





ಪುತ್ತೂರು:ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಮಂಗಳೂರು ಇದರ ಉದ್ಘಾಟನೆ ಹಾಗೂ ಭಾರತದ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಹೆಚ್ ರಾಜೇಶ್ ಪ್ರಸಾದ್ ಅದ್ಧೂರಿ ಅಭಿನಂದನೆಯು ನ.16ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ಸನ್ಮಾನಿತರನ್ನು ಹಾರಾರ್ಪಣೆ ಮಾಡಿ, ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಪೂರ್ಣಕುಂಬದಿಂದ ಸ್ವಾಗತಿಸಿ, ಸಭಾಂಗಣದೊಲಗೆ ಕರೆತರಲಾಯಿತು.


ಬಳಿಕ ನಡೆದ ಕಾರ್ಯಕ್ರಮದಲ್ಲಿ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಹೆಚ್ ರಾಜೇಶ್ ಪ್ರಸಾದ್ ಅವರನ್ನು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದಿಂದ ಅದ್ಧೂರಿಯಾಗಿ ಅಭಿನಂದಿಸಲಾಯಿತು. ನಂತರ ಪುತ್ತೂರು ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ, ಯುವ ವೇದಿಕೆ, ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ವೇದಿಕೆ ಪುತ್ತೂರು, ಲ್ಯಾಂಪ್ಸ್ ಸೊಸೈಟಿ ಪುತ್ತೂರು, ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘ, ಲ್ಯಾಂಪ್ಟ್ ಸೊಸೈಟಿ ಸುಳ್ಯ, ಮರಾಟಿ ಸಮಾಜ ಸೇವಾ ಸಂಘ ನೆಲ್ಯಾಡಿ, ಉಪ್ಪಿನಂಗಡಿ, ಪಡುಮಲೆ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮೂಡಬಿದರೆ ಸೇರಿದಂತೆ ವಿವಿಧ ಜಿಲ್ಲೆಗಳು, ತಾಲೂಕು ಸಂಘಗಳಿಂದ ತಂಡೋಪ ತಂಡವಾಗಿ ಪ್ರತ್ಯೇಕ, ಪ್ರತ್ಯೇಕವಾಗಿ ಆಗಮಿಸಿದ ಸಮಾಜ ಬಾಂಧವರು ಪೇಟ ತೊಡಿಸಿ, ಶಾಲು, ಹೂ ಹಾರ ಹಾಕಿ ಫಲಪುಷ್ಪ ನೀಡಿ ರಾಜೇಶ್ ಪ್ರಸಾದ್ ಅವರನ್ನು ಅಭಿನಂದಿಸಿದರು.






ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮರಾಟಿ ಸಂಘಕ್ಕೆ ಐದು ಎಕರೆ ಜಾಗ ಮಂಜೂರು ಮಾಡುವಂತೆ ಸಂಘದಿಂದ ಮನವಿ ಮಾಡಿದ್ದು, ಜಾಗ ಎಲ್ಲಿದೆ ಎಂದು ಗುರುತಿಸಿ, ಅದರ ಆರ್ಟಿಸಿ ನೀಡಿದರೆ ಅಂತನ ಜಾಗವನ್ನು ಮಂಜೂರುಗೊಳಿಸುವ ಜವಾಬ್ದಾರಿ ನನ್ನದು. ಈ ಹಿಂದೆ ಬಂಟರ ಸಂಘಕ್ಕೆ ಯಾರೂ ಜಾಗ ಮಂಜೂರು ಮಾಡಿರಲ್ಲಿ. ನಾನು ಬಂದ ಬಳಿಕ ಮಂಜೂರು ಮಾಡಲಾಗಿದೆ. ಕುಲಾಲ ಸಮಾಜಕ್ಕೆ ಬೆಂಗಳೂರಿನಲ್ಲಿ ಜಾಗ ಮಂಜೂರುಗೊಳಿಸಲಾಗಿದೆ.
