




ಸ್ಯಾಂಡ್ ಆರ್ಟ್‌ನಲ್ಲಿ ಪ್ರಥಮ ಎಂಬ ಹೆಗ್ಗಳಿಕೆ | 12 ಮಂದಿಯಿಂದ 500ಕ್ಕೂ ಮಿಕ್ಕಿ ಹಿನ್ನೆಲೆ ಸಂಗೀತ




ಪುತ್ತೂರು:ಕಣ್ಣು ತೆರೆದು ಚಿತ್ರ ಬಿಡಿಸುವುದೇ ಕಷ್ಟ, ಅದರಲ್ಲೂ ಕಣ್ಣಿಗೆ ಬಟ್ಟೆ ಕಟ್ಟಿ ಅರ್ಥಪೂರ್ಣ ಚಿತ್ರ ಬಿಡಿಸುವುದು ಯಕ್ಷ ಪ್ರಶ್ನೆಯಾಗಿದೆ, ಈ ನಿಟ್ಟಿನಲ್ಲಿ ಮೂರನೇ ಕಣ್ಣಿನಿಂದ ನೋಡುವ ವಿದ್ಯೆಯಾಗಿರುವ ಗಾಂಧಾರಿ ವಿದ್ಯೆ(ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ) ಮೂಲಕ ಸುಮಾರು 350ಕ್ಕೂ ಮಿಕ್ಕಿ ಕಲಾಕೃತಿಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 24 ಗಂಟೆ ಹಿನ್ನೆಲೆ ಗಾಯನದ ಮೂಲಕ ರಚಿಸುವುದರಿಂದ ಏಷ್ಯಾನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಇಂದ್ರಪಸ್ಥ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಹಾಗೂ ಪುತ್ತೂರಿನ ಕಲ್ಲಾರೆಯ ವರ್ಣಕುಟೀರದ ವಿದ್ಯಾರ್ಥಿನಿ ಶಮಿಕ ಎಂ.ಕೆ(14 ವರ್ಷ, 7 ತಿಂಗಳು)ರವರು ಸೇರ್ಪಡೆಯಾಗಿದ್ದಾರೆ ಮಾತ್ರವಲ್ಲ ಸ್ಯಾಂಡ್ ಆರ್ಟ್ ನಿಂದ ಪ್ರಥಮ ಎಂಬ ಹೆಗ್ಗಳಿಕೆಯನ್ನು ಶಮಿಕರವರು ಪಡೆದುಕೊಂಡಿದ್ದಾರೆ.






ಡಿ.6ರ ಬೆಳಿಗ್ಗೆ 10 ಗಂಟೆಯಿಂದ ಡಿ.7ರ ಬೆಳಿಗ್ಗೆ 10 ಗಂಟೆಯವರೆಗೆ ಅಂದರೆ ನಿರಂತರ 24 ಗಂಟೆ ಕಣ್ಣಿಗೆ ಬಟ್ಟೆ ಕಟ್ಟಿ ಹಿನ್ನೆಲೆ ಗಾಯನದೊಂದಿಗೆ ಕಲಾಕೃತಿಯನ್ನು ಬಿಡಿಸುವಲ್ಲಿ ಶಮಿಕ ಎಂ.ಕೆ.ರವರು ಯಶಸ್ವಿಯಾಗಿದ್ದಾರೆ. ಮೊದಲೇ ಸೂಚಿಸಿದಂತೆ ಶಮಿಕರವರು ಏಷ್ಯಾನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ಗೆ 300 ಕಲಾಕೃತಿಯನ್ನು ರಚಿಸುವುದಾಗಿತ್ತು. ಆದರೆ ಶಮಿಕರವರು ಸರ್ವರ ಆಶೀರ್ವಾದದೊಂದಿಗೆ 300ರ ಬದಲಿಗೆ 350ಕ್ಕೂ ಮಿಕ್ಕಿ ಕಲಾಕೃತಿಗಳನ್ನು ಹಿನ್ನೆಲೆಗಾಯನದ ಅನುಗುಣವಾಗಿ ರಚಿಸಿರುತ್ತಾರೆ. ಇಪ್ಪತ್ನಾಲ್ಕು ಗಂಟೆಯ ಅವಧಿಯಲ್ಲಿ ವರ್ಣಕುಟೀರದ ಸದಸ್ಯರು ಸುಮಾರು 500ಕ್ಕೂ ಮಿಕ್ಕಿ ಹಿನ್ನೆಲೆಗಾಯನವನ್ನು ಹಾಡಿ ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿರುವ ಶಮಿಕ ಎಂ.ಕೆರವರಿಗೆ ಸಾಥ್ ನೀಡಿರುತ್ತಾರೆ. ಶಂಖನಾದದೊಂದಿಗೆ ಆರಂಭವಾದ ಈ ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಶ್ರೀ ಮಹಾಲಿಂಗೇಶ್ವರ ದೇವರ ಹಾಡಿನೊಂದಿಗೆ ಸಮಾಪ್ತಿಗೊಂಡಿತು. ವಿಶೇಷ ಏನೆಂದರೆ ಕಾರ್ಯಕ್ರಮ ಆರಂಭವಾಗುವ ಮುನ್ನ ಬೆಳಗಿಸಿದ ದೀಪ ಇಪ್ಪತ್ನಾಲ್ಕು ಗಂಟೆಯವರೆಗೂ ಆರದೇ ಇರುವುದೇ ಕಾರ್ಯಕ್ರಮದ ವಿಶೇಷವಾಗಿದೆ.
