




ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ಉರ್ಲಾಂಡಿ ಶುಶ್ರುತ ಆಸ್ಪತ್ರೆಯ ಬಳಿ ವೈದ್ಯರೊಬ್ಬರ ಮನೆಯಲ್ಲಿ ಕಳ್ಳತನ ನಡೆದ ಕುರಿತು ವರದಿಯಾಗಿದೆ. ಪುತ್ತೂರು ಮತ್ತು ಮೈಸೂರಿನಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಡಾ.ವೆಂಕಟ್ರಮಣ ಭಟ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ.ಘಟನೆ ಕುರಿತು ಅವರ ದೂರದ ಸಂಬಂಧಿಕ ಜಿ.ಕೆ.ಅವಿನಾಶ್ ಗಿಳಿಯಾಲು ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



‘ಉರ್ಲಾಂಡಿಯಲ್ಲಿ ಸ್ವಂತ ಮನೆಯಲ್ಲಿ ಒಬ್ಬರೇ ವಾಸವಾಗಿರುತ್ತಿದ್ದ ಡಾ.ವೆಂಕಟ್ರಮಣ ಭಟ್ ಅವರು ತಿಂಗಳಿಗೊಮ್ಮೆ ಮೈಸೂರಿಗೆ ಹೋಗಿ ಅಲ್ಲಿಯೂ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು.ಡಿ.7ರಂದು ಅವರು ಮನೆಗೆ ಬೀಗ ಹಾಕಿ, ಮನೆಯ ಕಡೆ ನೋಡಿಕೊಳ್ಳುವಂತೆ ನನ್ನಲ್ಲಿ ತಿಳಿಸಿ ಮೈಸೂರಿಗೆ ಹೋಗಿದ್ದರು. ಅದರಂತೆ ನಾನು ಮನೆಯ ಬಳಿಗೆ ಹೋಗಿ ಹೊರಗಿನಿಂದ ನೋಡಿಕೊಂಡು ಬರುತ್ತಿದ್ದೆ.ಡಿ.13ರಂದು ರಾತ್ರಿ ಅವರು ಮನೆಗೆ ಬಂದಿರುತ್ತಾರೆ. ಆ ಸಮಯ ಮನೆಯ ಒಳಗೆ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೇವರ ವಿಗ್ರಹಗಳು ಮತ್ತು ನಗದು ಹಣ ರೂ.6 ಸಾವಿರ ಕಾಣೆಯಾಗಿರುವ ಬಗ್ಗೆ ನನಗೆ ಫೋನ್ ಮಾಡಿ ತಿಳಿಸಿದ್ದರು.





ಡಿ.14ರಂದು ನಾನು ಡಾ.ವೆಂಕಟ್ರಮಣ ಭಟ್ ಅವರ ಮನೆಗೆ ಹೋಗಿ ನೋಡಿದಾಗ ಮನೆಯ ಹಿಂಬದಿ ಕಿಟಕಿಯ ಸರಳನ್ನು ಬೆಂಡ್ ಮಾಡಿ ಒಳಪ್ರವೇಶಿಸಿದ ಕಳ್ಳರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.ಮನೆಯಲ್ಲಿದ್ದ 1.5 ಕೆ.ಜಿ.ಬೆಳ್ಳಿಯ ದೇವರ ಮೂರ್ತಿಗಳು, ರೂ.6 ಸಾವಿರ ನಗದು ಕಳವಾಗಿದೆ.ಕಳವಾದ ಸೊತ್ತುಗಳು ಮತ್ತು ನಗದು ಹಣ ಸೇರಿ ಒಟ್ಟು ರೂ.96 ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಜಿ.ಕೆ.ಅವಿನಾಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ(ಅ.ಕ್ರ.126/2025) ದಾಖಲಾಗಿದೆ.








