





ಪಾಲನೆಯಾಗದ ಸರಕಾರದ ಶಿಷ್ಟಾಚಾರ
ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಿಂದ ರಾಜಕೀಯ ಪ್ರೇರಿತ ನಡೆ: ಆರೋಪ
ಕಲಿಕಾ ಕೇಂದ್ರ ಉದ್ಘಾಟನೆಯಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ, ಇದು ನನ್ನ ಗಮನಕ್ಕೆ ಬರಲಿಲ್ಲ.ರವಿಚಂದ್ರ ಯು. -ಪಿಡಿಒ, 34 ನೆಕ್ಕಿಲಾಡಿ ಗ್ರಾ.ಪಂ.


ಉಪ್ಪಿನಂಗಡಿ: ಆರ್.ಜಿ.ಎಸ್.ಎ. ಯೋಜನೆಯಡಿ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನಿರ್ಮಾಣವಾದ ಕಲಿಕಾ ಕೇಂದ್ರವನ್ನು ಸರಕಾರದ ಶಿಷ್ಟಾಚಾರ ಪಾಲಿಸದೇ, ಪಿಡಿಒ ಅವರ ಗಮನಕ್ಕೂ ತಾರದೇ ಪಂಚಾಯತ್ ಸದಸ್ಯರೇ ಸೇರಿಕೊಂಡು ಉದ್ಘಾಟಿಸಲಾಗಿದ್ದು ಇದು ಗ್ರಾ.ಪಂ. ಸದಸ್ಯರ ರಾಜಕೀಯ ಪ್ರೇರಿತ ನಡೆ ಎಂಬ ಆರೋಪ ವ್ಯಕ್ತವಾಗಿದೆ.





2024-25ನೇ ಅವಧಿಯಲ್ಲಿ ಗ್ರಾ.ಪಂ. ಕಲಿಕಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲು 34 ನೆಕ್ಕಿಲಾಡಿ ಗ್ರಾ.ಪಂ. ಅನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಏಳು ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು. ಪುತ್ತೂರು ತಾಲೂಕಿನಲ್ಲಿ ಕಲಿಕಾ ಕೇಂದ್ರಕ್ಕೆ ಅನುಮೋದನೆ ಪಡೆದ ಏಕೈಕ ಗ್ರಾ.ಪಂ. ಪಂಚಾಯತ್ ಇದಾಗಿದೆ. ರಾಜ್ಯದ ಒಳಗೆ ಮತ್ತು ಹೊರ ರಾಜ್ಯ ಅಧ್ಯಯನ ಭೇಟಿ ನೀಡುವ ತಂಡಗಳೊಂದಿಗೆ ಸಂಯೋಜನೆ ನಡೆಸಲು, ಕ್ಷೇತ್ರ ಭೇಟಿ, ತರಬೇತಿಗಳನ್ನು ಆಯೋಜಿಸಿದಾಗ ಬೇಕಾಗುವ ಪೂರಕ ಸಾಮಗ್ರಿಗಳೊಂದಿಗೆ ಸುಸಜ್ಜಿತಗೊಳಿಸಲು, ಎಲ್ಸಿಡಿ, ಪ್ರೊಜೆಕ್ಟರ್, ಪರದೆ, ಸಭಾಂಗಣ ಕುರ್ಚಿಗಳು ಇತ್ಯಾದಿಗಳನ್ನು ಅಳವಡಿಸಲು ಸೇರಿದಂತೆ ಇದಕ್ಕೆಲ್ಲಾ ಬೇಕಾದ ಪೂರಕ ವ್ಯವಸ್ಥೆಯನ್ನು ಗ್ರಾ.ಪಂ. ಕಾರ್ಯಾಲಯದಲ್ಲಿ ಜೋಡಿಸಿ ಕಲಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಈ ಅನುದಾನವನ್ನು ನೀಡಲಾಗುತ್ತದೆ. ಅದರಂತೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ನ ಸಭಾಂಗಣವನ್ನು ಕಲಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದನ್ನು ಎಸಿ ರೂಂ ಆಗಿ ಪರಿವರ್ತಿಸಿ ಅದರೊಳಗೆ ಗ್ರಾಮದ ಮಾಹಿತಿಯನ್ನು ಅಳವಡಿಸಲಾಗಿದೆ. ಆದರೆ ಇದರ ಉದ್ಘಾಟನೆ ಕಾರ್ಯ ಮಾತ್ರ ಗ್ರಾ.