





ಆಲಂಕಾರು:ನಿರ್ಗತಿಕರಾಗಿ ಆಲಂಕಾರು ಪೇಟೆಯಲ್ಲಿ ತಿರುಗಾಡುತ್ತಿದ್ದ ವೃದ್ಧ ಮಹಿಳೆಯರಿಬ್ಬರ ಪೈಕಿ ಓರ್ವರನ್ನು ಮಂಗಳೂರು ಪಚ್ಚನಾಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದ್ದರೆ, ಮತ್ತೊಬ್ಬರನ್ನು ಮೊಮ್ಮಗನ ಕೋರಿಕೆಯಂತೆ ಅವರ ಮನೆಗೆ ಕಳುಹಿಸಲಾಗಿದೆ.



ಕೊಳಕು ಬಟ್ಟೆಯೊಂದಿಗೆ, ಹೊಟ್ಟೆಗೆ ಸರಿಯಾದ ಅನ್ನ ಆಹಾರ ಇಲ್ಲದೆ ಸೊರಗಿದ ದೇಹದೊಂದಿಗೆ ಹೊಟೇಲ್, ಬೇಕರಿಗಳ ಬಳಿ ಕಾದು ಕುಳಿತುಕೊಳ್ಳುತ್ತಿದ್ದ ಎರಡು ಬಡಪಾಯಿ ಜೀವಗಳು ಆಲಂಕಾರು ಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರ್ಗತಿಕರಾಗಿ ತಿರುಗುತ್ತಿದ್ದು, ಅವರನ್ನು ಆಶ್ರಮಕ್ಕೆ ಇಲ್ಲವೇ ಸಂಬಂಧಿಕರ ಜೊತೆ ಸೇರಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿತ್ತು. ಈ ಬಗ್ಗೆ ಆಲಂಕಾರು ಗ್ರಾ.ಪಂ.ಗೆ ಸಾರ್ವಜನಿಕರು ದೂರನ್ನು ಕೂಡಾ ನೀಡಿದ್ದರು.ಈ ಬಗ್ಗೆ ಕಂದಾಯ ಇಲಾಖೆಯವರು ಮತ್ತು ಆಲಂಕಾರು ಗ್ರಾ.ಪಂ.ನವರು ವೃದ್ದೆಯರ ಮನೆಯವರನ್ನು ಸಂಪರ್ಕಿಸಿ ಇವರುಗಳನ್ನು ಪೇಟೆಗೆ ಬಿಡದಂತೆ ತಿಳಿಸಲಾಗಿತ್ತು.





ಸಂತ್ರಸ್ತರನ್ನು ಆಶ್ರಮಕ್ಕೆ ಸೇರಿಸುವ ಉದ್ದೇಶದಿಂದ ಅವರ ಮಾಹಿತಿ ಸಂಗ್ರಹಿಸಿ ನೀಡುವಂತೆ ಕಡಬ ತಹಶೀಲ್ದಾರ್ ಗ್ರಾ.ಪಂಗೆ ಸೂಚಿಸಿದ್ದರು.ಹಳೆನೇರಂಕಿ ಗ್ರಾಮದ ಅರಟಿಗೆ ನಿವಾಸಿ ಹೊನ್ನಪ್ಪ ಗೌಡರ ಪತ್ನಿ ಗುಬ್ಬಿ ಯಾನೆ ಹೊನ್ನಮ್ಮರವರನ್ನು ಮಂಗಳೂರು ಪಚ್ಚನಾಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರಕ್ಕೆ ವಾಹನದ ಮೂಲಕ ಇಲಾಖೆಯ ಅಧಿಕಾರಿಗಳ ಜೊತೆ ಆಲಂಕಾರಿನಿಂದ ಕಳಿಸಲಾಗಿದೆ.
ಅಜ್ಜಿಯನ್ನು ನಾನು ನೋಡಿಕೊಳ್ತೇನೆ
ಆಲಂಕಾರು ಗ್ರಾಮದ ನೆಕ್ಕರೆ ನಡುಗುಡ್ಡೆ ನಿವಾಸಿ ಚೋಮು ಎಂಬವರನ್ನೂ ಆಶ್ರಮಕ್ಕೆ ಕಳುಹಿಸಲೆಂದು ವಾಹನಕ್ಕೆ ಹತ್ತಿಸುವ ಸಂದರ್ಭದಲ್ಲಿ ಅವರ ಮೊಮ್ಮಗ ಬಂದು, ‘ಅಜ್ಜಿಯನ್ನು ನಾನು ನೋಡಿಕೊಳ್ತೇನೆ. ನಿರಾಶ್ರಿತರ ಕೇಂದ್ರಕ್ಕೆ ಕಳಿಸುವುದು ಬೇಡ’ಎಂದು ಕೇಳಿಕೊಂಡರು. ಮತ್ತೆ ವೃದ್ದೆಯನ್ನು ಅನಾಥವಾಗಿ ಆಲಂಕಾರು ಪೇಟೆಗೆ ಬಿಟ್ಟರೆ ಗ್ರಾ.ಪಂ ವತಿಯಿಂದ ಪೊಲೀಸ್ ಕೇಸು ದಾಖಲಿಸುವುದಾಗಿ ಮೊಮ್ಮಗನಿಗೆ ಎಚ್ಚರಿಕೆ ನೀಡಿದ ಬಳಿಕ ಚೋಮು ಅವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಕೇಂದ್ರದ ಅಧಿಕ್ಷಕ ಲಕ್ಷ್ಮಣ ಹಾಗೂ ಸಿಬ್ಬಂದಿ ವರ್ಗ ಮತ್ತು ಆಲಂಕಾರು ಗ್ರಾಮ ಪಂಚಾಯತ್ ಅಭಿವೃದಿ ಅಧಿಕಾರಿ ಸುಜಾತ, ಗ್ರಾ.ಪಂ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.










