





ಡಿ.7 ಪ್ರವೇಶ ಪರೀಕ್ಷೆ
9 ಕೇಂದ್ರಗಳಲ್ಲಿ ಪರೀಕ್ಷೆ
ಉತ್ತಮ ಅಂಕ ಪಡೆದ 25 ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ


ಪುತ್ತೂರು: ನೆಹರು ನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಿಂದ `ಮೇಧಾ’ ಎಂಬ ವಿಶೇಷ ಯೋಜನೆಯ ಮೂಲಕ ಉಚಿತ ಶಿಕ್ಷಣ ನೀಡಲಾಗುತ್ತಿದ್ದು ಇದರ ಪ್ರವೇಶ ಪರೀಕ್ಷೆಗಳು ಡಿ.7ರಂದು 9 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ತಿಳಿಸಿದರು.





ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1967ರಲ್ಲಿ ಪ್ರಾರಂಭಗೊಂಡಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು ಅರುವತ್ತನೇ ವರ್ಷದ ಸಂಭ್ರಮವನ್ನು ವರ್ಷ ಪೂರ್ತಿ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಬೇಡಿಕೆ ಆಧಾರದಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಹೊಸ ಮೇಧಾ ಎಂಬ ವಿಶೇಷ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಪ್ರವೇಶ ಪರೀಕ್ಷೆ ನಡೆಸಿ ಅದಲ್ಲಿ ಉತ್ಕೃಷ್ಠ ಅಂಕ ಪಡೆದವರಿಗೆ ಸಂಸ್ಥೆಯಲ್ಲಿ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ನೀಡಲಾಗುವುದು. ಕಳೆದ ಬಾರಿ ನಡೆಸಿದ ಪರೀಕ್ಷೆಯಲ್ಲಿ 750 ವಿದ್ಯಾರ್ಥಿಗಳು ಹಾಜರಾಗಿದ್ದು, 25 ಮಂದಿ ವಿದ್ಯಾರ್ಥಿಗಳು ಪ್ರಸ್ತುತ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. 29 ಜಿಲ್ಲೆಗಳ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು ಎಲ್ಲಾ ಕಡೆ ನಡೆಸುವಂತೆ ಒತ್ತಡಗಳಿವೆ. ಈ ಬಾರಿ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದ ಕೇಂದ್ರಗಳಲ್ಲಿ ಈ ಬಾರಿಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿಭಾವಂತರಾಗಿ ಆರ್ಥಿಕ ಸಮಸ್ಯೆಯಿಂದ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಂಸ್ಥೆಗೆ ಸೇರುವ ಕನಸು ನನಸು ಮಾಡಲಾಗುವುದು. ಮುಂದಿನ ಉನ್ನತ ಶಿಕ್ಷಣಕ್ಕೆ ಹೋಗಲು ಅವಕಾಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು.
ಮೇಧಾ ಯೋಜನೆಯ ಪ್ರವೇಶ ಪರೀಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಯಲಿದೆ. 9 ಹಾಗೂ 10ನೇ ತರಗತಿಗೆ ಸಂಬಂಧಪಟ್ಟ ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ 120 ನಿಮಿಷಗಳ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷದ ಪಿಯುಸಿಯ ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.
ಡಿ.7 ಪರೀಕ್ಷೆ, ನೋಂದಾಯಿಸಲು ಡಿ.3 ಅಂತಿಮ ದಿನ
ಮೇಧಾ ಯೋಜನೆಯಲ್ಲಿ ಪ್ರವೇಶ ಪರೀಕ್ಷೆಯು ಡಿ.7ರಂದು ನಡೆಯಲಿದೆ. ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದ 9 ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಪರೀಕ್ಷೆ ಪ್ರಾರಂಭಗೊಳ್ಳಲಿದೆ. ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30ಕ್ಕೆ ಹಾಜರಿರಬೇಕು. ಪರೀಕ್ಷೆಗೆ ನೋಂದಾಯಿಸಲು ಡಿ.3 ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ವೆಬ್ಸೈಟ್ www.vivekanandapuc.com/medha ನಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8971924424, 8105072386, 8073700468 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪರೀಕ್ಷೆ ನಡೆಯುವ ಕೇಂದ್ರಗಳು
ಪುತ್ತೂರಿನ ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜು, ಕಡಬದ ಪಂಜ ರಸ್ತೆಯ ವಿದ್ಯಾನಗರದಲ್ಲಿರುವ ಸರಸ್ವತಿ ಪ್ರೌಢಶಾಲೆ, ವಿಟ್ಲದ ಸಾಲೆತ್ತೂರು ರಸ್ತೆಯಲ್ಲಿರುವ ಪಿ.ಎಂಶ್ರೀ ಸರಕಾರಿ ಪ್ರೌಢಶಾಲೆ, ಪಾಣೆಮಂಗಳೂರಿನಲ್ಲಿರುವ ಎಸ್. ಎಲ್. ಎನ್. ಪಿ. ವಿದ್ಯಾಲಯ, ಸುಳ್ಯದ ಜಾಲ್ಸೂರಿನ ವಿನೋಬನಗರದಲ್ಲಿರುವ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠ, ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ರೋಟರಿ ಇಂಗ್ಲಿಷ್ ಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಸಚಿನ್ ಶೆಣೈ, ನಿರ್ದೇಶಕಿ ವತ್ಸಲಾ ರಾಜ್ಞಿ, ಪ್ರಾಂಶುಪಾಲ ದೇವಿಚರಣ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










