





ಆಕಾರಕೇಂದ್ರಿತ, ಬುದ್ಧಿಕೇಂದ್ರಿತ ಶಿಕ್ಷಣ ಸಂಸ್ಥೆ ಸದಾ ಪ್ರಜ್ವಲಿಸಲಿ-ಡಾ. ನರೇಂದ್ರ ರೈ ದೇರ್ಲ


ಪುತ್ತೂರು : 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿವಿ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನೆರವೇರಿತು.





ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಅತಿಥಿ, ಕಾಲೇಜಿನ ಹಳೆವಿದ್ಯಾರ್ಥಿಯೂ ಆದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ ಪುತ್ತೂರಿನ ಹೆಮ್ಮೆಯ ಶಿಕ್ಷಣ ಸಂಸ್ಥೆ ಫಿಲೋಮಿನಾವನ್ನು ತಲುಪಲು ಸಿಗುವ ದಾರಿಗಳು ಹಲವು. ಮೊ| ಆಂಟನಿ ಪತ್ರಾವೊ ಅವರು ದೀನ ದಲಿತರ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹದ ದಾರಿ ಒಂದಾದರೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳ ಹಾದಿ ಮತ್ತೊಂದು. 1986ರಲ್ಲಿ ಆರಂಭವಾದ ಕೈ ಬರಹದ ಪತ್ರಿಕೆ ಅಂತರಂಗ ಫಿಲೋವಾಣಿಯ ಅಕ್ಷರದ ಪಥ ಇನ್ನೊಂದು. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳ ಸ್ವಸ್ಥ ಸುಸಂಸ್ಕೃತ ಮನಸ್ಸುಗಳನ್ನು ಕಟ್ಟುತ್ತಿರುವ ಉಪನ್ಯಾಸಕರ ಶೈಕ್ಷಣಿಕ ಸೇವೆಯ ಹಾದಿ ಮಗದೊಂದು. ಈ ಸಂಸ್ಥೆಯ ವಿದ್ಯಾರ್ಥಿ ಸಂಘದಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಘನತೆ, ಗೌರವ ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಆಕಾರಕೇಂದ್ರಿತ ಹಾಗೂ ಬುದ್ಧಿಕೇಂದ್ರಿತ ಈ ಶಿಕ್ಷಣ ಸಂಸ್ಥೆ ಸದಾ ಪ್ರಜ್ವಲಿಸಲಿ ಎಂದು ಶುಭಹಾರೈಸಿದರು.
ಗೌರವ ಉಪಸ್ಥಿತಿ ವಹಿಸಿದ ಪುತ್ತೂರು ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಜೋಸ್ಲಿನ್ ಫೆರ್ನಾಂಡಿಸ್ ಮಾತನಾಡಿ ನಶಾಮುಕ್ತ ಭಾರತ ಯೋಜನೆ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ನಮ್ಮನ್ನು ನಾವು ಪ್ರೀತಿಸಿ, ನಂಬಿಕೆ ಮತ್ತು ವಿಶ್ವಾಸಗಳಿಂದ ಮುನ್ನುಗ್ಗಿದರೆ ಜಗತ್ತು ನಮ್ಮನ್ನು ಗುರುತಿಸುತ್ತದೆ. ಸತ್ವ ರಹಿತ ತೋರಿಕೆಯ ಜೀವನವು ಎಂದಿಗೂ ಸಲ್ಲದು. ಹುಡುಗಿಯರು ಸ್ವಾವಲಂಬಿಗಳಾಗಬೇಕು. ಆರಾಮದಾಯಕ ವಲಯವನ್ನು ತೊರೆದರೆ ಮಾತ್ರ ಭವಿಷ್ಯವನ್ನು ಆರಾಮವಾಗಿ ಕಳೆಯಬಹುದು. ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಳ್ಳದಿರಿ ಎಂದರು. ಅಧ್ಯಕ್ಷತೆ ವಹಿಸಿದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ ವಿದ್ಯಾರ್ಥಿಗಳೇ ನಿಮ್ಮ ಹೃದಯವು ಸೇವೆಯ ಮನೋಭಾವನೆಯಿಂದ ಕೂಡಿರಲಿ. ಸಮಾಜಕ್ಕೆ ನಮ್ಮ ಜೀವನವು ಸುಂದರ ಕಾಣಿಕೆಯಾಗಿರಲಿ. ಭಗವಂತ ನೀಡಿದ ಜೀವನವೆಂಬ ಅಮೂಲ್ಯ ಉಡುಗೊರೆಯನ್ನು ಜೋಪಾನ ಮಾಡಿ ಎಂದು ನುಡಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ನಾಯಕತ್ವ ಕೇವಲ ಜವಾಬ್ದಾರಿಯಲ್ಲ. ಸೇವೆಗೆ ಇನ್ನೊಂದು ದಾರಿ ಎಂದು ಹೇಳಿದರು. ಮಾಯ್ ದೆ ದೇವುಸ್ ಚರ್ಚ್ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ|ಅಬೂಬಕರ್ ಆರ್ಲಪದವು, ಪ್ರತಿಮಾ ಹೆಗ್ಡೆ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸನ್ಮಾನಿಸಿದರು. ಜೋಸ್ಲಿನ್ ಫೆರ್ನಾಂಡಿಸ್ರವರು ಫಿಲೋಪ್ರಭಾ ವಾರ್ಷಿಕ ಸಂಚಿಕೆ ಅನಾವರಣ ಮಾಡಿದರು. ಸಂಚಿಕೆಯ ಸಂಪಾದಕರಾದ ಡಾ|ವಿನಯ ಚಂದ್ರ ಕಾರ್ಯಕ್ರಮ ನೆರವೇರಿಸಿದರು.
ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೂಸುಫ್ ಅಲ್ಫಾಜ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಝಮ್ಮಿಲ್ ಐ. ಉದ್ಘಾಟಕರನ್ನು ಪರಿಚಯಿಸಿದರು. ಯಜ್ಞೇಶ್ ಗೌರವ ಅತಿಥಿಯನ್ನು ಪರಿಚಯಿಸಿದರು. ಜೊತೆಕಾರ್ಯದರ್ಶಿ ಹಿಬಾ ಶೇಕ್ ವಂದಿಸಿ, ಪ್ರಿಯಾ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.
ರ್ಯಾಂಕ್ ವಿಜೇತರಿಗೆ ಗೌರವಾರ್ಪಣೆ
2023-24ನೇ ಸಾಲಿನ ಮಂಗಳೂರು ವಿವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಲಾವಣ್ಯ ಕೆ. ಪ್ರಥಮ, ಎಂ.ಎಸ್.ಡಬ್ಲ್ಯೂ ವಿಭಾಗದಲ್ಲಿ ಅರ್ಪಿತಾ ತೃತೀಯ, ಬಿಎಸ್ಸಿ ವಿಭಾಗದಲ್ಲಿ ಸನ್ಮತಿ ದ್ವಿತೀಯ ಹಾಗೂ ಬಿಸಿಎ ವಿಭಾಗದಲ್ಲಿ ಚೈತ್ರಾಲಿ ನಾಲ್ಕನೇ ರ್ಯಾಂಕ್ ಪಡೆದು ಸನ್ಮಾನ ಸ್ವೀಕರಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾದ್ಯಾಪಕಿ ಅಕ್ಷತಾ ಬಿ., ಸಮಾಜಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಶ್ರೀಮಣಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವಿನಯ್ ಚಂದ್ರ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಶಿಪ್ರಭಾ ಬಿ. ಕಾರ್ಯಕ್ರಮ ನೆರವೇರಿಸಿದರು.










