ಅಶೋಕ ಜನಮನ: ಉಡುಗೊರೆ ಸಿಗದವರಿಗೆ ಗ್ರಾಮಗಳಿಗೆ ತೆರಳಿ ಉಡುಗೊರೆ ವಿತರಣೆ

0

ನ.19ಕ್ಕೆ ಕೋಡಿಂಬಾಡಿ, ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಚಾಲನೆ-ಅಶೋಕ್ ರೈ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ಸ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ಅ.20ರಂದು ನಡೆದ ‘ಅಶೋಕ ಜನಮನ-2025’ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಉಡುಗೊರೆ ಸಿಗದವರಿಗೆ ಆಯಾ ಗ್ರಾಮಗಳಿಗೇ ತೆರಳಿ ಉಡುಗೊರೆ ವಿತರಣೆ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.


ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಂಧುಗಳಿಗೆ ವಸ್ತ್ರ ಹಾಗೂ ಉಡುಗೊರೆ ಸಿಗದ ಹಿನ್ನೆಲೆಯಲ್ಲಿ, ಕೋಡಿಂಬಾಡಿಯಲ್ಲಿ ನ.15ರಂದು ನಡೆದ ಟ್ರಸ್ಟ್‌ನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಶೋಕ ಜನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನ ಸೇರಿದ್ದರಿಂದ ಹಾಗೂ ವಿಪರೀತ ಮಳೆಯ ಕಾರಣಕ್ಕೆ, ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿ ಉಡುಗೊರೆ ಪಡೆಯಲು ಸಾಧ್ಯವಾಗದೆ ಮರಳಿದ್ದರು.ಹಲವು ಮಂದಿ ಸುಮಾರು ಹೊತ್ತಿನ ವರೆಗೆ ಕಾದರೂ ಜನಸಂದಣಿಯ ನಡುವೆ ಉಡುಗೊರೆ ಪಡೆಯಲು ಸಾಧ್ಯವಾಗದೆ ಇರುವ ಕಾರಣ ಇದೀಗ ಪ್ರತೀ ಗ್ರಾಮಕ್ಕೆ ತೆರಳಿ ಉಡುಗೊರೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ನ.19ರಂದು ಪ್ರಾರಂಭಿಕ ಹಂತದಲ್ಲಿ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಉಡುಗೊರೆ ವಿತರಿಸಲು ತೀರ್ಮಾನ ಮಾಡಲಾಗಿದೆ ಎಂದವರು ತಿಳಿಸಿದರು.

ಟ್ರಸ್ಟ್‌ನ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು,ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಮೋನಪ್ಪ ಗೌಡ, ನ್ಯಾಯವಾದಿ ಕುಮಾರನಾಥ ಎಸ್, ಶಿವಪ್ರಸಾದ್ ಕೋಡಿಂಬಾಡಿ, ಯೋಗೀಶ್ ಸಾಮಾನಿ, ಸಂತೋಷ್, ಪದ್ಮನಾಭ ಪಕ್ಕಳ, ಬಾಬು ನೆಕ್ಕರೆ, ಕೆ.ಕೇಶವ ಗೌಡ, ಉಮೇಶ್ ಕಠಾರ, ಪ್ರಭಾಕರ ಸಾಮಾನಿ, ರಾಮಣ್ಣ ಪಿಲಿಂಜ, ಕೃಷ್ಣಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು.

ಅಶೋಕ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನ ಮತ್ತು ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿಗೆ ಉಡುಗೊರೆ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನಾನು ವಿಷಾದವನ್ನೂ ವ್ಯಕ್ತಪಡಿಸಿ, ಉಡುಗೊರೆ ಸರಿಯಾಗಿ ವಿತರಣೆಯಾಗದ ಕಾರಣ ಗ್ರಾಮ ಗ್ರಾಮಕ್ಕೆ ತೆರಳಿ ಉಡುಗೊರೆ ವಿತರಣೆ ಮಾಡುವುದಾಗಿ ಹೇಳಿದ್ದೆ.ಇದೀಗ ಆರಂಭಿಕವಾಗಿ ನ.19ಕ್ಕೆ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರಿಗೆ ಉಡುಗೊರೆ ವಿತರಿಸಲು ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮದಲ್ಲೂ ಉಡುಗೊರೆ ವಿತರಣೆ ಮಾಡಲಿದ್ದೇವೆ.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಡುಗೊರೆ ಪಡೆದುಕೊಳ್ಳುವಂತೆ ವಿನಂತಿ ಮಾಡುತ್ತಿದ್ದೇನೆ.
ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು


ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ‘ಅಶೋಕ ಜನಮನ’ದಲ್ಲಿ ಉಡುಗೊರೆ ವಿತರಣೆಯಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಉಡುಗೊರೆ ಸಿಗದ ಗ್ರಾಮಸ್ಥರಿಗೆ ಪ್ರತೀ ಗ್ರಾಮಕ್ಕೆ ತೆರಳಿ ಉಡುಗೊರೆ ವಿತರಣೆ ಮಾಡಲಿದ್ದು ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ
ಸುದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ರೈ ಚಾರಿಟೇಬಲ್ ಟ್ರಸ್ಟ್

ವಿತರಣೆ ಹೇಗೆ?
ಈ ಉಡುಗೊರೆ ವಿತರಣೆಗೆ ಯಾವುದೇ ಜಾತಿ, ಧರ್ಮ, ಪಕ್ಷ, ಹಾಗೂ ಬಡವ-ಬಲ್ಲಿದ ಎಂಬ ನಿರ್ಬಂಧವಿರುವುದಿಲ್ಲ. ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರನ್ನು ಹೊರತುಪಡಿಸಿ ಬೇರೆ ಗ್ರಾಮದವರಿಗೆ ಇಲ್ಲಿ ಅವಕಾಶವಿಲ್ಲ. ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ಓಟರ್ ಐಡಿಯನ್ನು ಕಡ್ಡಾಯವಾಗಿ ತರಬೇಕಾಗಿದೆ. ಗ್ರಾಮದ ಪ್ರತೀ ಮನೆಯ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ಸದಸ್ಯರಿಗೂ ಅವಕಾಶವಿರುತ್ತದೆ. ಕಾರ್ಯಕ್ರಮದ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದವರಿಗೆ ಮಾತ್ರ ಅವಕಾಶವಿರುತ್ತದೆ.

LEAVE A REPLY

Please enter your comment!
Please enter your name here