ಕಾಣಿಯೂರು ಸವಣೂರು ರೈತ ಉತ್ಪಾದಕ‌ ಕಂಪನಿ ಲಿ.ನ ವಾರ್ಷಿಕ ಮಹಾಸಭೆ

0

ಸವಣೂರು: ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ,ತೋಟಗಾರಿಕೆ ಇಲಾಖೆ ದ.ಕ. ಮತ್ತು ಐಸಿಸಿಒಎ ಸಂಪನ್ಮೂಲ ಸಂಸ್ಥೆ ಬೆಂಗಳೂರು ಇದರ ಸಹಕಾರದಲ್ಲಿ ಆರಂಭಗೊಂಡ ಕಾಣಿಯೂರು ಸವಣೂರು ರೈತ ಉತ್ಪಾದಕ‌ ಕಂಪನಿ ಲಿ.ನ ವಾರ್ಷಿಕ ಮಹಾಸಭೆಯು ಡಿ.13ರಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಣಿಯೂರು ಸವಣೂರು ರೈತ ಉತ್ಪಾದಕ‌ ಕಂಪನಿ ಲಿ.ನ ಅಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ, ರೈತರಿಂದ ರೈತರಿಗೋಸ್ಕರ ಆರಂಭಿಸಿರುವ ನಮ್ಮ ಸಂಸ್ಥೆಯು ವರದಿ ಸಾಲಿನಲ್ಲಿ  68,06,419 ರೂ ರೂ.ಗಳ ವಾರ್ಷಿಕ ವ್ಯವಹಾರ ಮಾಡಿದ್ದು, 4,66,796 ರೂ ಲಾಭಗಳಿಸಿದ್ದು, ಕಂಪನಿಗಳ ನಿಯಮಾವಳಿಯಂತೆ ಲಾಭಾಂಶದ ಶೇ.25 ಅಂದರೆ 1,06,440 ರೂ.ಗಳನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸಿದ್ದು, ಒಟ್ಟು 3,44,978 ರೂ.ಆದಾಯ ಗಳಿಸಿದೆ ಎಂದರು. ರೈತರಿಗೆ ಟಾರ್ಪಾಲು,ರಸಗೊಬ್ಬರ,ಪಶು ಆಹಾರ ಚೀಲಗಳು,ಕೀಟನಾಶಕ,ಶೇಡ್‌ ನೆಟ್‌ ಗಳನ್ನು ಮಾರಾಟ ಮಾಡಲಾಗಿದೆ.ಸಂಸ್ಥೆಯಿಂದ ಸದಸ್ಯರು ವಾರ್ಷಿಕ ಕನಿಷ್ಟ 10,000 ರೂ.ಗಳ ವ್ಯವಹಾರಗಳನ್ನಾದರೂ ಮಾಡುವಂತೆ ಮನವಿ ಮಾಡಿದರು.

ಸಂಸ್ಥೆಗೆ ಅಗತ್ಯವಿರುವ ಗೋದಾಮಿನ‌ ವ್ಯವಸ್ಥೆಯನ್ನು ಕಚೇರಿ ಕಟ್ಟಡದ ಮಾಲಕರಾದ ಚೆನ್ನಪ್ಪ ಗೌಡ ನೂಜಿ ಅವರು ಮಾಡಿಕೊಟ್ಟಿದ್ದು,ಅವರಿಗೆ ಸಂಸ್ಥೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದರು.ರೈತರ ಅನುಕೂಲಕ್ಕಾಗಿ ಅಡಿಕೆ ತೆಂಗು ಕೀಳುವ ದೋಟಿ ಟೀಮ್ ವ್ಯವಸ್ಥೆ ಮಾಡಲಾಗಿದ್ದು, ಕಳೆಕೊಚ್ಚುವ ಯಂತ್ರ ,ಗುಣಮಟ್ಟದ ಮೈಲುತುತ್ತು ವಿತರಣೆ, ಕೀಟ ಬಾಧೆ ನಿಯಂತ್ರಣಕ್ಕೆ ಪೂರಕ ಔಷಧಿಗಳ ಪೂರೈಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಪೂರೈಕೆಯ ಲೇಬರ್ ಬ್ಯಾಂಕ್ ಮಾಡುವ ಯೋಜನೆ ಇದೆ ಎಂದರು‌.

