




ಪುತ್ತೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 38 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿರಿಜಾ ಕೆ. ಅವರಿಗೆ ಸಂಘದ ವತಿಯಿಂದ ಸಂಘದ ರೈತಸ್ನೇಹಿ ಸಭಾಂಗಣ ಪೆರ್ಲಂಪಾಡಿಯಲ್ಲಿ ಡಿ.2ರಂದು ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡಿತ್ತಾಯ ಅವರು ಮಾತನಾಡಿ, ಕೊಳ್ತಿಗೆಗೂ ನಮಗೂ ವಿಶೇಷ ಬಾಂಧವ್ಯ ಇದೆ.ಅದೇ ಬಾಂಧವ್ಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ.ಈ ಹಿಂದೆ ಕೊಳ್ತಿಗೆ ಮಂಡಲ ಪಂಚಾಯತ್ ಇರುವಾಗ ನಾನು ಮಂಡಲ ಸದಸ್ಯನಾಗಿಯೂ ಕೆಲಸ ಮಾಡುವ ಅವಕಾಶ ಸಿಕ್ಕಿತು.ಸಂಘದಲ್ಲಿ 38 ವರ್ಷಗಳ ಕಾಲ ಸೇವೆ ಮಾಡಿ ನಿವೃತ್ತಿಯಾದ ಗಿರಿಜಾ ಕೆ.ಅವರು ಕುದ್ಕುಳಿ ಕುಟುಂಬದ ಮಗಳಾಗಿ ಇತರರಿಗೆ ಪ್ರೇರಣೆಯಾಗುವ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರ ಸೇವೆಯೇ ಕಾರ್ಯಕ್ರಮಕ್ಕೆ ಆಗಮಿಸಿದ ಜನಸಂಖ್ಯೆ ನೋಡುವಾಗ ತಿಳಿಯುತ್ತದೆ ಎಂದು ಹೇಳಿ ಗಿರಿಜಾ ಅವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.






ಗಿರಿಜಾ ಕೆ.ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ,ದ.ಕ.ಜಿ.ಕೇ.ಸ.ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ 3 ಸಿಇಓ ಗಳ ನಿವೃತ್ತಿ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಸಂಘದ ಸಿಇಓ ಆಗಿದ್ದ ಗಿರಿಜಾ ಕೆ. ಅವರು ಸಂಘದ ಹಾಗೂ ಸದಸ್ಯರ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರು.ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಶೇ.100.ಸಾಲ ವಸೂಲಾತಿ ಮಾಡಿದ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಡಿ.5 ರೊಳಗೆ ಬೆಳೆ ವಿಮೆ ಪರಿಹಾರ ಬಿಡುಗಡೆ ಸಾಧ್ಯತೆ
ಡಿ.5ರೊಳಗೆ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುವ ಸಾಧ್ಯತೆ ಇದ್ದು,ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕಾರಿಗಳ ಜತೆ ಮಾತನಾಡಿದ್ದಾರೆ.ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಕೂಡ ಈ ಕುರಿತು ಅಧಿಕಾರಿಗಳಲ್ಲಿ ಮಾತನಾಡಿದ್ದಾರೆ.ಈ ನಿಟ್ಟಿನಲ್ಲಿ ಡಿ.5 ರೊಳಗೆ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ಅವರು ಮಾತನಾಡಿ, ಕೊಳ್ತಿಗೆ ಸಂಘದ ಸಿಇಓ ಗಿರಿಜಾ ಕೆ.