ಶಮಿಕರವರಿಗೆ ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್
ಪ್ರಶಸ್ತಿ ಪತ್ರ ಹಸ್ತಾಂತರ:
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯಸ್ಥ ಡಾ|ಮನೀಷ್ ವೈಷ್ಣೋಯಿರವರು ಭಾಗವಹಿಸಬೇಕಿತ್ತು. ಕಾರಣಾಂತರಗಳಿಂದ ವಿಮಾನದ ಸಮಸ್ಯೆಯಾಗಿದ್ದರಿಂದ ಅವರ ಬದಲಾಗಿ ತಮಿಳ್ನಾಡಿನಿಂದ ಸುಮಾರು 8೦೦ಕಿ.ಮೀ ತಮ್ಮ ಕಾರಿನಲ್ಲಿ ಪುತ್ತೂರಿಗೆ ಆಗಮಿಸಿದ ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಇದರ ಸ್ಟೇಟ್ ಕೋ-ಆರ್ಡಿನೇಟರ್ ಹೆಡ್ ಭರತ್ ಕಾಮತ್‌ರವರು ಶಮಿಕರವರ ಸಾಧನೆಗೆ ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿರುವ ಕುರಿತು ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿ, ಪ್ರಸ್ತುತ ವಿದ್ಯಾಮಾನದಲ್ಲಿ ಕುಟುಂಬದಲ್ಲಿ ಹೆಣ್ಣು ಮಗಳು ಜನಿಸಿದರೆ ಏನೋ ಒಂದು ತಾತ್ಸಾರ. ಆದರೆ ಅಂತಹ ಕುಟುಂಬದವರಿಗೆ ಶಮಿಕರವರ ಸಾಧನೆ ಸ್ಫೂರ್ತಿಯಾಗಲಿ. ಕೇಂದ್ರ ಸರಕಾರದ ಭೇಟಿ ಬಚಾವೋ ಭೇಟಿ ಪಡಾವೋ ಎಂಬಂತೆ ಹೆಣ್ಣು ಮಕ್ಕಳನ್ನು ಸಮಾಜದ ಉತ್ತುಂಗಕ್ಕೆ ತರುವಲ್ಲಿ ಪ್ರಯತ್ನ ಪಡೋಣ ಎಂದರು.

ಶಮಿಕರವರ ಸಾಧನೆ ಎಲ್ಲರಿಗೂ ಉದಾಹರಣೆ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರ ಟ್ರಸ್ಟ್ ಇದರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಯಾರಲ್ಲಿ ಸಾಧನೆ ಮಾಡಬೇಕು ಎನ್ನುವ ಇಚ್ಛಾಶಕ್ತಿ ಇರುವವರಿಗೆ ಶಮಿಕರವರ ಸಾಧನೆ ಉದಾಹರಣೆಯಾಗಬಲ್ಲುದು. ಶಮಿಕರವರ ಸಾಧನೆ ಹಿಂದೆ ವರ್ಣಕುಟೀರದ ಪ್ರವೀಣ್‌ರವರ ತಂಡದ ಪ್ರಯತ್ನ ಮೆಚ್ಚುವಂತಹುದು. ಕೇವಲ ಓದುವುದಕ್ಕೆ ಮಾತ್ರ ಸೀಮಿತಗೊಳಿಸದೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಹೆಚ್ಚೆಚ್ಚು ಪ್ರಯತ್ನಪಡಬೇಕು. ತಮ್ಮ ಮಕ್ಕಳಲ್ಲಿರುವ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡುತ್ತಾ ಮುಂದೊಂದು ದಿನ ತಮ್ಮ ಮಕ್ಕಳು ಸಾಧನೆಯನ್ನು ಮಾಡಿದಾಗ ನಿಜಕ್ಕೂ ಹೆತ್ತವರು ಕಣ್ತುಂಭಿಕೊಳ್ಳುತ್ತಾರೆ ಎಂದರು.