ಅಲ್ಲದೇ ಸಂಸ್ಥೆಗೆ ಸ್ವಂತ ಜಾಗ ಹಾಗೂ ಕಟ್ಟಡ ಮಾಡುವ ನಿಟ್ಟಿನಲ್ಲಿ ಸವಣೂರಿನಲ್ಲಿ ಎಪಿಎಂಸಿ ಗೆ ನೀಡಿದ ನಿವೇಶನವನ್ನು ಕೇಳಿಕೊಳ್ಳುವುದು ಹಾಗೂ ಕೃಷಿಕರೊಬ್ಬರು ಸಂಸ್ಥೆಗೆ ಲೀಸ್ ಗೆ ಜಾಗ ನೀಡುವ ನಿಟ್ಟಿನಲ್ಲಿ ಪ್ರಸ್ತಾಪಿಸಿದ್ದು ಈ ಕುರಿತು ಕಾರ್ಯಯೋಜನೆ ರೂಪಿಸಲಾಗುವುದು. ರೈತ ಉತ್ಪಾದಕ ಸಂಸ್ಥೆಗಳ ಕುರಿತು ಸರಕಾರಗಳು ಕೂಡ ಗಮನಹರಿಸಬೇಕು ಎಂದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ. ಮಾತನಾಡಿ, ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯು ಉತ್ತಮವಾಗಿ ಬೆಳವಣಿಗೆಯಾಗುತ್ತಿದೆ.ರೈತರಿಗೆ ಹಲವು ಸೇವೆಗಳನ್ನು ನೀಡುತ್ತಿದೆ.ಸವಣೂರು ಪ್ರಾ.ಕೃ.ಪ.ಸ.ಸಂಘದ ಸುಮಾರು ‌150 ಸದಸ್ಯರಿಗೆ ಬೆಳೆವಿಮೆಯ ತಾಂತ್ರಿಕ ಸಮಸ್ಯೆಗಳಿದ್ದವು.ಆ ಸಮಸ್ಯೆಗಳನ್ನು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರೇಖಾ ಅವರು ನಿವಾರಿಸಿದ್ದು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಸಭೆಯಲ್ಲಿ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆಯ ಸದಸ್ಯ ರಾಕೇಶ್ ರೈ ಕೆಡೆಂಜಿ ಹಾಗೂ ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಸಹಕಾರಿ ಸಂಘದ ನಿರ್ದೇಶಕ ವೀರಪ್ಪ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ರಾಕೇಶ್ ರೈ ಕೆಡೆಂಜಿ ಅವರು ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನಿಯವರ ಚಿಂತನೆಯಂತೆ ರೈತ ಉತ್ಪಾದಕ ಸಂಸ್ಥೆಗಳ ಆರಂಭವಾಗಿದೆ‌.ಕಡಬ ತಾಲೂಕಿನಲ್ಲಿ ಪ್ರಥಮವಾಗಿ ಆರಂಭವಾದ ಈ ಸಂಸ್ಥೆಯು ರೈತರಿಗೆ ಅನುಕೂಲಕರವಾದ ಸೇವೆ ನೀಡುವ ಮೂಲಕ ಮಾದರಿಯಾಗಿದೆ. ರೈತ ಯಾರಿಗೂ ಕಡಿಮೆಯಿಲ್ಲದೆ ವ್ಯಕ್ತಿ.ಆದರೆ ಆತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಪ್ರಮೇಯ ಇತ್ತು.ಈಗ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತನೇ ಮಾರುವ ವ್ಯವಸ್ಥೆ ಆಗುತ್ತಿದೆ ಎಂದರು.

