಆಗುವುದು. ಅಧಿಕಾರಿಗಳನ್ನು ಬೆಂಡೆತ್ತಿದರೆ ಮಾತ್ರ ಸರಿಪಡಿಸಲು ಸಾಧ್ಯ. ಇಲ್ಲದಿದ್ದರೆ ಕಡತಗಳು ಪೆಂಡಿಂಗ್ ಆಗುತ್ತಲೇ ಇರುತ್ತದೆ ಎಂದು ಆರೋಪಿಸಿದ ಸದಸ್ಯರು ಸಿಂಗಲ್ ಸೈಟ್‌ಗೆ ವಿನ್ಯಾಸ ನಕ್ಷೆ, 9/11, ಅಕ್ರಮ ಸಕ್ರಮಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಪಂಚಾಯತ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಂಡಿಸಿ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡುವುದಾಗಿ ನಿರ್ಣಯಕೈಗೊಳ್ಳಲಾಗಿದೆ.
ಕಪ್ಪ ಕಾಣಿಕೆ ನೀಡಿದವರಿಗೆ ಅಕ್ರಮ-ಸಕ್ರಮ:
ನಗರ ಸಭೆಯು ವಿಸ್ತರಣೆಯಾಗುವ ಸಂದರ್ಭದಲ್ಲಿ ಅರ್ಯಾಪು, ಕುರಿಯ ಗ್ರಾಮವು ನಗರ ಸಭಾ ವ್ಯಾಪ್ತಿಗೆ ಬರಲಿದೆ ಎಂದು ಹೇಳಿ ಇಲ್ಲಿ 94ಸಿ, ಅಕ್ರಮ-ಸಕ್ರಮಗಳು ಮಂಜೂರಾಗುತ್ತಿಲ್ಲ. ಈ ನಿಯಮವನ್ನು ವಿಸ್ತರಣೆಯಾದ ಬಳಿಕ ಜಾರಿಯಾಗಲಿ. ಆಗುವ ಮೊದಲೇ ನಿಯಮ ಮಾಡಿರುವುದು ಸರಿಯಲ್ಲ. ಹೀಗಿದ್ದರೂ 2018 ಮತ್ತು 2023ರಲ್ಲಿ ಅಕ್ರಮ ಸಕ್ರಮದಲ್ಲಿ ಹಕ್ಕುಪತ್ರ ನೀಡಲಾಗಿದೆ. ಬಡವರ ಕಡತ ಇದೆ ಅದೆಲ್ಲಾ ಆಗುವುದಿಲ್ಲ. ಶ್ರೀಮಂತರ ಕಡತಗಳು ಮಾತ್ರ ಆಗುತ್ತಿದೆ. ಕಪ್ಪ ಕಾಣಿಕೆ ನೀಡಿದವರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾಗುತ್ತಿದ್ದು ಗ್ರಾಮದಲ್ಲಿ ಎಷ್ಟು ಆಗಿದೆ ಎಂಬ ಪಟ್ಟಿ ನೀಡುತ್ತೇನೆ. ಕಾನೂನು ಎಲ್ಲರಿಗೂ ಒಂದೇ ರೀತಿಯಿರುವುದಾದರೆ ಹೀಗಾಲೇ ಹಕ್ಕು ಪತ್ರ ನೀಡಿರುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ನೀಡಬೇಕು. ಬಡವರಗೊಂದು ಶ್ರೀಮಂತರಿಗೊಂದು ಕಾನೂನು ಮಾಡಬಾರದು. ಎಲ್ಲಾ ಅಧಿಕಾರಿಗಳು ಒಂದೇ ಕಾನೂನು ಆಗಿದ್ದು ಅವರು ಹಕ್ಕುಪತ್ರ ನೀಡಬೇಕು ಎಂದು ಸದಸ್ಯ ಪುರುಷೋತ್ತಮ ರೈ ಆಗ್ರಹಿಸಿದರು. ನಗರದ ಕಾನೂನನ್ನು ಗ್ರಾಮಾಂತರಕ್ಕೆ ಅನ್ವಯ ಮಾಡುವುದು ಸರಿಯಲ್ಲ. ಇಲ್ಲಿನ ವಾಸ್ತವವನ್ನು ನೋಡಿಕೊಂಡು ನೀಡಬೇಕು ಎಂದು ಸದಸ್ಯ ಹರೀಶ್ ನಾಯಕ್ ಹೇಳಿದರು. ಅಕ್ರಮ-ಸಕ್ರಮ ಹಾಗೂ 94 ಸಿ ಯೋಜನೆಯಲ್ಲಿ ಹಕ್ಕು ಪತ್ರ ನೀಡಲು ಇರುವ ನಿಯಮವನ್ನು ಸರಳೀಕರಣಗೊಳಿಸುವಂತೆ ಶಾಸಕರಿಗೆ ಮನವಿ ಮಾಡಲಾಗುವುದು. ಅಲ್ಲದೆ ಆರ್ಯಾಪು ಗ್ರಾ.ಪಂ ವ್ಯಾಪ್ತಿಯಲ್ಲಿ 94 ಸಿಯಲ್ಲಿ ಹಕ್ಕು ಪತ್ರ ನೀಡಲೇಬೇಕು ಎಂದು ಪುರುಷೋತ್ತಮ ರೈಯವರು ಒತ್ತಾಯಿಸಿದರು.
