ವಿವೇಕಾನಂದ ಪದವಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ನೇಮಕ

0

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ( ಸ್ವಾಯತ್ತ) ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ನೇಮಕಗೊಂಡಿದ್ದಾರೆ.


ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿರುವ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಇವರು ಮೂಲತಃ ಕಾಸರಗೋಡು ಜಿಲ್ಲೆಯ ಬೆಳ್ಳೂರು ಸಮೀಪದ ಮಿತ್ತಜಾಲಿನವರಾಗಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ಸುಮಾರು 30 ವರ್ಷಗಳಿಂದ ಉಪನ್ಯಾಸಕರಾಗಿ ಹಾಗೂ ವಿಭಾಗ ಮುಖ್ಯಸ್ಥ ರಾಗಿ ಹಾಗೂ ಉಪಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಇವರು ಎಂಫಿಲ್ ಪದವೀಧರರಾಗಿದ್ದು “ಬಯೋಡೈವರ್ಸಿಟಿ ಆಫ್ ಮೂಕಾಂಬಿಕಾ ವೈಲ್ಡ್ ಲೈಫ್ ಸಾಂಕ್ಚುರಿ ಇನ್ ಕೊಡಚಾದ್ರಿ ಹಿಲ್ಸ್” ಎನ್ನುವ ವಿಷಯದ ಮೇಲೆ ಇಸ್ರೋ ದ ನೆರವಿನೊಂದಿಗೆ ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರೊಂದಿಗೆ ಜೊತೆಗೂಡಿ ಯೋಜನೆಯನ್ನು ರೂಪಿಸಿದ್ದಾರೆ. ಸಸ್ಯಶಾಸ್ತ್ರ ವಿಭಾಗದಲ್ಲಿ ಅಧ್ಯಯನದಲ್ಲಿ ನಿರತರಾದ ನೂರಾರು ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಕುರಿತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಬಂಧಗಳನ್ನು ರಚಿಸಲು ಮಾರ್ಗದರ್ಶನವನ್ನು ನೀಡಿರುತ್ತಾರೆ. ಅಲ್ಲದೇ ಕಾಲೇಜಿನ ವಿವಿಧ ಘಟಕಗಳಲ್ಲಿ ಸಂಯೋಜಕರಾಗಿಯೂ ಅತ್ಯುತ್ತಮ ಕಾರ್ಯವನ್ನು ನಡೆಸಿ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ತಿಳಿಸಿದ್ದಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು,ಸದಸ್ಯರು ಹಾಗೂ ಉಪನ್ಯಾಸಕ,ಉಪನ್ಯಾಸಕೇತರ ವೃಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here