ಪುತ್ತೂರಿನಿಂದ ಬೆಂಗಳೂರು ಮತ್ತು ನರಿಮೊಗರು- ಪಂಜಳ ನೂತನ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಚಾಲನೆ

0

ಪುತ್ತೂರು: ಪುತ್ತೂರಿನಿಂದ ಬೆಂಗಳೂರಿಗೆ ಮತ್ತು ಪುತ್ತೂರು ಮೊಟ್ಟೆತ್ತಡ್ಕ- ಪಂಜಳ -ನರಿಮೊಗರು ಸಂಪರ್ಕಕ್ಕೆ ಹೊಸ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಬುಧವಾರ ಚಾಲನೆ ನೀಡಿದರು.


ಬೆಂಗಳೂರಿಗೆ ಪುತ್ತೂರಿನಿಂದ ಬೆಳಿಗ್ಗೆ 8.೦೦ ಗಂಟೆಗೆ ಈ ಅಶ್ವಮೇಧ ಬಸ್ ಹೊರಡಲಿದೆ. ಬೆಳಿಗ್ಗೆ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ಸಂಚಾರ ಇರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಸೂಚನೆಯಂತೆ ಇಲಾಖೆಯಿಂದ ಹೊಸ ಬಸ್ ಮಂಜೂರಾಗಿದೆ.


ಅದೇ ರೀತಿ ಪುತ್ತೂರಿನಿಂದ ಮೊಟ್ಟೆತ್ತಡ್ಕ ಮಾರ್ಗವಾಗಿ- ಪಂಜಳದಿಂದ ಪುರುಷರಕಟ್ಟೆಯಾಗಿ ಪುತ್ತೂರಿಗೆ ಸಂಪರ್ಕ ಮಾಡುವ ಹೊಸ ರೂಟ್‌ ಅನ್ನು ಶಾಸಕರು ಚಾಲನೆ ಮಾಡಿದರು.
ಈ ಸಂದರ್ಬದಲ್ಲಿ ಮಾತನಾಡಿದ ಶಾಸಕರು“ ಪುತ್ತೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ಬಸ್ ಬಿಡಬೇಕು ಎಂಬ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ್ದೇನೆ. ಬಹಳ ಮಂದಿ ನನ್ನಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದರು. ಈ ಬಸ್ಸು ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಪುತ್ತೂರಿಗೆ ಹೊರಟು ಸಂಜೆ ನಾಲ್ಕು ಗಂಟೆಗೆ ಪುತ್ತೂರು ತಲುಪಲಿದೆ. ಪ್ರತಿನಿತ್ಯ ಹೊರಡುವ ಈ ಬಸ್ಸು ಪ್ರಯಾಣಿಕರಿಗೆ ಪ್ರಯೋಜನವಾಗಲಿದ್ದು ಮಹಿಳೆಯರಿಗೆ ಈ ಬಸ್ಸು ಉಚಿತವಾಗಿರುತ್ತದೆ ಎಂದು ಹೇಳಿದರು.ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಬಸ್ ಸಮಸ್ಯೆಯನ್ನು ಬಹುತೇಕ ಇತ್ಯರ್ಥ ಪಡಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದೇನೆ ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದಲ್ಲಿ ವಿಭಾಗೀಯ ತಾಂತ್ರಿಕ ಶಿಲ್ಪಿ ವೆಂಕಟೇಶ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಗ್ಯಾರಂಟಿ ಸಮಿತಿ ಸದಸ್ಯ ಅಬ್ಬು ನವಗ್ರಾಮ, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಸತೀಶ್ ನಿಡ್ಪಳ್ಳಿ ಮೊದಲಾದವರು ಇದ್ದರು.
ಘಟಕ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿ, ಡಿ ಟಿ ವೆಂಕಟ್ರಮಣ ಭಟ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

15 ದಿನದೊಳಗೆ ಜಾವಗಲ್‌ಗೆ ಹೊಸ ಬಸ್
ಜಾವಗಲ್ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೊಸ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ 15 ದಿನದೊಳಗೆ ಹೊಸ ಅಶ್ವಮೇಧ ಬಸ್ ಬರಲಿದ್ದು ಅದನ್ನು ಆ ರೂಟಿಗೆ ನಿಯೋಜನೆ ಮಾಡಲಾಗುತ್ತದೆ. ಇದು ಕೂಡಾ ಹಲವು ವರ್ಷದ ಬೇಡಿಕೆಯಾಗಿದ್ದು ಭಕ್ತರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗುವುದು. ಹೊಸ ಬಸ್ ಕಳಿಹಿಸುವಂತೆ ಈಗಾಗಲೇ ಮೇಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಅಶೋಕ್‌ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here