ಜಿಲ್ಲೆಗೆ ಅನುಗುಣವಾಗಿ ಪ್ರತ್ಯೇಕ ನಿಯಮ ಜಾರಿ ಮಾಡಲಿ:
9/11 ಬಗ್ಗೆ ಸರಕಾರದಿಂದ ಬಂದಿರುವ ಹೊಸ ಸುತ್ತೋಲೆಯನ್ನು ಪಿಡಿಓ ಅವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ, 9/11ನ ಹೊಸ ಸುತ್ತೋಲೆಯಂತೆ ನಿಯಮ ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇದರಿಂದ ಪಂಚಾಯತ್‌ನ ಹಕ್ಕನ್ನು ಮತ್ತಷ್ಟು ಮೊಟಕುಗೊಳಿಸಿದ್ದಾರೆ. ಪಂಚಾಯತ್ ಮೂಲಕ ಈ ಹಿಂದೆ 25 ಸೆಂಟ್ಸ್ ತನಕ ಲೈಸನ್ಸ್ ನೀಡಲು ಅವಕಾಶವಿತ್ತು. ಈಗಿನ ಹಕ್ಕನ್ನು ಕಸಿದುಕೊಂಡು ಪೂಡಾಕ್ಕೆ ನೀಡಿದ್ದಾರೆ. ಕನಿಷ್ಟ 10 ಸೆಂಟ್ಸ್ ತನಕವಾದರೂ ಲೈಸನ್ಸ್ ನೀಡಲು ಪಂಚಾಯತ್‌ನಿಂದ ಅನುಮತಿ ನೀಡಬೇಕು. ಯಾರೋ ಒಬ್ಬ ಮಾಡಿದ ತಪ್ಪಿಗಾಗಿ ಇಡೀ ರಾಜ್ಯವನ್ನೇ ಬಲಿಕೊಡುವುದಲ್ಲ. ತಪ್ಪು ಮಾಡಿದವರನ್ನು ಸರಿಪಡಿಸಬೇಕು. ಇದರಿಂದಾಗಿ ಇಡೀ ರಾಜ್ಯದ ಜನತೆಗೆ ಸಂಕಷ್ಟ ಉಂಟಾಗಿದೆ. ಯಾವುದೇ ಕಾನೂನು ಜ್ಯಾರಿ ಮಾಡುವಾಗ ಇಡೀ, ರಾಜ್ಯ ಅಥವಾ ದೇಶಕ್ಕೆ ಒಂದೇ ರೀತಿ ಮಾಡುವುದಲ್ಲ. ಕೆಲವು ಕಾನೂನುಗಳನ್ನು ಆಯಾ ಜಿಲ್ಲೆಗೆ ಅನುಗುಣವಾಗಿ ಪ್ರತ್ಯೇಕವಾಗಿ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಒಬ್ಬ ಶಾಸಕನಿಗೆ ನೀಡುವ ಅನುದಾನದ ಶೇ.50ರಷ್ಟನ್ನು ರಾಜ್ಯದ ಆರು ಸಾವಿರ ಪಂಚಾಯತ್‌ಗಳಿಗೆ ನೀಡಿ:
ಕುಡಿಯುವ ನೀರಿನ ಶುಲ್ಕ ಸಂಗ್ರಹಕ್ಕೆ ಬಾಕಿಯಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ವಿವಿಧ ಅಭಿಪ್ರಾಯಗಳ ವ್ಯಕ್ತವಾಯಿತು. ಕೆಲವರು ನೊಟೀಸ್ ನೀಡಿ ಕಡಿತಗೊಳಿಸುವಂತೆ ತಿಳಿಸಿದರೆ ಇನ್ನು ಕೆಲವರ ಇನ್ನು ಮೂರು ತಿಂಗಳ ಅವಧಿಯಿರುವುದು ನೀರಿನ ಸಂಪರ್ಕ ಕಡಿತ ಮಾಡುವುದು ಈಗಬೇಡ ಎಂದು ತಿಳಿಸಿದರು. ಸರಕಾರವೇ ಕುಡಿಯುವ ನೀರನ್ನು ಉಚಿತವಾಗಿ ನೀಡಬೇಕು. ಉಚಿತ ಯೋಜನೆಗಳಿಗೆ ಸರಕಾರ ರೂ.52 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ರಾಜ್ಯದ ಆರು ಸಾವಿರ ಪಂಚಾಯತ್‌ಗಳ ಕುಡಿಯುವ ನೀರಿನ ಪಂಪ್ ಸೆಟ್‌ಗಳ ವಿದ್ಯುತ್ ಶುಲ್ಕ ವಾರ್ಷಿಕ ರೂ.6ಸಾವಿರ ಕೋಟಿಯಾಗಿದ್ದು ಅದನ್ನು ಸರಕಾರವೇ ಭರಿಸಿದಾಗ ರಾಜ್ಯದಲ್ಲಿರುವ ಎಲ್ಲಾ ಆರು ಸಾವಿರ ಗ್ರಾಮ ಪಂಚಾಯತ್‌ಗಳು ಋಣ ಮುಕ್ತವಾಗಲಿದೆ. ಹೀಗಿದ್ದರೂ ಇದರ ಶೇ.50ರಷ್ಟು ಅಂದರೆ ರೂ.3ಸಾವಿರ ಕೋಟಿ ಅನುದಾನ ನೀಡಿದರೂ ಪಂಚಾಯತ್‌ಗಳು ಋಣಮುಕ್ತವಾಗಲಿದೆ. ಅಲ್ಲದೆ ಕೃಷಿಗೆ ಉಚಿತ ವಿದ್ಯುತ್ ನೀಡುತ್ತಿದೆ ಅದೇ ಮಾದರಿಯಲ್ಲಿ ಕುಡಿಯುವ ನೀರಿನ ಸಂಪರ್ಕವನ್ನು ಸರಕಾರ ಉಚಿತವಾಗಿ ನೀಡಲಿ. ಒಬ್ಬ ಶಾಸಕನಿಗೆ ನೀಡುವ ಅನುದಾನದಷ್ಟು ಮೊತ್ತವನ್ನು ರಾಜ್ಯ ಆರು ಸಾವಿರ ಗ್ರಾಮ ಪಂಚಾಯತ್‌ಗಳಿಗೆ ನೀಡಿದರೆ ಪಂಚಾಯತ್ ಮೂಲಕ ಕುಡಿಯುವ ನೀರನ್ನು ಉಚಿತವಾಗಿ ನೀಡಬಹುದು ಎಂದು ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ, ವಸಂತ, ನೇಮಾಕ್ಷ ಸುವರ್ಣ, ಹರೀಶ್ ನಾಯಕ್ ಅಭಿಪ್ರಾಯ ತಿಳಿಸಿದರು.