ಅವರು ಎಲ್ಲರಿಗೂ ಉತ್ತಮ ಸೇವೆ ನೀಡಿ ಎಲ್ಲರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಗ್ರಾಮ ದೇವರಾದ ಷಣ್ಮುಖ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ವೆಂಕಟರಮಣ ಕೆ.ಎಸ್ ಕಟ್ಟಪುಣಿ ಮಾತನಾಡಿ, ಪಾಲ್ತಾಡು ನಾರಾಯಣ ರೈ ಅವರು ಈ ಸಂಘವನ್ನು ಪ್ರಾರಂಭಿಸುವ ಮೂಲಕ ಗ್ರಾಮದ ರೈತಾಪಿ ವರ್ಗಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ.ಸಂಘದಲ್ಲಿ ಕೆಲಸ ನಿರ್ವಹಿಸಿರುವ ಸಿಇಓ ಗಳು ಒಬ್ಬರಿಗಿಂತ ಇನ್ನೊಬ್ಬರು ಉತ್ತಮ ಎಂಬಂತೆ ಕೆಲಸ ನಿರ್ವಹಿಸಿ ಸಂಘದ ಅಭಿವೃದ್ಧಿಗೆ ಕಾರಣವಾಗಿದ್ದಾರೆ.ಗಿರಿಜಾ ಕೆ. ಅವರ ಪ್ರಾಮಾಣಿಕ ಹಾಗೂ ಜನಸ್ನೇಹಿ ಸೇವೆಗೆ ಪೂರಕವೆಂಬಂತೆ ವಿದಾಯ ಸಮಾರಂಭಕ್ಕೆ ಸೇರಿದ ಜನರೇ ಸಾಕ್ಷಿ.ನಮ್ಮ ಕೊಳ್ತಿಗೆ ಸಹಕಾರ ಸಂಘದಲ್ಲಿ ಹಿರಿಯರನ್ನು ಗೌರವಿಸುವ ಕಾರ್ಯವನ್ನು ಈ ಹಿಂದಿನಿಂದಲೂ ಮಾಡಲಾಗುತ್ತಿದ್ದು,ಅವರ ನಿಸ್ವಾರ್ಥ ಸೇವೆಗೆ ಈ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದರು.
ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ ಮಾತನಾಡಿ,ಗಿರಿಜಾ ಕೆ.ಅವರು 38 ವರ್ಷಗಳ ಪ್ರಾಮಾಣಿಕ ಹಾಗೂ ನಿಷ್ಟೆಯ ಸೇವೆಯು ಸಂಘದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ಹೊಂದಿದೆ. ಸಂಘದಲ್ಲಿ ಆರ್ಥಿಕ ಶಿಸ್ತು ಬೆಳೆಸಿಕೊಂಡು ನೇರ ನಡೆ ನುಡಿಯ ವ್ಯಕ್ತಿತ್ವದಿಂದ ಸಂಘಕ್ಕೆ ಲಾಭ ತಂದವರು.ಕುದ್ಕುಳಿಯ ಕುಟುಂಬದಲ್ಲಿ ಬೆಳೆದು ಎಡಮಂಗಲದಲ್ಲಿ ಕೃಷಿ ಕಾಯಕದ ಜತೆಗೆ ಸಂಘದಲ್ಲೂ ಉತ್ತಮ ಸೇವೆ ಮಾಡಿದ್ದಾರೆ ಅವರ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದರು.

ಡಿಸಿಸಿ ಬ್ಯಾಂಕ್ ನೆರವು ನೀಡಿ
ಸಂಘದ ಸಭಾ ಭವನ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್ನಿಂದ ಅನುದಾನದ ಕುರಿತಂತೆ ಮನವಿ ಮಾಡಿದ್ದು, ಈ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಶಶಿಕುಮಾರ್ ರೈ ಅವರಲ್ಲಿ ವಸಂತ ಕುಮಾರ್ ರೈ ಅವರು ಮನವಿ ಮಾಡಿದರು.
ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಉಪಾಧ್ಯಕ್ಷ ಗಣೇಶ ಭಟ್ ಮಾಫಲಮಜಲು ಮಾತನಾಡಿ, ಸೇವೆಯಿಂದ ನಿವೃತ್ತಿ ಹೊಂದಿದ ಗಿರಿಜಾ ಅವರು ಹಾಗೂ ನಾವು ಒಂದೇ ಬೈಲಿನವರು.ಅವರು ನಿವೃತ್ತಿಯ ಬಳಿಕವೂ ನಮ್ಮ ಊರಿನಲ್ಲೇ ಇದ್ದು ಸಂಘಕ್ಕೆ ಇನ್ನೂ ಸೇವೆ ದೊರಕುವಂತಾಗಲಿ ಎಂದರು.
