




ಉಪ್ಪಿನಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಜ್ಯೋತಿಷಿಯೋರ್ವ ಆಕೆಗೆ ನಿರಂತರ ಕಿರುಕುಳ ಕೊಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ.



ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಶೇಷಗಿರಿ ಭಟ್ ಎಂಬಾತನೇ ಈ ಜ್ಯೋತಿಷಿ. ತೆಕ್ಕಾರಿನ ಯುವತಿಯೋರ್ವಳನ್ನು ಆಕೆಯ ಜಾತಕ ತೋರಿಸಲು ಆಕೆಯ ಮನೆಯವರು ಈತನಲ್ಲಿಗೆ ಕರೆದುಕೊಂಡು ಹೋಗಿದ್ದರು. ಬಳಿಕ ಈಕೆಯ ಮನೆಯವರೊಂದಿಗೆ ಸಂಪರ್ಕಿಸಿದ ಜ್ಯೋತಿಷಿ ಈಕೆಯ ದೋಷ ಪರಿಹಾರಕ್ಕಾಗಿ ಕೆಲವೊಂದು ಪೂಜೆ ಮಾಡುವುದಕ್ಕೆ ಮುಂದಾಗಿದ್ದ. ಬಳಿಕ ಜ್ಯೋತಿಷಿ ಆಕೆಯನ್ನು ಮದುವೆ ಮಾಡಿ ಕೊಡುವಂತೆ ಮನೆಯವರಲ್ಲಿ ಒತ್ತಾಯಿಸಿದ್ದ. ಆದರೆ ಮನೆಯವರು ಹಾಗೂ ಯುವತಿ ಇದನ್ನು ನಿರಾಕರಿಸಿದಾಗ ಬೆನ್ನು ಬಿಡದ ಈತ ಯುವತಿಗೆ ನಾನಾ ಕಿರುಕುಳ ಕೊಡಲು ಶುರುವಿಟ್ಟುಕೊಂಡಿದ್ದನ್ನಲ್ಲದೆ, ಕೊಟ್ಟಿಗೆಗೆ ಬೆಂಕಿ ಹಚ್ಚಿಯೂ ಹೋಗಿದ್ದ ಎಂದು ಮನೆಯವರು ಆರೋಪಿಸಿದ್ದಾರೆ.





ಆಗ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೂ ಈತನ ಬುದ್ಧಿ ಬಿಡದ ಈತ ಒಂದು ದಿನ ಮಧ್ಯರಾತ್ರಿಯ ಸಮಯ ಯುವತಿಯ ಮನೆಗೆ ಬಂದು ಯಾರ ಅರಿವಿಗೂ ಬಾರದಂತೆ ಮಾಟ ಮಂತ್ರಗಳ ಪ್ರಯೋಗವನ್ನು ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ದೃಶ್ಯ ಮನೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಈಕೆಯ ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜ್ಯೋತಿಷಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಜ್ಯೋತಿಷಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂದು ವರದಿಯಾಗಿದೆ.