ಪಂ. ಅಽಕಾರಿಗಳಿಗೂ ಮಾಹಿತಿ ನೀಡದೇ ಸದ್ದಿಲ್ಲದೇ ಗ್ರಾ.ಪಂ. ಸದಸ್ಯರು ನಡೆಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ಪಾಲನೆಯಾಗದ ಶಿಷ್ಟಾಚಾರ!:
ಸರಕಾರದ ಅನುದಾನದಲ್ಲಿ ಕಾಮಗಾರಿ ನಡೆದು ಅದರ ಉದ್ಘಾಟನೆ ನಡೆಸುವಾಗ ಸರಕಾರದ ಶಿಷ್ಟಾಚಾರದಂತೆ ನಡೆಯಬೇಕಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಂಸದರು, ಶಾಸಕರು, ವಿಧಾನಸಭೆ ಸದಸ್ಯರು, ಆ ಭಾಗದ ನಿಗಮ ಮಂಡಳಿ ಅಧ್ಯಕ್ಷರುಗಳನ್ನು, ಅಽಕಾರಿ ವರ್ಗದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂಬ ನಿಯಮವಿದೆ. ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಕಡ್ಡಾಯವಾಗಿ ಇರಲೇ ಬೇಕಾಗುತ್ತದೆ. ಕಲಿಕಾ ಕೇಂದ್ರದ ಅಭಿವೃದ್ಧಿ ನಡೆದಿರುವುದು ಗ್ರಾ.ಪಂ.ನ ಸ್ವಂತ ಅನುದಾನದಿಂದ ಅಲ್ಲ. ಅದು ಆರ್.ಜಿ.ಎಸ್.ಎ. ಯೋಜನೆಯಡಿ ಲಭಿಸಿದ ಅನುದಾನದಲ್ಲಿ. ಆದ್ದರಿಂದ ಸರಕಾರಿ ನಿಯಮಾವಳಿಯ ಪ್ರಕಾರವೇ ಇದರ ಉದ್ಘಾಟನೆ ನಡೆಸಬೇಕಿತ್ತು ಎಂಬ ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ. ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈಯವರು ಕಲಿಕಾ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಗ್ರಾ.ಪಂ. ಸದಸ್ಯರು ಹಾಗೂ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಾನ್ ಕೆನ್ಯೂಟ್ ಮಸ್ಕರ್ಹೇನಸ್ ಉಪಸ್ಥಿತರಿದ್ದರು.
34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ಅಧಿಕಾರಿ ವರ್ಗಕ್ಕೂ ಮಾಹಿತಿ ನೀಡದೇ ಗ್ರಾ.ಪಂ. ಸದಸ್ಯರೇ ಸೇರಿಕೊಂಡು ಉದ್ಘಾಟನೆ ನಡೆಸಿರುವುದು ಸರಿಯಲ್ಲ. ಇದು ಗ್ರಾ.ಪಂ. ಸ್ವಂತ ಅನುದಾನದಿಂದ ನಡೆಸಿದ ಕಾಮಗಾರಿಯಲ್ಲ. ಇದು ಆರ್.ಜಿ.ಎಸ್.ಎ. ಯೋಜನೆಯಡಿ ಸಿಕ್ಕಿದ ಅನುದಾನ. ಹಾಗಿರುವಾಗ ಸರಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಬೇಕಿತ್ತು.
ಅನಿ ಮಿನೇಜಸ್, ಅಧ್ಯಕ್ಷರು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್
ಸರಕಾರದ ಶಿಷ್ಟಾಚಾರ ಪಾಲಿಸದೇ ಏಕಾಏಕಿ ನಿಲುವು ತಗೊಂಡು ಕಲಿಕಾ ಕೇಂದ್ರವನ್ನು ಉದ್ಘಾಟಿಸಿರುವುದು ಸರಿಯಲ್ಲ. ಇದು ಗ್ರಾ.ಪಂ. ಸದಸ್ಯರ ರಾಜಕೀಯ ಮನೋಸ್ಥಿತಿಯನ್ನು ತೋರಿಸುತ್ತದೆ. ಶಿಷ್ಠಾಚಾರದ ಪ್ರಕಾರ ಇದಕ್ಕೆ ಜನಪ್ರತಿನಿಽಗಳನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಕಾರ್ಯನಿರ್ವಾಹಕಾಽಕಾರಿಯವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಬೇಕಾಗಿತ್ತು. ಕಲಿಕಾ ಕೇಂದ್ರಕ್ಕೆ ಏಳು ಲಕ್ಷ ರೂಪಾಯಿ ಅನುದಾನವನ್ನು ಬಳಸಿಕೊಳ್ಳುವಾಗ ಯಾವುದೇ ಟೆಂಡರ್ ಕರೆದು ಕಾಮಗಾರಿ ನಡೆಸಿಲ್ಲ. ತುಂಡು ತುಂಡು ಕಾಮಗಾರಿಗಳನ್ನು ತೋರಿಸಿ ಕಾಮಗಾರಿ ನಡೆಸಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯೂ ಇದೆ. ಇಲ್ಲಿ ಎಲ್ಲಾ ಗ್ರಾ.ಪಂ. ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರು ಆದ್ದರಿಂದ ಶಾಸಕರನ್ನು ಕಾರ್ಯಕ್ರಮದಿಂದ ದೂರ ಇಡುವ ಉದ್ದೇಶದಿಂದ ಇವರು ಈ ರೀತಿ ಮಾಡಿದ್ದಾರೆ.
ಅಸ್ಕರ್ ಅಲಿ, ಪ್ರಧಾನ ಕಾರ್ಯದರ್ಶಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್
ಅಧಿಕೃತ ಉದ್ಘಾಟನೆ ಆಗಬೇಕಿದೆ
ಎಂಪಿ.,ಎಂಎಲ್ಎ.,ಎಂಎಲ್ಸಿ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಉದ್ಘಾಟನೆ ಮಾಡಬೇಕಿತ್ತು.ಆದರೆ ಅವರೆಲ್ಲರೂ ಒಂದೇ ದಿನ ಸಿಗುವುದಿಲ್ಲ ಮತ್ತು ದಶಂಬರ್ ತಿಂಗಳಲ್ಲಿ ನಮ್ಮ ಆಡಳಿತದ ಅವಧಿಯೂ ಮುಗಿಯಲಿರುವುದರಿಂದ ಅದರ ಮೊದಲು ಉದ್ಘಾಟನೆ ಮಾಡುವಂತೆ ಸದಸ್ಯರು ಒತ್ತಾಯಿಸಿದ್ದರಿಂದಾಗಿ ಸಾಂಕೇತಿಕವಾಗಿ ಮೊನ್ನೆ ರಿಬ್ಬನ್ ಕಟ್ ಮಾಡಿ ಸಣ್ಣದಾಗಿ ಉದ್ಘಾಟನೆ ಮಾಡಲಾಗಿದೆ ಹೊರತು ಅಧಿಕೃತವಾಗಿ ಇನ್ನಷ್ಟೆ ಉದ್ಘಾಟನೆಯಾಗಬೇಕಿದೆ.
-ಸುಜಾತ ಆರ್. ರೈ ಅಧ್ಯಕ್ಷರು,34 ನೆಕ್ಕಿಲಾಡಿ ಗ್ರಾ.ಪಂ.