ಜ.10-ಜ.12ರವರೆಗೆ ಪುತ್ತೂರಿನಲ್ಲಿ ಮೈಸೂರು ವಿಭಾಗದ ಕೃಷಿ ಮೇಳ 
ಜ.10-ಜ.12ರವರೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೈಸೂರು ವಿಭಾಗದ ಕೃಷಿ ಮೇಳ ಕೃಷಿಕ ಸಮಾಜದ ವತಿಯಿಂದ ಎಲ್ಲರ ಸಹಕಾರದೊಂದಿಗೆ ನಡೆಯಲಿದೆ. ಕೃಷಿಕರು ಭಾಗವಹಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿಯೂ ಆಗಿರುವ ರಾಕೇಶ್ ರೈ ಕೆಡೆಂಜಿ ಹೇಳಿದರು. ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಸಹಕಾರಿ ಸಂಘದ ನಿರ್ದೇಶಕ ವೀರಪ್ಪ ಗೌಡ ಮಾತನಾಡಿ, ಇಲ್ಲಿನ ರೈತ ಉತ್ಪಾದಕ ಸಂಸ್ಥೆಯ ಮಹಾಸಭೆಯಲ್ಲಿ ಒಂದೇ ಸೂರಿನಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಅಭಿನಂದನೀಯ,ಆರೋಗ್ಯ ತಪಾಸಣೆ, ಆಧಾರ್ ನೊಂದಣಿ ,ತಿದ್ದುಪಡಿ ಶಿಬಿರ, ಹೂ ಹಣ್ಣುಗಳ ಗಿಡ ಮಾರಾಟ ವ್ಯವಸ್ಥೆ, ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳ ಮಾರಾಟ ವ್ಯವಸ್ಥೆ ,ತರಕಾರಿ ಬೀಜಗಳ ಮಾರಾಟ ವ್ಯವಸ್ಥೆ ಮಾಡುವ ಮೂಲಕ ರೈತರಿಗೂ ಅನುಕೂಲವಾಗಿದೆ ಎಂದರು. ಸದಸ್ಯ ರಾಮಪ್ರಸಾದ್ ರೈ ಕಲಾಯಿ ಮಾತನಾಡಿ, ಈ ರೈತ ಉತ್ಪಾದಕ ಸಂಸ್ಥೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುವಂತಾಗಲಿ.ಜತೆಗೆ ಯಾವುದಾದರೂ ಒಂದು ಕೃಷಿ ಉತ್ಪನ್ನ ಖರೀದಿ ಮಾಡುವ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ,ಸವಣೂರು ಪ್ರಾ.ಕೃ.ಪ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ,ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ,ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಶ್ಮಿ ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಸುರೇಶ್ ಓಡಬಾಯಿ,ನಿರ್ದೇಶಕರಾದ ಶಿವರಾಮ ಗೌಡ ದೋಳ್ಪಾಡಿ,ಗಂಗಾಧರ ಪೆರಿಯಡ್ಕ,ಸುಬ್ರಾಯ ಗೌಡ ಪಾಲ್ತಾಡಿ, ಸದಾನಂದ ಸೌತೆಮಾರು,ಯಶವಂತ ಕಳುವಾಜೆ,ಧನಂಜಯ ಕೇನಾಜೆ,ಸಿಬ್ಬಂದಿ ದೀಕ್ಷಾ ಉಪಸ್ಥಿತರಿದ್ದರು. ಕು.ರಕ್ಷಾ ಸುಣ್ಣಾಜೆ ಪ್ರಾರ್ಥಿಸಿದರು.ನಿರ್ದೇಶಕರಾದ ಸುಬ್ರಾಯ ಗೌಡ ಪಾಲ್ತಾಡಿ ಸ್ವಾಗತಿಸಿದರು. ಯಶವಂತ ಕಳುವಾಜೆ ವಂದಿಸಿದರು. ಸದಾನಂದ ಸೌತೆಮಾರು,ಯಶವಂತ ಕಳುವಾಜೆ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಸುಣ್ಣಾಜೆ ವರದಿ ಮಂಡಿಸಿದರು.ಸವಣೂರು ಗ್ರಾ.ಪಂ.ಸದಸ್ಯರಾದ ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಇಂದಿರಾ ಬೇರಿಕೆ ಸಹಕರಿಸಿದರು.

LEAVE A REPLY

Please enter your comment!
Please enter your name here