ಡಾ.ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಕಲಾದರ್ಪಣ ಕನ್ನಡ ಕಣ್ಮಣಿ’ ರಾಷ್ಟ್ರೀಯ ಪ್ರಶಸ್ತಿ

0

ಪುತ್ತೂರು: ಜಾಗತಿಕವಾಗಿ ಕರ್ನಾಟಕ ಸಂಸ್ಕೃತಿ ಮತ್ತು ಭಾಷೆಯನ್ನು ಪಸರಿಸುವಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ, ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರು ಹಾಗೂ ಎಟಿಎಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ದೋಣಿಂಜೆಗುತ್ತು ಡಾ. ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಕಲಾದರ್ಪಣ ಕನ್ನಡ ಕಣ್ಮಣಿ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಕಲಾದರ್ಪಣ ಕನ್ನಡ ಹಬ್ಬ’ ಹಾಗೂ ರಾಜ್ಯೋತ್ಸವ ಸಂಭ್ರಮದ ವೇದಿಕೆಯಲ್ಲಿ ಈ ಸನ್ಮಾನ ನೆರವೇರಿತು.

ಡಾ. ಮೂಡಂಬೈಲ್ ರವಿ ಶೆಟ್ಟಿ ಅವರ ನಾಯಕತ್ವದಲ್ಲಿ ಕರ್ನಾಟಕ ಸಂಘ ಕತಾರ್ (KSQ) ತನ್ನ ರಜತ ವರ್ಷೋತ್ಸವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ 25 ವೈವಿಧ್ಯಮಯ ಮೈಲಿಗಲ್ಲು ಕಾರ್ಯಕ್ರಮಗಳ ಆಯೋಜನೆಯನ್ನು ಯಶಸ್ವಿಯಾಗಿ ಮಾಡಿತ್ತು. ನೂರಾರು ಜನರಿಗೆ ವಿದೇಶದಲ್ಲಿ ಉದ್ಯೋಗವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಅನೇಕರ ಮನೆಯನ್ನು ಬೆಳಗಿಸುವುದರ ಜೊತೆಗೆ ವಿದೇಶದಲ್ಲಿದ್ದರೂ ಸದಾ ಸ್ವದೇಶದಲ್ಲಿ ತಾನು ಬೆಳೆದ ಊರಿನ ಸರ್ವರಲ್ಲೂ ಉತ್ತಮ ಬಾಂಧವ್ಯ ಇರಿಸಿಕೊಂಡು ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಾ.ಮೂಡಂಬೈಲ್ ರವಿ ಶೆಟ್ಟಿಯವರು ಕತಾರ್‌ನಲ್ಲಿ ಸಾಂಪ್ರದಾಯಿಕ ಕಲೆ ಯಕ್ಷಗಾನ ಮತ್ತು ದೇಸಿ ಕ್ರೀಡೆ ಕಬಡ್ಡಿಯನ್ನು ಇವರ ನಾಯಕತ್ವದಲ್ಲಿ ಪರಿಚಯಿಸಿರುವುದು, ತುಳುಕೂಟ ಕತಾರ್(ಮೂರು ಬಾರಿ ಅಧ್ಯಕ್ಷರು), ಬಂಟ್ಸ್ ಕತಾರ್(ಸ್ಥಾಪಕ ಅಧ್ಯಕ್ಷರು) ಸೇರಿದಂತೆ ಹಲವು ಸಂಘಟನೆಗಳಲ್ಲಿ ನಾಯಕತ್ವ ವಹಿಸಿ ತಮ್ಮ ತಂಡದ ಜೊತೆ ಉತ್ತಮ ಸಂಘಟನೆಯ ಮೂಲಕ ನಾಡಿನ ಆಚಾರ ವಿಚಾರ ಸಂಸ್ಕೃತಿ, ಸಂಸ್ಕಾರವನ್ನು ಹಲವಾರು ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಕತಾರ್‌ನಲ್ಲಿ ಪಸರಿಸಿ ಹೊಸ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರವಿ ಶೆಟ್ಟಿ ಅವರು ಮಕ್ಕಳಿಗೆ ವೇದಿಕೆ ಒದಗಿಸಿ ಸಂಸ್ಕೃತಿಯನ್ನು ಉಳಿಸುತ್ತಿರುವ ಕಲಾದರ್ಪಣದ ಕಾರ್ಯ ಶ್ಲಾಘನೀಯ. ಈ ಗೌರವವು ರಜತ ಮಹೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಕರ್ನಾಟಕ ಸಂಘ ಕತಾರ್‌ನ ನನ್ನ ತಂಡಕ್ಕೆ ಸಲ್ಲುತ್ತದೆ, ಎಂದು ಪ್ರಶಸ್ತಿಯನ್ನು ತಮ್ಮ ತಂಡಕ್ಕೆ ಅರ್ಪಿಸಿದರು.

LEAVE A REPLY

Please enter your comment!
Please enter your name here