ಸಂಟ್ಯಾರು: ಪರವಾನಿಗೆ ಉಲ್ಲಂಘಿಸಿ ಕೆಂಪುಕಲ್ಲು ಸಾಗಾಟ – ಪ್ರಕರಣ ದಾಖಲು

0

ಪುತ್ತೂರು: ಪರವಾನಿಗೆ ಉಲ್ಲಂಘಿಸಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಡಿ. 15ರಂದು ಅವರು ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಸಂಟ್ಯಾರ್‌ನಲ್ಲಿ ಅತಿ ವೇಗದಿಂದ ಬರುತ್ತಿದ್ದ ಲಾರಿಯನ್ನು ಪರಿಶೀಲಿಸಿದಾಗ ಕೇರಳ ರಾಜ್ಯದ ಮಿಂಚಿನಪದವು ಕಲ್ಲಿನ ಕೋರೆಯಿಂದ ಲೋಡ್ ಮಾಡಿಕೊಂಡು ಮಿಂಚಿನಪದವು, ಕರ್ನೂರು, ಪಂಚೋಡಿ, ಈಶ್ವರಮಂಗಲ, ಕಾವು, ಸಂಟ್ಯಾರ್ ಮಾರ್ಗವಾಗಿ ಬೆಳ್ತಂಗಡಿ ಉಜಿರೆಗೆ ಕೊಂಡೊಯ್ಯುತ್ತಿರುವ ಕುರಿತು ಲಾರಿಯ ಚಾಲಕ ತಿಳಿಸಿದ್ದರು. ಆದರೆ ದಾಖಲೆ ಪರಿಶೀಲಸಿದಾಗ ಲಾರಿಯ ಮಾಲಕ ಕಾವು ಯೂಸೂಪ್ ಅವರು ಮೃತಪಟ್ಟಿದ್ದು, ಅಬ್ದುಲ್ಲಾ ಎಂಬವರು ಮೌಖಿಕವಾಗಿ ಲಾರಿಯನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಕೆಂಪು ಕಲ್ಲು ಸಾಗಾಟದ ಪರವಾನಿಗೆ ನೋಡಿದಾಗ ರಾಯಚೂರು ಜಿಲ್ಲೆಗೆ ಎಂಬುದಾಗಿ ಇದ್ದರೂ ನಿಯಮ ಉಲ್ಲಂಘಿಸಿ ಕಲ್ಲಿನ ಕೋರೆಯಿಂದ ಖನಿಜ ಸಂಪತ್ತಾದ ಕೆಂಪು ಕಲ್ಲನ್ನು ಕಳವು ಮಾಡಿಕೊಂಡು ಸಾಗಾಟ ಮಾಡಿ, ಒಂದೇ ಪರವಾನಿಗೆಯಲ್ಲಿ ಒಂದಕ್ಕಿಂತ ಹೆಚ್ಚು ಟ್ರಿಪ್ ಅಕ್ರಮ ಕಲ್ಲುಗಳನ್ನು ಧರ್ಮಸ್ಥಳ, ಕುಶಾಲನಗರ ಕಡೆಗಳಿಗೆ ಸಾಗಾಟ ಮಾಡಿ ಅಕ್ರಮ ಲಾಭ ಗಳಿಸಿ ಸರ್ಕಾರದ ರಾಜಸ್ವಕ್ಕೆ ನಷ್ಟವನ್ನುಂಟು ಮಾಡಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಚಾಲಕನು ಹೆವಿ ವಾಹನ ಓಡಿಸಲು ಚಾಲನಾ ಪರವಾನಿಗೆ ಹೊಂದಿಲ್ಲದಿರುವುದು ಹಾಗೂ ಲಾರಿಗೆ ಇನ್ಸುರೆನ್ಸ್, ಅರ್ಹತಾ ಪತ್ರ ಹೊಂದಿಲ್ಲದೇ ಇರುವುದು ಕಂಡುಬಂದಿರುತ್ತದೆ. ಖನಿಜ ಸಂಪತ್ತನ್ನು 2024 ರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಸಾಗಾಟ ಮಾಡಬಾರದು ಎಂದು ಆದೇಶಿಸಿದ್ದರೂ ಕೂಡಾ, ಕೋರೆಯ ಮಾಲಿಕರಾದ ಇಬ್ರಾಹಿಂ ಬಾತೀಷ ಮತ್ತು ಬಶೀರ್ ರವರು ಆದೇಶವನ್ನು ಉಲ್ಲಂಘಿಸಿ ಹೊರ ಜಿಲ್ಲೆಗೆ ಸಾಗಾಟ ಮಾಡುವರೇ ಹೊಂದಿರುವ ಪರವಾನಿಗೆಯನ್ನು ನೋಡಿಯೂ ಕೂಡಾ ಖನಿಜ ಸಂಪತ್ತಾದ ಕೆಂಪುಕಲ್ಲನ್ನು ಮಾರಾಟ ಮಾಡಿ ಅಪರಾಧ ಎಸಗಿರುವುದು ಕಂಡು ಬಂದಿರುವುದರಿಂದ ಮತ್ತು ಲಾರಿಯ ಚಾಲಕನು ಅತಿಯಾದ ವೇಗ ಮತ್ತು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡು ಬಂದಿರುವುದರಿಂದಲೂ ಹಾಗೂ ಕೇರಳ ರಾಜ್ಯದ ಮಿಂಚಿನಪದವು ಎಂಬಲ್ಲಿಂದ ಕೆಂಪುಕಲ್ಲನ್ನು ಕಳವು ಮಾಡಿಕೊಂಡು ಸಾಗಾಟ ಮಾಡಿರುವುದು ಕಂಡುಬಂದಿರುವುದರಿಂದ, ಹಾಗೂ ಲಾರಿಯ ಚಾಲಕ ಹೆವಿ ವಾಹನ ಓಡಿಸಲು ಚಾಲನಾ ಪರವಾನಿಗೆ ಹೊಂದಿಲ್ಲದಿರುವುದು, ಲಾರಿಗೆ ಇನ್ಸುರೆನ್ಸ್ ಮತ್ತು ಅರ್ಹತಾ ಪತ್ರ ಹೊಂದಿಲ್ಲದೇ ಇರುವುದು, ಲಾರಿಯ ಮಾಲಕರು ಕಾವು ಯೂಸೂಪ್ ರವರು ಸುಮಾರು 1 ವರ್ಷದ ಹಿಂದೆಯೇ ಮರಣ ಹೊಂದಿದ್ದರೂ ಕೂಡ ಅವರದೇ ಹೆಸರಿನಲ್ಲಿ ಕೆಂಪುಕಲ್ಲಿನ ಲಾರಿಯನ್ನು ಚಾಲಕನು ಅಕ್ರಮವಾಗಿ ಚಾಲನೆ ಮಾಡಿ ತಪ್ಪೆಸಗಿರುವುದು ಕಂಡುಬಂದಿರುತ್ತದೆ. ಆದುದರಿಂದ ಲಾರಿ ಚಾಲಕ ಮಹಮ್ಮದ್ ಸಿನಾನ್, ಮೌಖಿಕವಾಗಿ ಲಾರಿ ