





ಪುತ್ತೂರು: ಕನ್ನಡ ಎಂದಾಗ ನಮ್ಮ ನಾಡು ನುಡಿ ಮತ್ತು ಸಮುದಾಯ ಎನ್ನುವ ಭಾವನೆ ಬರುತ್ತದೆ. ಈ ಸುಂದರ ಭಾಷೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ಧಾರಿ ನಮ್ಮ ಮೇಲಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಗೀತಾಕುಮಾರಿ.ಟಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಎಸ್.ಎಲ್.ಭರಪ್ಪನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ವಿವಿಧ ಸಾಹಿತ್ಯಿಕ ಚಟುವಟಿಕೆಗಳು ನಮ್ಮ ಯಾಂತ್ರೀಕೃತ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಯಾವುದೇ ಭಾಷೆಯನ್ನಾಗಲಿ ನಿರಂತರವಾಗಿ ಬಳಸಿದರೆ ಮಾತ್ರ ಅದರ ಉಳಿವು ಸಾಧ್ಯವಾಗುತ್ತದೆ. ಹಾಗಾಗಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಮತ್ತು ಉಳಿಸುವಲ್ಲಿ ನಾವು ಶಕ್ತಿವಂತರಾಗಬೇಕು ಎಂದರು. ಎಸ್.ಎಲ್.ಭೈರಪ್ಪನವರ ಕೃತಿಗಳ ಹೆಸರನ್ನು ಬಳಸಿ ಬರೆದ ಸ್ವರಚಿತ ಕವನವನ್ನು ಅವರು ವಾಚಿಸಿದರು ಮತ್ತು ಅದರಲ್ಲಿರುವ ಸಾಮಾಜಿಕ ಚಿಂತನೆಗಳನ್ನು ವಿವರಿಸಿದರು.





ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ಭಾಷಾಭಿಮಾನವನ್ನು ಬೆಳೆಸುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಓದುವ, ಬರೆಯುವ ಹವ್ಯಾಸಗಳು ಕಡಿಮೆಯಾಗಿವೆ ಬದಲಿಗೆ ಮೊಬೈಲ್ನಲ್ಲಿ ಕಳೆದು ಹೋಗುತ್ತಿದ್ದೇವೆ ಎಂದರು. ಪಾಠ ಹಾಗೂ ಪಠ್ಯೇತರ ವಿಷಯಗಳಿಗೆ ನಮ್ಮ ಸಂಸ್ಥೆಯಲ್ಲಿ ಸಮಾನ ಅವಕಾಶವನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದರು. ತನ್ನ ನೇರ ನುಡಿಗಳಿಂದ ಸಾಹಿತ್ಯವನ್ನು ರಚಿಸಿದ ಎಸ್.ಎಲ್.ಭರಪ್ಪನವರ ಕೃತಿಗಳು ಸಮಾಜದ ಸಮಕಾಲೀನ ಸಮಸ್ಯೆಗಳನ್ನು ವಿವರಿಸುತ್ತವೆ ಎಂದರು.

ಭರಪ್ಪನವರ ಕೃತಿಗಳು ಮತ್ತು ಚಿಂತನೆಗಳನ್ನು ನೆನಪಿಸಿದ ವಿದ್ಯಾರ್ಥಿ ಆದಿತ್ಯ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು. ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ, ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಕ್ ಸ್ವಾಗತಿಸಿ ಈಶ್ವರಿ ವಂದಿಸಿದರು. ನಿಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.










