





ಉಪ್ಪಿನಂಗಡಿ: ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಚರಂಡಿಯಲ್ಲಿ ತ್ಯಾಜ್ಯ ಮತ್ತು ಮಲೀನ ನೀರು ನಿಂತಿದ್ದು ವಿದ್ಯಾರ್ಥಿಗಳ, ಶಿಕ್ಷಕರ ಆರೋಗ್ಯಕ್ಕೆ ಮಾರಕವಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಶಾಲಾ ಎಸ್ಡಿಎಂಸಿ ನಿಯೋಗವು ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ನೀಡಿದೆ.


ಶಾಲಾ ಹಿಂಬದಿಯಲ್ಲಿರುವ ಚರಂಡಿಯಲ್ಲಿ ಮಲೀನ ನೀರು ಶೇಖರಣೆಗೊಳ್ಳುತ್ತಿದ್ದು, ಇದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿವೆ. ಶಾಲಾ ಪರಿಸರವಿಡೀ ದುರ್ವಾಸನೆಯಿಂದ ಕೂಡಿದ್ದು, ಮಕ್ಕಳ ಪಾಠಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ.ಗೆ ಮನವಿ ಮಾಡಿದರೂ ಯಾವುದೇ ಶಾಶ್ವತ ಕ್ರಮವಾಗಿಲ್ಲ. ಆದ್ದರಿಂದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಹಕ್ಕನ್ನು ಕಾಪಾಡುವುದಕ್ಕಾಗಿ ಇದಕ್ಕೆ ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಚರಂಡಿಯನ್ನು ತಕ್ಷಣ ಶುದ್ಧಗೊಳಿಸಿ ನಿಯಮಿತ ನಿರ್ವಹಣೆ ಕೈಗೊಳ್ಳಬೇಕು. ಚರಂಡಿಯನ್ನು ಮುಚ್ಚುವ ಅಥವಾ ಶಾಶ್ವತ ರೀತಿಯಲ್ಲಿ ಸುಧಾರಿಸುವ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯ ಮೂಲಕ ನಿಯಮಿತ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಉಪ್ಪಿನಂಗಡಿಯಲ್ಲಿ ಸಾವಯವ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಿತ ಇಲಾಖೆಗೆ ತಕ್ಷಣದ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.





ಮನವಿ ನೀಡಿದ ನಿಯೋಗದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯರಾದ ಕಲಂದರ್ ಶಾಫಿ ನೆಕ್ಕಿಲಾಡಿ, ರಾಜೇಶ್, ತಾರನಾಥ, ಕೈರುನ್ನೀಸಾ, ಅಕ್ಷತಾ, ಮಮತ, ರಝೀನ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಮನವಿ ಸ್ವೀಕರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು.