ನವೋದಯ ಸ್ವಸಹಾಯ ಸಂಘಗಳ ಕೊಳ್ತಿಗೆ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು ಮಾತನಾಡಿ, ಗಿರಿಜಾ ಕೆ.ಅವರು ಕರ್ತವ್ಯದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಶ್ರಮಿಸಿದವರು.ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಕ್ಲಪ್ತ ಸಮಯದಲ್ಲಿ ಸಾಲ ಮಂಜೂರಾತಿ ಸೇರಿ ವಿವಿಧ ಸಹಕಾರ ನೀಡಿದ್ದಾರೆ ಎಂದರು.
ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಕಲ್ಪವಲ್ಲಿ ಮಾತನಾಡಿ, ಸಂಘದಲ್ಲಿ ಆರ್ಥಿಕ ಶಿಸ್ತು ಮೂಡಿಸಿದವರಲ್ಲಿ ಗಿರಿಜಾ ಕೆ.ಅವರ ಆದರ್ಶ ಪ್ರಾಯರಾಗಿ ಕಾಣುತ್ತಿದ್ದಾರೆ.ವೈಯಕ್ತಿಕವಾಗಿ ನನ್ನ ಮಗನ ವಿಧ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ಅಂತಹ ಅದೆಷ್ಟೋ ಜನರಿಗೆ ಗಿರಿಜಾ ಕೆ. ಅವರು ಮಾರ್ಗದರ್ಶಕರಾಗಿದ್ದಾರೆ ಎಂದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ಪೆರ್ಲಂಪಾಡಿ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅವರು,ಗಿರಿಜಾ ಕೆ.ಅವರು ದೊಡ್ಡ ಆಲದ ಮರದ ರೂಪದಲ್ಲಿ ನಿಂತವರು. ಎಲ್ಲರನ್ನೂ ಸಮಾನವಾಗಿ ಕಂಡು ಸ್ಥಿತಪ್ರಜ್ಞರಾಗಿ ಸಮಾಜಕ್ಕೆ ಕೊಡುಗೆಯಾದವರು ಎಂದರು.
ಸಂಘದ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಾಲಗಂಗಾಧರ ಕೆ. ಮಾತನಾಡಿ, ಗಿರಿಜಾ ಅವರು ಸಾಲ ಮಂಜೂರಾತಿ ವಿಭಾಗದಲ್ಲಿ ಕೆಲಸ ಮಾಡಿದವರು.27 ವರ್ಷಗಳ ಹಿಂದೆ ನಾನು ಸೇವೆಗೆ ಸೇರಿದಾಗ ಉತ್ತಮ ಮಾರ್ಗದರ್ಶನ ಮಾಡಿದವರು. ಅವರ ನಡೆ ನುಡಿಯಿಂದ ಎಲ್ಲರ ಮನಗೆದಿದ್ದಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಿರಿಜಾ ಕೆ. ಅವರು,38 ವರ್ಷಗಳ ಹಿಂದೆ ಸೇವೆ ಸೇರಿದ ನಾನು 2 ವರ್ಷಗಳ ಕಾಲ ವೇತನವಿಲ್ಲದೆ ಕೆಲಸ ಮಾಡಿದ್ದೇನೆ.ಬಳಿಕ ದಿನಕ್ಕೆ ರೂ.10 ವೇತನಕ್ಕೆ ಕೆಲಸ ಮಾಡಿದ್ದೇನೆ.ಸಂಘದ ಮಾಜಿ ಅಧ್ಯಕ್ಷರಾದ ಕುಂಟಿಕಾನ ಲಕ್ಷ್ಮಣ ಗೌಡ ಹಾಗೂ ಕುದ್ಕುಳಿ ವೆಂಕಟರಮಣ ಗೌಡರ ಸಹಕಾರದಿಂದ ಕೊಳ್ತಿಗೆ ಸಹಕಾರ ಸಂಘದಲ್ಲಿ ಕೆಲಸ ಮಾಡುವ ಅವಕಾಶ ದೊರಕಿದೆ.ಸಂಘದ ಎಲ್ಲಾ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ, ಸಿಇಓಗಳ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ನಾನು ಸಂಘದಲ್ಲಿ ಕೆಲಸ ಮಾಡಿದ್ದೇನೆ.ಕೊಳ್ತಿಗೆ ಸಹಕಾರ ಸಂಘದಿಂದ ನನ್ನ ಪರಿಚಯ ಸಮಾಜಕ್ಕೆ ಆಗುವಂತಾಗಿದೆ.ನನ್ನ ಹಾಗೂ ಕುಟುಂಬದ ಅಭ್ಯುದಯದಲ್ಲಿ ಕೊಳ್ತಿಗೆ ಸಹಕಾರ ಸಂಘದ ಪಾತ್ರ ಮಹತ್ವದ್ದು. ನನಗೇ ಶತ್ರುಗಳೇ ಇಲ್ಲ.