ಶಮಿಕರವರ ಸಾಧನೆ ಜಗತ್ತೇ ಮೆಚ್ಚುವಂತಹುದು-ವೀಣಾ:
ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾರವರು ಮಾತನಾಡಿ, ಶಮಿಕರವರು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು ಅವಳ ಸಾಧನೆ ಮಾತ್ರ ಜಗತ್ತೇ ಮೆಚ್ಚುವಂತಹುದು. ಮೂರು ಗಂಟೆಗೆ 36 ಚಿತ್ರಗಳ ಅನಾವರಣಿಕೆ ನೋಡಿದಾಗ ಶಮಿಕರವರ ಪರಿಶ್ರಮವನ್ನು ನಾವು ಮೆಚ್ಚಬೇಕಾಗಿದೆ. ಸಾಧನೆ ಮಾಡುವಲ್ಲಿ ನಮಗೆ ಇಚ್ಛಾಶಕ್ತಿ ಮೊದಲು ಬೇಕಾಗುತ್ತದೆ. ಶಮಿಕರವರಲ್ಲಿನ ಇಚ್ಛಾಶಕ್ತಿಯು ಇಂದು ಜಗತ್ತಿಗೆ ಪರಿಚಯಿಸಿಕೊಂಡು ವರ್ಣಕುಟೀರದ ಹೆಸರನ್ನು ಎಲ್ಲೆಡೆ ಪಸರಿಸುವಂತಾಗಿದೆ ಎಂದರು.

ಅಭಿನಂದನೆ:
ಶಮಿಕರವರು ಚಿತ್ರ ಬಿಡಿಸುವ ಸಂದರ್ಭದಲ್ಲಿ ಅವರಿಗೆ ಹಿನ್ನೆಲೆಗಾಯಕರಾಗಿ ಸಹಕರಿಸಿದ ಗೀತಾಲಕ್ಷ್ಮೀ ಕೆದಿಮಾರು, ಅನುಷಾ ಅಮ್ಮಣ್ಣಾಯ, ಬಾಲಸುಬ್ರಹ್ಮಣ್ಯ ಶರ್ಮ, ಹೇಮಂತ್ ರಾಗಿದಕುಮೇರು, ರವಿ ಅಜ್ಜಿಕಲ್ಲು, ನಿರೀಕ್ಷಾ, ರಿತೀಕ್ಷಾ, ಖುಶಿ, ವಿಶ್ಮಾ ಅಜ್ಜಿಕಲ್ಲು, ಮೈತ್ರಿ, ಸುರೇಶ್ ಉಪ್ಪಿನಂಗಡಿ, ಲಕ್ಷ್ಮೀಸಾಗರ್ ಹಾಗೂ ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಇದರ ಸ್ಟೇಟ್ ಹೆಡ್ ಸದಸ್ಯರಾದ ಅನಂತ್ ಕಾಮತ್, ಅನೂಪ್ ಕಾಮತ್‌ರವರನ್ನು ವರ್ಣಕುಟೀರ ಸಂಸ್ಥೆಯ ವತಿಯಿಂದ ಹಾಗೂ ಸಾಧಕಿ ಶಮಿಕರವರ ಕುಟುಂಬಿಕರ ಪರವಾಗಿ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಏಷ್ಯನ್ ಬುಕ್ ಆಫ್ ರೆಕಾರ್ಡ್ ವಿಜೇತೆ ಶಮಿಕರವರ ತಂದೆ ಕೇಶವ ಪಿ.ಎಂ, ತಾಯಿ ಗೀತಾಮಣಿ, ಅಜ್ಜ-ಅಜ್ಜಿ ಸಹಿತ ಕುಟುಂಬಸ್ಥರು, ಪುತ್ತೂರು ತಾಲೂಕು ಇಂಜಿನಿಯರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ರಮೋದ್ ಕುಮಾರ್, ರೋಟರಿ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರ್ಣಕುಟೀರ ಕಲಾ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರರವರು ಸ್ವಾಗತಿಸಿ, ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ, ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಪಂಚಮಂ ಕಾರ್ಯ ಸಿದ್ಧಿ-ಸನ್ಮಾನ..