ವಾರ್ಡ್‌ಗೊಬ್ಬ ಸದಸ್ಯರನ್ನು ಸೀಮಿತಗೊಳಿಸಿ:
ಸೋಲಾರ್ ದೀಪ ಹಾಗೂ ಹೊಲಿಗೆ ಯಂತ್ರಗಳ ಫಲಾನುಭವಿಗಳ ಆಯ್ಕೆಗೆ ಸಂಭಂದಿಸಿದ ಚರ್ಚೆ ನಡೆಯುತ್ತಿರುವಾಗ ನಮ್ಮಲ್ಲಿ ವಾರ್ಡ್ 3-4 ಮಂದಿ ಸದಸ್ಯರಿರುತ್ತಾರೆ. ಆದರೆ ಕೇರಳದಲ್ಲಿ ಗ್ರಾಮ ಪಂಚಾಯತ್‌ನ ವಾರ್ಡ್‌ಗಳಿಗೆ ಒಬ್ಬ ಸದಸ್ಯರಿದ್ದಾರೆ. ಕರ್ನಾಟಕದಲ್ಲಿಯೂ ಅದೇ ಮಾದರಿ ಜಾರಿ ಮಾಡಿ, ವಾರ್ಡ್‌ಗಳ ಸಂಖ್ಯೆ ಏರಿಕೆ ಮಾಡಿ ವಾರ್ಡ್‌ಗೆ ಒಬ್ಬ ಸದಸ್ಯರಿಗೆ ಅವಕಾಶ ನೀಡಬೇಕು. ಪಕ್ಷದ ಚಿಹ್ನೆಯಡಿಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದರ ಬಗ್ಗೆ ರಾಜ್ಯ ಚುನಾವಣಾ ಅಯೋಗಕ್ಕೆ ಕಳುಹಿಸುವುದಾಗಿ ತೀರ್ಮಾನಿಸಲಾಯಿತು.
ತಹಶೀಲ್ದಾರ್ ಕಾರ್ಯವೈಖರಿ ಬಗ್ಗೆ ಆಕ್ರೋಶ:
ಈಗಿನ ತಹಶೀಲ್ದಾರ್‌ರಿಂದ ಯಾವುದೇ ಕೆಲಸ ಆಗುವುದಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರಗಳ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ತಿದ್ದುಪಡಿಗಳೂ ಆಗುವುದಿಲ್ಲ. ಒಂದೇ ಒಂದು ಕಡತ ತಹಶೀಲ್ದಾರ್ ಹಂತದಲ್ಲಿ ಮುಂದುವರಿಯುವುದಿಲ್ಲ ಎಂದು ಸದಸ್ಯರು ತಹಶೀಲ್ದಾರ್ ಕಾರ್ಯವೈಖರಿಯ ಬಗ್ಗೆ ಆಕ್ರೊಷ ವ್ಯಕ್ತಪಡಿಸಿದರು. ಪುತ್ತೂರಿಗೆ ಖಾಯಂ ತಹಶೀಲ್ದಾರ್ ಇಲ್ಲದೆ ಬಹಳಷ್ಟು ಸಮಯಗಳೇ ಕಳೆದಿದೆ. ಹೀಗಾಗಿ ಶಾಶ್ವತ ತಹಶೀಲ್ದಾರ್ ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು.
ನನ್ನನ್ನು ಎಂಎಲ್‌ಸಿ ಮಾಡಿ;
ಕುಡಿಯುವ ನೀರಿಗೆ ಉಚಿತ ವಿದ್ಯುತ್ ನೀಡಬೇಕು ಎಂಬ ವಿಚಾರಗಳ ಚರ್ಚೆಗಳು ನಡೆಯುತ್ತಿರುವಾಗ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ, ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ. ನಾನು ಜಾರಿಗೊಳಿಸುವಂತೆ ಸದನದಲ್ಲಿ ಬಾವಿಗಿಳಿದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಸದಸ್ಯರಾದ ವಸಂತ ಶ್ರೀದುರ್ಗಾ, ದೇವಕಿ, ಸರಸ್ವತಿ ಕೆ., ಶ್ರೀನಿವಾಸ ರೈ, ಸುಬ್ರಹ್ಮಣ್ಯ ಬಲ್ಯಾಯ, ಪೂರ್ಣಿಮಾ ರೈ, ಪವಿತ್ರ ರೈ ಬಿ., ಪವಿತ್ರ ಎನ್., ಯತೀಶ್ ದೇವ, ರಶೀದಾ ಬಿ., ರೇವತಿ ಬಿ.ಹೆಚ್., ನೇಮಾಕ್ಷ ಸುವರ್ಣ, ಕಲಾವತಿ, ನಾಗೇಶ್ ಎಂ., ಯಾಕೂಬ್ ಯಾನೆ ಸುಲೈಮಾನ್ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ನಾಗೇಶ್ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.