ಎಲ್ಲರೂ ಮಿತ್ರರೇ.ಕೊಳ್ತಿಗೆ ಹಾಗೂ ಪಾಲ್ತಾಡಿ ಗ್ರಾಮದ ವ್ಯಾಪ್ತಿಯ ಸಂಘದ ಸದಸ್ಯರ ಸಹಕಾರವೇ ನನಗೆ ಬಲ ತಂದಿದೆ.ಇಂತಹ ಸಂಘದಲ್ಲಿ ಕೆಲಸ ಮಾಡಬೇಕಾದರೆ ಪುಣ್ಯ ಮಾಡಿರಬೇಕು.ನನ್ನ ಜೀವನದ ಮೌಲ್ಯ ಹೆಚ್ಚಿಸಿದ ಕೊಳ್ತಿಗೆ ಸಹಕಾರ ಸಂಘಕ್ಕೆ ನಾನು ಯಾವಾಗಲೂ ಚಿರ ಋಣಿಯಾಗಿರುವೆ.ನನ್ನ ಪತಿ ದಾಮೋದರ ಹಾಗೂ ಮಕ್ಕಳ ಸಹಕಾರದ ಪಾಲೂ ದೊಡ್ಡದು ಇದೆ ಎಂದರು.
ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ ಗಿರಿಜಾ ಕೆ.ಅವರು ಉತ್ತಮ ಕುದ್ಕಳಿ ಮನೆತನದಿಂದ ಬಂದವರು, ಅವರು ತಮ್ಮ ಸೇವಾ ಅವಧಿಯಲ್ಲಿ ಎಲ್ಲರ ವಿಶ್ವಾಸ, ಪ್ರೀತಿ ಸಂಪಾದಿಸಿ ಸಾರ್ಥಕ ಮನೋಭಾವದೊಂದಿಗೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ ಎಂದು ಹೇಳಿದರು. ನಮ್ಮ ಸಹಕಾರ ಸಂಘದಲ್ಲಿ ಸದಸ್ಯರಿಗೆ ಉತ್ತಮ ಸೇವೆಯನ್ನು ನಾವು ನೀಡುತ್ತಿದ್ದು ಎಲ್ಲರ ಸಹಕಾರ, ಪ್ರೋತ್ಸಾಹದ ಫಲವಾಗಿ ಸಂಘ ಅಭಿವೃದ್ಧಿಯಾಗಿದೆ.ವಿಶೇಷವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರ ಬೇಕೆಂಬ ದೃಷ್ಟಿಯಿಂದ ಕೆಲಸ ಮಾಡಿದವರು ಎಂದರು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನವೋದಯ ಸ್ವಸಹಾಯ ಸಂಘಗಳ ಪಾಲ್ತಾಡಿ ಒಕ್ಕೂಟದ ಅಧ್ಯಕ್ಷೆ ಸುನಂದ ಪಲ್ಲತಡ್ಕ ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಜನಾರ್ದನ ಗೌಡ ಪಿ.,ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶರತ್ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶುಭಹಾರೈಕೆಗೆ ಜನ ಸಾಗರ
ಗಿರಿಜಾ ಕೆ. ಅವರ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.ಬಳಿಕ ಅವರನ್ನು ಶುಭಹಾರೈಸಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ,ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದು, ಗಿರಿಜಾ ಅವರ ಕರ್ತವ್ಯ ನಿಷ್ಟೆ ಗೆ ಸಾಕ್ಷಿಯಾಗಿತ್ತು.ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬೆಳ್ಳಾರೆ, ಸವಣೂರು, ಕಬಕ,ಈಶ್ವರಮಂಗಲ,ಕುಂಬ್ರ,ಪುತ್ತೂರು ಮುಖ್ಯಶಾಖೆ,ದರ್ಬೆ ಶಾಖೆಯ ಪ್ರಬಂಧಕರು ಹಾಗೂ ಸಿಬ್ಬಂದಿಗಳು,ಆರ್ಯಾಪು,ಬನ್ನೂರು,ಕಾವು,ಪಾಣಾಜೆ,ಐನೆಕಿದು,ಎಡಮಂಗಲ,ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಹಾಗೂ ಸಿಬ್ಬಂದಿಗಳು ಪಾಲ್ಗೊಂಡು ಶುಭಹಾರೈಸಿದರು.
ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನೋದ್ ರೈ ಪಾಲ್ತಾಡು,ಕೊಳ್ತಿಗೆ ಸಹಕಾರ ಸಂಘದ ಮಾಜಿ ನಿರ್ದೇಶಕರು,ನವೋದಯ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿಗಳಿಂದ,ನವೋದಯ ಸ್ವಸಹಾಯ ಸಂಘಗಳು,ರೈತ ಮಿತ್ರಕೂಟ,ವರ್ತಕರ ಸಂಘ ಕೊಳ್ತಿಗೆ,ಶ್ರೀ ಷಣ್ಮುಖ ದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟ,ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಪೆರ್ಲಂಪಾಡಿ, ಒಕ್ಕಲಿಗ ಗೌಡ ಸಮಾಜ ಸಂಘ,ಕೊಳ್ತಿಗೆ ಗ್ರಾ.ಪಂಚಾಯತ್, ಕೊಳ್ತಿಗೆ ಯುವಕ ಮಂಡಲ,ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘ, ಮಧುರ ಹಳೆ ವಿದ್ಯಾರ್ಥಿ ಸಂಘ ಸಬ್ಬಡ್ಕ,ಮಧುರ ಯುವ ವೃಂದ ದುಗ್ಗಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,ಪೆರ್ಲಂಪಾಡಿ ಶಾಲಾಭಿವೃದ್ದಿ ಸಮಿತಿ, ಕುದ್ಕುಳಿ ಕುಟುಂಬಸ್ಥರು ,ಬೆಳ್ಳಾರೆ ಜೆಸಿಐ ,ಮೆಸ್ಕಾಂ ಸೇರಿದಂತೆ ಹತ್ತು ಹಲವಾರು ಸಂಸ್ಥೆಗಳ ವತಿಯಿಂದ ಹಾಗೂ ಸಾರ್ವಜನಿಕರು ವೈಯಕ್ತಿಕವಾಗಿ ಅಭಿನಂದಿಸಿದರು.
ಮಧ್ಯಾಹ್ನ ಭೋಜನ
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಿಗ್ಗೆ ಚಹಾ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ಸಿಬ್ಬಂದಿ ರೇಶ್ಮಾ ಅವರು ಪ್ರಾರ್ಥಿಸಿದರು.ಬಳಿಕ ಸನ್ಮಾನ ಪತ್ರ ವಾಚಿಸಿದರು. ಸಂಘದ ನಿರ್ದೇಶಕರಾದ ರಾಜೇಶ್ ಗೌಡ ಕುದ್ಕುಳಿ ಸ್ವಾಗತಿಸಿದರು.ಪ್ರವೀಣ ಜಿ.ಕೆ.ವಂದಿಸಿದರು.ಪ್ರಭಾಕರ ರೈ ಕೆ ಹಾಗೂ ಸತೀಶ್ ಪಾಂಬಾರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಪವನ್ ಡಿ.ಜಿ,ಸುನಂದ ಲೋಕನಾಥ ಗೌಡ, ಜಲಜಾಕ್ಷಿ ಮಾಧವ ಗೌಡ,ಅಣ್ಣಪ್ಪ ನಾಯ್ಕ,ಕರಿಯ,ಪ್ರೇಮಾ ಗಂಗಾಧರ ಗೌಡ,ಲೆಕ್ಕಿಗರಾದ ಸುಬ್ಬಯ್ಯ ಕೆ.,ಸಿಬ್ಬಂದಿಗಳಾದ ಭರತ್ ರಾಜ್ ಕೆ.,ಪುನೀತ್ ಡಿ.ವಿ.,ಹುಕ್ರಪ್ಪ ಗೌಡ,ದಯಾನಂದ, ಪ್ರಮೋದ್, ಹರ್ಷಿತ್ ಸಹಕರಿಸಿದರು.