ಪಂಚಮಂ ಕಾರ್ಯ ಸಿದ್ಧಿ ಎಂಬಂತೆ ಏಷ್ಯಾನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧಕಿ ಶಮಿಕ ಎಂ.ಕೆ, ಶಮಿಕ ಎಂ.ಕೆರವರಿಗೆ ಸೂಕ್ತ ಮಾರ್ಗದರ್ಶನ ನೀಡಿದ ವರ್ಣಕುಟೀರ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ, ಶಮಿಕರವರಿಗೆ ಆರಂಭದಲ್ಲಿ ಆನ್‌ಲೈನ್ ಮೂಲಕ ಗಾಂಧಾರಿ ವಿದ್ಯೆ ಬೋಧಿಸಿದ ಆಲೂರು ಪಂಚಮುಖಿ ಧ್ಯಾನ ಕೇಂದ್ರದ ಸಮ್ಮೋಹಿನಿ ವಿದ್ಯೆ ಹಾಗೂ ಗಾಂಧಾರಿ ವಿದ್ಯೆ ಪರಿಣತ ಸತೀಶ್ ಪದ್ಮನಾಭ, ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಇದರ ಸ್ಟೇಟ್ ಕೋ-ಆರ್ಡಿನೇಟರ್ ಹೆಡ್ ಭರತ್ ಕಾಮತ್, ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೇಕ್ ಸಂಭ್ರಮ..
ಗಾಂಧಾರಿ ವಿದ್ಯೆ ಮೂಲಕ ನಿರಂತರ 24 ಗಂಟೆ ಸುಮಾರು 350ಕ್ಕೂ ಮಿಕ್ಕಿ ಕಲಾಕೃತಿಗಳ ಪ್ರದರ್ಶನಗೈಯ್ದ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಶಮಿಕ ಎಂ.ಕೆರವರ ಸಹಪಾಠಿಗಳು ತಮ್ಮ ಹೆಮ್ಮೆಯ ಸಹಪಾಠಿ ಶಮಿಕರವರ ಸಾಧನೆಗೆ ಸಂಭ್ರಮಿಸುವ ಸಲುವಾಗಿ ಶಮಿಕರವರ ಸಹಪಾಠಿ ವಿದ್ಯಾರ್ಥಿನಿಯರು ತಂದಂತಹ ಕೇಕನ್ನು ಶಮಿಕರವರು ಕತ್ತರಿಸಿ ಸಂಭ್ರಮವನ್ನು ದ್ವಿಗುಣಗೊಳಿಸಿದರು.
ಪ್ರತಿ 3 ಗಂಟೆಗೆ 15 ನಿಮಿಷ ವಿಶ್ರಾಂತಿ..
ಏಷ್ಯಾನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಗಾಂಧಾರಿ ವಿದ್ಯೆ ಪ್ರವೀಣೆ ಶಮಿಕ ಎಂ.ಕೆರವರು ಮೊದಲೇ ನಿರ್ಧರಿಸಿದ್ದಂತೆ ದಿನದ 24 ಗಂಟೆ ಅಂದರೆ ಡಿ.6 ರಂದು ಬೆಳಿಗ್ಗೆ 10 ಗಂಟೆಯಿಂದ ಡಿ.7ರ 10 ಗಂಟೆಯ ತನಕ ಸುಮಾರು 350 ಕಲಾಕೃತಿಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ ರಚನೆಯನ್ನು ಮಾಡಿದ್ದು, ಪ್ರತೀ ಮೂರು ಗಂಟೆಯ ಅವಧಿಗೆ ಶಮಿಕರವರು ಕೇವಲ ಹದಿನೈದು ನಿಮಿಷದ ವಿಶ್ರಾಂತಿ ಪಡೆದಿರುತ್ತಾರೆ.