ಮರಾಟಿ ಸಮಾಜಕ್ಕೆ ಬೆಂಗಳೂರಿನಲ್ಲಿಯೂ ಜಮೀನಿಗೆ ಮನವಿ ಮಾಡಿದ್ದು ಬಿಡಿಎ ಮೂಲಕ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು. ಧಾರ್ಮಿಕ ಕೇಂದ್ರ ಗಳನ್ನು ಅದರ ಹೆಸರಿಗೆ ಮಾಡಲಾಗುವುದು. ಒಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಉಡುಪಿ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ದೇಶಕ್ಕೆ ಐಎಎಸ್ ಅಧಿಕಾರಿಯಾಗಿರುವ ರಾಜೇಶ್ ಪ್ರಸಾದ್ರವರನ್ನು ಸನ್ಮಾನಿಸುವ ಮೂಲಕ ಮರಾಟಿ ಸಮುದಾಯುವ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಇವರು ಮುಂದೆ ಕೇಂದ್ರ ಸರಕಾರ ಮುಖ್ಯ ಕಾರ್ಯದರ್ಶಿಯಾಗಿ ಅಥವಾ ಯಾವುದಾದರೂ ರಾಜ್ಯಕ್ಕೆ ಗವರ್ನರ್ ಆಗಿ ಬರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮೂಡಬಿದರೆ ಆಳ್ವಾಶ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ ಮಾತನಾಡಿ, ಮರಾಟಿ ಸಂಘದಿಂದ ಕರಾವಳಿ ಗದ್ದಿಗೆ ಎಂಬ ಕಾರ್ಯಕ್ರಮವನ್ನು ಮೂಡಬಿದರೆ ಆಳ್ವಾಸ್ ಕ್ಯಾಂಪಸ್ನಲ್ಲಿ ಆಯೋಜಿಸಿದಾಗ ನಾನು ಮರಾಟಿ ಸಮಾಜದ ಜೊತೆಗಿದ್ದೆ. ಮುಂದೆಯೂ ನಿಮ್ಮ ಜೊತೆಗಿದ್ದು ಸಮುದಾಯದ ಅಭಿವೃದ್ಧಿ ಬಗ್ಗೆ ರಾಜ್ಯ ಒಕ್ಕೂಟದ ಜೊತೆಗೆ 32 ಜಿಲ್ಲೆಗಳ ಅಧ್ಯಕ್ಷರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಆಳ್ವಾಸ್ ಕ್ಯಾಂಪಸ್ನಲ್ಲಿ ವ್ಯವಸ್ಥೆ ನಡೆಸಲಾಗುವುದು.

ಆಳ್ವಾಸ್ ಸಂಸ್ಥೆಯ ಮೂಲಕ ಬಹಳಷ್ಟು ದತ್ತ ಸ್ವೀಕಾರ ನಡೆಯುತ್ತಿದ್ದು 10ನೇ ತರಗತಿ ನಂತರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮೂಡಬಿದರೆಗೆ ಕರೆತನ್ನಿ. ಅವರಿಗೆ ಉಚಿತ ಶಿಕ್ಷಣದ ಉನ್ನತ ವ್ಯಾಸಂಗಕ್ಕೆ ಪೂರಕವಾದ ಉಚಿತ ತರಬೇತಿ, ಮಾಹಿತಿಗಳನ್ನು ನೀಡಲಾಗುವುದು. ಪಿಯುಸಿಯಾದ ಪ.ಪಂಗಡದವರಿಗೆ ಕೇವಲ 10 ರೂಪಯಿ ಪಾವತಿಸಿ ಇಂಜಿನಿಯರಿಂಗ್ ಸೀಟ್ ಪಡೆಯುವ ಸೌಲಭ್ಯವಿದ್ದು ಅದರ ಬಗ್ಗೆ ಮಾಹಿತಿ, ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯ ಮರಾಟಿ ಒಕ್ಕೂಟದ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು. ಮುಂದೆ ಮರಾಟಿ ಸಮಾಜದ ಜಾಗತಿಕ ಮಟ್ಟದ ಸಮಾವೇಶಕ್ಕೂ ಆಳ್ವಾಸ್ ಕ್ಯಾಂಪಸ್ನಲ್ಲಿ ಸ್ಥಳವಕಾಶದ ಜೊತೆಗೆ ಅದಕ್ಕೆ ಪೂರಕವಾದ ಮರ್ಗದರ್ಶ ನೀಡಲಾಗುವುದು ಎಂದು ಹೇಳಿದ ಅವರು ಚಂಡೀಗಡ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ರಾಜೇಶ್ ಪ್ರಸಾದ್ರವರು ಮರಾಟಿ ಸಮಾಜಕ್ಕೆ ಮಾತ್ರವಲ್ಲ. ಅವರು ದೇಶದ ಅಮೂಲ್ಯ ರತ್ನ ಎಂದರು.
ಅಭಿನಂದನೆ ಸ್ವೀಕರಿಸಿದ ಭಾರತದ ಕೇಂದ್ರಾಡಳಿತ ಪ್ರದೇಶ ಚಂಢೀಗಡದ ಮುಖ್ಯಕಾರ್ಯದರ್ಶಿ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಹೆಚ್. ರಾಜೇಶ್ ಪ್ರಸಾದ್ ಮಾತನಾಡಿ, ಶಿಕ್ಷಣವೇ ಇಂದಿನ ಪ್ರಮುಖ ಅಂಗ. ಶಿಕ್ಷಣದಲ್ಲಿ ಮುಂದುವರಿಯದಿದ್ದರೆ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪೂರಕವಾದ ಮಾರ್ಗದರ್ಶನ ನೀಡಬೇಕು. ನಮ್ಮ ಸಮಾಜದ ಮಕ್ಕಳೂ ಸರಕಾರಿ, ಅರೆ ಸರಕಾರಿ ಉದ್ಯೋಗಿಗಳಾಗಿ ಬಂದಾಗ ಅವರ ಕುಟುಂಬವೂ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ಶಿಕ್ಷಣಕ್ಕಾಗಿ ಪ್ರತಿಭಾ ಪುರಸ್ಕಾರಗಳು, ಸರಕಾರದಿಂದ ಸಾಕಷ್ಟು ಸವಲತ್ತುಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯಗಳಿದ್ದರೂ ಯುವ ಜನತೆ ಮುಂದೆ ಬಾರದಿದರುವ ಬೇಸರದ ಸಂಗತಿ. ಸಂಘಟನೆಯ ಮೂಲಕ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸವಾಗಬೇಕು. ಸಮಾಜ ಬಾಂಧವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬರಬೇಕು. ಸಮಾಜದವರನ್ನು ಕನೀಷ್ಠ 100 ಮಂದಿಯನ್ನಾದರೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಮಾಡಬೇಕು. ಇದಕ್ಕೆ ಬೇಕಾದ ಮಾರ್ಗದರ್ಶನ ನೀಡಲು ನಾನು ಬದ್ದ. ಎಂದು ಹೇಳಿದ ಅವರು, ನನಗೆ ದೊರೆತಂತಹ ಗೌರವ ಸನ್ಮಾನ ಸಮಾಜದಲ್ಲಿ ಯಾರಿಗೂ ದೊರೆತಿರಲು ಸಾಧ್ಯವಿಲ್ಲ. ನಿಮ್ಮೆಲ್ಲರ ಗೌರವ, ಪ್ರೀತಿಗೆ ಆಭಾರಿಯಾಗಿದ್ದೇನೆ. ಒಬ್ಬ ಉನ್ನತ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸುವ ಮೂಲಕ ಯುವ ಸಮಾಜಕ್ಕೆ ಸ್ಫೂರ್ತಿ ನೀಡಬೇಕು ಎಂದು ಹೇಳಿದರು.
ಬೆಂಗಳೂರು ಇಂಡಿಯನ್ ಆಡಿಟ್ & ಅಕೌಂಟ್ಸ್ ಸರ್ವೀಸಸ್ ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ ಕಚೇರಿಯ ಸೀನಿಯರ್ ಅಡೆಪ್ಯುಟಿ ಅಕೌಂಟೆಂಟ್ ಜನರಲ್ ಯಶೋಧ ಮಾತನಾಡಿ, ಸಮುದಾಯದ ಸಂಘಟನೆ ಎನ್ನುವುದು ಒಬ್ಬರ ಗುಂಪಲ್ಲ. ಅದು ಸಮುದಾಯದವರೆಲ್ಲರೂ ಒಟ್ಟು ಸೇರುವ ಸಂಘಟನೆ. ಸಮಾಜ ಬಾಂಧವರು ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಸಹಕಾರ ಸಂಘಟನೆಯ ಮೂಲಕ ಸಮಾಜಕ್ಕೆ ನೀಡಲಾಗುತ್ತಿದೆ. ಮರಾಟಿ ಸಮಾಜವು ಸಂಸ್ಕೃತಿ, ಪರಂಪರಗತವಾಗಿ ಬೆಳೆಯಬೇಕು. ಸಮಾಜವನ್ನು ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಆರೋಗ್ಯವಂತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಮರಾಟಿ ಸಮುದಾಯವು ಸದೃಡವಾಗಿ ಬೆಳೆಯಬೇಕು. ಪ್ರತಿಯೊಬ್ಬರೂ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ತಿಳಿಸಿದರು.
ಅಭಿನಂದನಾ ಭಾಷಣ ಮಾಡಿದ ರಾಜ್ಯ ಒಕ್ಕೂಟದ ಕಾರ್ಯಾಧ್ಯಕ್ಷ ರಾಮಚಂದ್ರ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿರುವ ರಾಜೇಶ್ ಪ್ರಸಾದ್ ಇಂದು ಬಹು ದೊಡ್ಡ ಹುದ್ದೆ ಅಲಂಕರಿಸುವುದು ಎಲ್ಲ ಸಮಾಜಕ್ಕೂ ಮಾದರಿಯಾಗಿದೆ. ಇವರು ನಮ್ಮ ಸಮುದಾಯದವರ ಎನ್ನಲು ನಮಗೆ ಹೆಮ್ಮೆ. ದಕ್ಷ ಮತ್ತು ಖಡಕ್ ಅಧಿಕಾರಿಯಾಗಿದ್ದಾರೆ. ಇವರು ನಮ್ಮ ಸಮಾಜಕ್ಕೆ ಶಕ್ತಿ. ಮುಂದೆ ಕೇಂದ್ರ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿ ಯಾಗಿ ಬರಲು ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಆಧ್ಯಕ್ಷ ಡಾ| ಕೆ. ಸುಂದರ ನಾಯ್ಕ ಮಾತನಾಡಿ, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಶ್ರಯದಲ್ಲಿ ರಾಜ್ಯ ಒಕ್ಕೂಟದ ಕರ್ಯಕ್ರಮ ಸಂಯೋಜನೆಗೊಂಡಿದೆ. ಇದು ಯುವ ಪೀಳಿಗೆಗೆ ಮಾರ್ಗಸೂಚಿ ನೀಡುವ ಕಾರ್ಯಕ್ರಮವಾಗಿದೆ. ರಾಜ್ಯ ಒಕ್ಕೂಟಕ್ಕೆ ಬೆಂಗಳೂರಿನಲ್ಲಿ ಈಗಾಗಲೇ ಜಮೀನು ಗುರುತಿಸಲಾಗಿದೆ. ಅಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಪ್ರಯತ್ನ ಮಾಡಲಾಗವುದು. ಪುತ್ತೂರಿನಲ್ಲಿಯೂ ಜಮೀನಿಗೆ ಮನವಿ ಮಾಡಲಾಗಿದೆ.
ಪ್ರತಿ ತಾಲೂಕುಗಳಲ್ಲಿಯೂ ಸಮಾಜ ಮಂದಿರ ನಿರ್ಮಾಣಕ್ಕೆ ಜಮೀನು ಮಂಜೂರುಗೊಳಿಸುವಂತೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಲಾಗಿದೆ. ಮುಂದೆ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಸಂಘಟನೆಯಲ್ಲಿ ನಮ್ಮೊಲಗಿನ ಬಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಸೇವೆ ಸಲ್ಲಿಸಬೇಕು. ಎಲ್ಲಾ ಸಂಘಗಳಿಗೆ ಸಮಸ್ಯೆಗಳಿದ್ದ ರಾಜ್ಯ ಒಕ್ಕೂಟದಿಂದ ತಾಲೂಕು ಸಂಘಗಳನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಳಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ನೋಂದಣಿ ಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈಯವರು ಒಕ್ಕೂಟದ ರಾಜ್ಯಾಧ್ಯಕ್ಷ ಅಧ್ಯಕ್ಷ ಡಾ.ಕೆ ಸುಂದರ ನಾಯ್ಕ ಅವರಿಗೆ ಹಸ್ತಾಂತರಿಸಿದರು. ಪುತ್ತೂರು ಮರಾಟಿ ಸಂಘಕ್ಕೆ ನಗರ ಸಭಾ ವ್ಯಾಪ್ತಿಯಲ್ಲಿ 5 ಎಕರೆ ಜಮೀನು ಮಂಜೂರುಗೊಳಿಸುವಂತೆ ರಾಜ್ಯ ಒಕ್ಕೂಟದ ಮುಖಾಂತರ ಶಾಸಕರಿಗೆ ಮನವಿ ಸಲ್ಲಿಸಿದರು.
ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾರಕ ನಾಯ್ಕ ಪಾಂಗಳಾಯಿ, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಮರಾಟಿ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಅನಂತ ಎಸ್ ನಾಯ್ಕ, ಕಾನೂನು ಸಲಹೆಗಾರರಾದ ರಾಮಚಂದ್ರ ಜಿ.ಕೆ., ಸಂತೋಷ್ ಕುಮಾರ್, ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಅಧ್ಯಕ್ಷ ಸುಂದರ ನಾಯ್ಕ, ಉಡುಪಿ ಜಿಲ್ಲಾಧ್ಯಕ್ಷ ಕೆ.ಟಿ ನಾಯ್ಕ, ಕೊಡಗು ಜಿಲ್ಲಾಧ್ಯಕ್ಷ ಪರಮೇಶ್ವರ ಎಂ., ಶಿವಮೊಗ್ಗ ಜಿಲ್ಲಾಧ್ಯಕ್ಷ ಬಿ.ಗಣಪತಿ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆ.ವಿ ಚಂದ್ರಶೇಖರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಸಂಚಾಲಕ ಪ್ರವೀಣ್ ಕುಮಾರ್ ಮುಗುಳಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಪ್ರಕಾಶ್ ಮೂಡಬಿದರೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ ವಂದಿಸಿದರು. ಶಿವಪ್ಪ ನಾಯ್ಕ, ಶಾಲಿನಿ ಬಾಲಕೃಷ್ಣ, ಲಲಿತಾ ಯು.ಕೆ ನಾಯ್ಕ, ಮಹಾಲಿಂಗ ನಾಯ್ಕ, ಮೀನಾಕ್ಣಿ ಮಂಜುನಾಥ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ವೈಷ್ಣವೀ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನವನ್ನು ಏರ್ಪಡಿಸಲಾಗಿತ್ತು. ರಾಜ್ಯದ 32 ಜಿಲ್ಲಾ ಸಂಘ, ತಾಲೂಕು ಸಂಘ, ವಲಯ ಸಂಘಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಮರಾಟಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮರಾಟಿ ಸಮಾಜದವರೂ ರಾಜಕೀಯವಾಗಿ ಬೆಳೆಯಬೇಕು. ನಮ್ಮ ಅಹವಾಲುಗಳನ್ನು ಸರಕಾರಕ್ಕೆ ತಲುಪಿಸಬೇಕು, ವಲಯ, ತಾಲೂಕು, ಜಿಲ್ಲಾ ಸಂಘಗಳಿದ್ದು ರಾಜ್ಯಕ್ಕೂ ಬಲೀಷ್ಠ ಸಂಘಟನೆಯ ಆವಶ್ಯಕತೆಯನ್ನು ಮನಗಂಡು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟವನ್ನು ಬೈಲಾ ತಿದ್ದುಪಡಿಯೊಂದಿಗೆ ರಚಿಸಲಾಗಿದೆ. ಮರಾಟಿ ಸಮಾಜಕ್ಕೆ ಕೆಲವು ಕಾನೂನು ತೊಡಕುಗಳಿದ್ದ ಅವುಗಳನ್ನು ಭಾರತ ಸರಕಾರದ ಉನ್ನತ ಅಧಿಕಾರಿಗಳ ಮೂಲಕ ಪರಿಹರಿಸುವ ಕೆಲಸವಾಗಬೇಕು. ಪ.ಪಂಗಡಕ್ಕೆ ಸಂಸತ್ನಲ್ಲಿ ವಿಶೇಷವಾದ ಕಾನೂನು ರಚನೆಯಾಗಬೇಕು. ಕಾನೂನಾತ್ಮಕವಾಗಿ ಪ.ಪಂಗಡಕ್ಕೆ ಕೇಂದ್ರದಲ್ಲಿ ತಿದ್ದುಪಡಿಯಗಿ ಹೊಸ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
-ಮಂಜುನಾಥ ಎನ್.ಎಸ್ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ
ಸಮಯಕ್ಕೆ ಸರಿಯಾಗಿ ಬನ್ನಿ ಎಂದ ಡಾ. ಮೋಹನ್ ಆಳ್ವ!
`ಆಳ್ವರೂ ಚುನಾವಣೆಗೆ ನಿಂತು ನೋಡಿ ಎಂದ ಶಾಸಕ ಅಶೋಕ್ ರೈ
ಕಾರ್ಯಕ್ರಮದಲ್ಲಿ ತನ್ನ ಭಾಷಣದ ವೇಳೆ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ಅವರು, ಇಂದು ಸಂಜೆ ನಿಗಧಿಯಾದ ಸಮಯ 5.45ಕ್ಕೆ ಸರಿಯಾಗಿ ಆಳ್ವಾಸ್ ಸಾಂಸ್ಕೃತಿಕ ವೈಭವ ಶುರುವಾಗಲಿದೆ. ಈ ಸಂದರ್ಭ ಸಮಯಕ್ಕೆ ಸರಿಯಾಗಿ ಬರಬೇಕು ಎಂದು ಡಾ. ಮೋಹನ್ ಆಳ್ವ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ವಿನಂತಿಸಿಕೊಂಡರು. ತನ್ನ ಭಾಷಣ ವೇಳೆದ ಇದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮೋಹನ್ ಆಳ್ವರವರು ಎಲ್ಲಾ ಕ್ಷೇತ್ರದಲ್ಲಿದ್ದಾರೆ.
ಚುನಾವಣೆಗೆ ನಿಂತಿಲ್ಲ. ನೀವು ಒಮ್ಮೆ ಚುನಾವಣೆಗೆ ನಿಂತುನೋಡಿ. ಆಗ ಗೊತ್ತಾಗುತ್ತದೆ ಎಂದು ತಮಾಷೆಗೈದರು. ಸಮಯಕ್ಕೆ ಸರಿಯಾಗಿ ಬರಬೇಕು ಎಂದು ನಮಗೂ ಇದೆ. ಆದರೆ ಜನರು ನನ್ನನ್ನು ಬಿಡಬೇಕಲ್ವ. ದಿನನಿತ್ಯ ನೂರಾರು ಜನರು ಎಲ್ಲೆಂಲ್ಲಿಂದಲೋ ಅವರ ಸಮಸ್ಯೆಗಳೊಂದಿಗೆ ಏನೇನೋ ಕನಸು ಹೊತ್ತು ಬರುತ್ತಿರುತ್ತಾರೆ. ಬೆಳಿಗ್ಗೆ ಎಳೂವರೆ ಗಂಟೆ ಬಂದು ಕಾಯುವವರಿದ್ದಾರೆ. ಅವರ ಅಹವಾಲು ಸ್ವೀಕರಿಸದೇ ಹೋದರೆ ಅವರಿಗೆ ನೋವಾಗುತ್ತದೆ. ಹಾಗಾಗಿ ಬೇಗ ಬರಬೇಕು ಅಂದುಕೊಂಡರೂ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಸಂಜೆ ನಡೆಯುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುತ್ತೇನೆ ಎಂದು ಭರವಸೆ ನೀಡಿದರು.









