





ತರಗತಿ ಕಲಿಕೆಯ ಜೊತೆಗೆ ಕೌಶಲ ಕಲಿಕೆ ಅಗತ್ಯ: ಪುತ್ತೂರು ವಲಯದ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಹೇಳಿಕೆ


ಪುತ್ತೂರು: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಗೆ ವಿಜ್ಞಾನ ಕೌಶಲಗಳನ್ನು ಕಲಿತುಕೊಳ್ಳುವುದು ಅತೀ ಅಗತ್ಯ. ವಿಜ್ಞಾನ ಮಾದರಿ ಪ್ರದರ್ಶನದಂತಹಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಹೊಸ ಅನ್ವೇಷಣೆಗಳಿಗೆ ಸ್ಪೂರ್ತಿ ತುಂಬುತ್ತದೆ ಎಂದು ಪುತ್ತೂರು ವಲಯದ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಸಿ. ಹೇಳಿದರು.






ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ತೀರ್ಪುಗಾರ ಹೇಮಂತ್ ಮಾತನಾಡಿ, ಮಾದರಿಯನ್ನು ಪ್ರಸ್ತುತಪಡಿಸುವಾಗ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಬೇಕು. ಮಾದರಿಯ ಖರ್ಚುವೆಚ್ಚದ ಬಗ್ಗೆ ಗಮನಹರಿಸಬೇಕು ಎಂದರು.
ಮಾದರಿಗಳು ಹೊಸತನದಿಂದ ಕೂಡಿರುವುದು ಅಗತ್ಯ. ಮಾದರಿಯ ಕುರಿತು ಆಳವಾದ ಜ್ಞಾನ ಹೊಂದಿರುವುದೂ ಮುಖ್ಯ ಎಂದು ತೀರ್ಪುಗಾರರಾದ ಡಾ. ನಿವೇದಿತ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ವಿಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವ ಭಾರತದ ಕೀರ್ತಿಯನ್ನು ಎತ್ತಿ ಹಿಡಿಯಲು ಇಂತಹಾ ಮಾದರಿ ಪ್ರದರ್ಶನಗಳು ಹಾಗೂ ಸ್ಪರ್ಧೆ ಅಗತ್ಯ. ಈ ಸ್ಪರ್ಧೆಯ ಸದುಪಯೋಗ ಹಾಗೂ ಸ್ಪೂರ್ತಿ ಪಡೆದು ಮಕ್ಕಳು ಮುಂದೊಂದು ದಿನ ವಿಜ್ಞಾನಿಗಳಾಗಿ ದೇಶದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಬೇಕು ಎಂದರು.
ವಿಷಯವಾರು ಶಿಕ್ಷಣ ಸಂಯೋಜಕ ಹರಿಪ್ರಸಾದ್ ಎಮ್., ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿಷಯವಾರು ಶಿಕ್ಷಣ ಸಂಯೋಜಕಿ ಅಮೃತ ಕಲಾ ಸ್ಪರ್ಧಾ ವಿಜೇತರ ಪಟ್ಟಿ ವಾಚನ ಮಾಡಿದರು. ಅಂಬಿಕಾ ವಿದ್ಯಾಲಯದ ಶಿಕ್ಷಕಿ ಗೌರಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾಮಟ್ಟಕ್ಕೆ ಆಯ್ಕೆ:
ವಿಜ್ಞಾನ ಮಾದರಿ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಸುದಾನ ಶಾಲೆಯ ಸೃಷ್ಠಿ ಎನ್.ವಿ. ಪ್ರಥಮ, ಅಂಬಿಕಾ ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಜಿ. ದ್ವಿತೀಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಷಮತ್ ಜೈನ್ ತೃತೀಯ ಸ್ಥಾನ ಪಡೆದರು. ಗುಂಪು ವಿಭಾಗದಲ್ಲಿ ಸೌಪರ್ಣಿಕ ಎಸ್. ಡಿ. ಹಾಗೂ ಅನ್ವಿತಾ ಎಸ್. ತಂಡ ಪ್ರಥಮ, ಸುದಾನ ಶಾಲೆಯ ಅದ್ವಿಜ್ ಸಜೇಶ್ ಮತ್ತು ಮಿಥುನ್ ಪಿ.ಪಿ. ತಂಡ ದ್ವಿತೀಯ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶುಭನ್ ಹಾಗೂ ದೀಕ್ಷಿತ್ ತೃತೀಯ ಸ್ಥಾನ ಪಡೆದರು.







