





ಸಂವಿಧಾನದ ಪ್ರಪ್ರಥಮ ಕರಡನ್ನು ತಯಾರಿಸಿದ ಖ್ಯಾತಿ ಬಿ.ಎನ್.ರಾಯ್ ಗೆ ಸಲ್ಲುತ್ತದೆ: ಪನಿಯಾಲ



ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮಂಗಳೂರಿನ ಖ್ಯಾತ ನ್ಯಾಯವಾದಿ, ಪನಿಯಾಲ ಅಸೋಸಿಯೇಟ್ಸ್ ನ ವಿವೇಕಾನಂದ ಪನಿಯಾಲ ನಂತರ ‘ಸಂವಿಧಾನ ರಚನೆಯಲ್ಲಿ ಬಿ.ಎನ್ ರಾವ್ ರವರ ಕೊಡುಗೆಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದ ಸಂವಿಧಾನದ ಚೌಕಟ್ಟನ್ನು ನಿರ್ಣಯಿಸಿ, ಸಂವಿಧಾನದ ಪ್ರಪ್ರಥಮ ಕರಡನ್ನು ತಯಾರಿಸಿದ ಖ್ಯಾತಿ ನಮ್ಮ ಕರಾವಳಿಯ ಹೆಮ್ಮೆಯ ಪುತ್ರ ಬಿ.ಎನ್. ರಾವ್ ಗೆ ಸೇರುತ್ತದೆ. ಇದು ಸಂವಿಧಾನ ರಚನಾ ಸಭೆಯ ಸಾಂವಿಧಾನಿಕ ಸಲಹೆಗಾರರಾಗಿ ಅವರ ಕೆಲಸದ ಭಾಗವಾಗಿತ್ತು. ಸಂವಿಧಾನ ರಚನೆಯಲ್ಲಿ ಬಿ.ಎನ್. ರಾವ್ ರವರು ಹಲವು ದೇಶಗಳ ಸಂವಿಧಾನ ಹಾಗೂ ಕಾನೂನುಗಳನ್ನು ಅಭ್ಯಾಸ ನಡೆಸಿ ಭಾರತೀಯ ಸಂವಿಧಾನದ ಮೊದಲ ಕರಡನ್ನು ರಚಿಸಿದರು. ಈ ಕರಡು ಹಲವಾರು ಸಮಿತಿಗಳ ಶಿಫಾರಸುಗಳನ್ನು ಆಧರಿಸಿದೆ ಮತ್ತು ಅಂತಿಮ ಸಂವಿಧಾನವನ್ನು ರಚಿಸುವಲ್ಲಿ ಡಾ. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಗೆ ಮಾರ್ಗದರ್ಶನ ನೀಡಿತು ಎಂದರು. ಭಾರತ ಮಾತ್ರವಲ್ಲದೆ ಬರ್ಮಾ ದೇಶದ ಸಂವಿಧಾನ ವನ್ನು ಸಹಾ ರಚಿಸಿದ ಖ್ಯಾತಿ ಇವರದ್ದಾಗಿದೆ. ಇಂತಹ ಮಹಾನ್ ಸಾಧಕನ ಬಗ್ಗೆ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಅಧ್ಯಯನ ನಡೆಸಬೇಕು. ಆ ಮೂಲಕ ಅವರ ಕೊಡುಗೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕು ಎಂದರು.






ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಸವಿವರ, ಸಂಪೂರ್ಣ ಮತ್ತು ಶ್ರೀಮಂತ ಸಂವಿಧಾನವಾಗಿದೆ. ಪ್ರತಿಯೊಬ್ಬ ನಾಗರಿಕನ ಸಮಾನತೆ, ನ್ಯಾಯದ ಸಂಗಮ ನಮ್ಮ ಸಂವಿಧಾನ ಆಗಿದೆ ಎಂದ ಅವರು, ಸಂವಿಧಾನದ ವಿಶಿಷ್ಟತೆಗಳ ಕುರಿತು ವಿವರಿಸಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ., ಕಾನೂನು ಅರಿವು ನೆರವು ಘಟಕದ ಸಹಾ ಸಂಯೋಜಕ ನಂದಗೋಪಾಲ್ ಭಟ್ ಉಪಸ್ಥಿತರಿದ್ದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಸಹಾಯಕ ಪ್ರಾಧ್ಯಾಪಕಿ ಹಾಗೂ ಕಾನೂನು ಅರಿವು ನೆರವು ಘಟಕದ ಸಂಯೋಜಕಿ, ಡಾ. ರೇಖಾ ಕೆ. ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ, ವಿದ್ಯಾರ್ಥಿ ಅಭಿರಾಮ್ ಶರ್ಮ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









