





ಪುತ್ತೂರು: ಪುತ್ತೂರಿನಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದು ಪ್ರಸ್ತು ಬೆಂಗಳೂರು ದಕ್ಷಿಣ ರಾಮನಗರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿರುವ ಸುಂದರ ಗೌಡ ಎನ್ ನ.29ರಂದು ವಯೋ ನಿವೃತ್ತ ಹೊಂದಲಿದ್ದಾರೆ.



ವಿಟ್ಲ ಕಸಬಾ ಗ್ರಾಮದ ನಾಯ್ತೊಟ್ಟು ದಿ.ಲಿಂಗಪ್ಪಗೌಡ ಮತ್ತು ದಿ.ಅಬ್ಬಕ್ಕ ದಂಪತಿ ಪುತ್ರನಾಗಿರುವ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಳಂತಿಮೊಗರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿ, ಪ್ರೌಢ ಮತ್ತು ಪಿಯುಸಿ ವ್ಯಾಸಂಗವನ್ನು ವಿಠಲ ಪದವಿ ಪೂರ್ವ ಕಾಲೇಜು, ಸಿ.ಪಿ.ಎಡ್ ಪದವಿ ಸತ್ಯ ಸಾಯಿ ದೈಹಿಕ ಶಿಕ್ಷಣ ಕಾಲೇಜು ಕುಶಾಲನಗರದಲ್ಲಿ ಪೂರೈಸಿದ್ದರು. ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1986ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದ್ದರು, ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದು ಯುನಿವರ್ಸಿಟಿ ಆಫ್ ಫಿಸಿಕಲ್ ಎಜುಕೇಶನ್ ಮೈಸೂರಿನಲ್ಲಿ ಬಿ.ಪಿ.ಎಡ್ನಲ್ಲಿ ತೃತೀಯ ಮತ್ತು ಎಂ.ಪಿಎಡ್ ದ್ವಿತೀಯ ರಾಂಕ್ ಪಡೆದು 1992ರ ಸೆಪ್ಟಂಬರ್ನಲ್ಲಿ ಸುಳ್ಯದ ಅಜ್ಜಾವರ ಸರಕಾರಿ ಪ್ರೌಢಶಾಲೆ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡಿದ್ದರು. 2002ರಲ್ಲಿ ಪುತ್ತೂರು ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. 2013ರಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾಗಿ ಹುದ್ದೆಗೆ ನಿಯೋಜನೆಗೊಂಡು 2021 ರಲ್ಲಿ ಭಡ್ತಿಗೊಂಡು ಪುತ್ತೂರಿನಲ್ಲಿಯೇ ಕರ್ತವ್ಯ ಮುಂದುವರಿಸಿದರು.2024ರ ಜುಲೈನಲ್ಲಿ ಗ್ರೂಪ್ ಎ ಶ್ರೇಣಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಮತ್ತೆ ಮುಂಭಡ್ತಿ ಪಡೆದು ರಾಮನಗರ ಉಪನಿರ್ದೇಶಕರ ಕಚೇರಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸರಕಾರಿ ವೃತ್ತಿಯಲ್ಲಿ ಸುಮಾರು 33 ವರ್ಷ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ.





ಸಾಧನೆಗಳು:
ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಶಿಕ್ಷಣ ಇಲಾಖಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಚಾಂಪಿಯನ್ನಾಗಿ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಕುಮಾರಿ ಶೋಭಾವತಿ ಇವರಿಗೆ ತರಬೇತುರರಾಗಿದ್ದರು. ಅದೇ ಅವಧಿಯಲ್ಲಿ ರಾಜ್ಯಮಟ್ಟದ ಖೋಖೋ ತಂಡವನ್ನು ರಚಿಸುವಲ್ಲಿ ಯಶಸ್ವಿಯಾದರು. ಮೈಸೂರು ವಿದ್ಯಾ ವಿದ್ಯಾಲಯದಿಂದ ಬಿ.ಪಿ.ಎಡ್ ತೃತೀಯ ಮತ್ತು ಎಂ.ಪಿ.ಎಡ್ನಲ್ಲಿ ದ್ವಿತೀಯ ರಾಂಕ್ ಪಡೆದುಕೊಂಡಿರುತ್ತಾರೆ. ಅಜ್ಜಾವರದಲ್ಲಿ ಕರ್ತವ್ಯದಲ್ಲಿರುವ ವೇಳೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟನೆ, ರಾಜ್ಯಮಟ್ಟದಲ್ಲಿ ಬಾಲಕಿರ ಕಬಡ್ಡಿ ತಂಡ ದ್ವಿತೀಯ ಸ್ಥಾನಗಳಿಸಿ ಐದು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ರಾಜ್ಯಮಟ್ಟದ ಕಬಡ್ಡಿ ಹಾಗೂ ಖೋಖೋ ತರಬೇತುರಾಗಿ ಆಯ್ಕೆಯಾಗಿದ್ದರು. ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾಗಿ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಕ್ರೀಡಾ ಸ್ಪರ್ಧೆಗಳ ಮತ್ತು ಪ್ರತಿಭಾ ಕಾರಂಜಿಗಳ ನೋಡಲ್ ಅಧಿಕಾರಿಯಾಗಿ ಜಿಲ್ಲಾಮಟ್ಟದ ಸ್ಪರ್ಧೆಗಳನ್ನು ಸಂಘಟಿಸಿರುತ್ತಾರೆ. ರಾಜ್ಯ ಮಟ್ಟದ ಕರಾಟೆ, ರಾಜ್ಯ ಮಟ್ಟದ 17ರ ವಯೋಮಾನದ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಪುತ್ತೂರಿನಲ್ಲಿ ಸಂಘಟಣೆ. ರಾಮನಗರ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣಾಧಿಕಾರಿಯಾಗಿ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ, ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ ಮತ್ತು ವಿಭಾಗ ಮಟ್ಟದ ಯೋಗಾಸನ ಪಂದ್ಯಾಟಗಳನ್ನು ರಾಮನಗರದಲ್ಲಿ ಯಶಸ್ವಿಯಾಗಿ ಸಂಘಟಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಅಧಿಕಾರಿಗಳ ಸ್ನೇಹಿ, ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಹಾರಾಡಿ ಸರಕಾರಿ ಮಾದರಿ ಹಿ.ಪ್ರಾ ಶಾಲಾ ಸಹ ಶಿಕ್ಷಕಿಯಾಗಿರುವ ಪತ್ನಿ ಪಾರ್ವತಿ.ಎ. ಪುತ್ರರಾದ ಬಿ.ಇ ಪದವೀಧರ ಅಭಿಲಾಶ್.ಎನ್.ಎಸ್., ಹಾಗೂ ಬೆಂಗಳೂರಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ ಅವನೀಶ್.ಎನ್.ಎಸ್ರವರೊಂದಿಗೆ ಇಡ್ಕಿದು ಗ್ರಾಮದ ಸೂರ್ಯ ಬಳಿಯ ನಾಯ್ತೊಟ್ಟು ಸುಪರ್ವ ನಿಲಯದಲ್ಲಿ ವಾಸವಿದ್ದಾರೆ.







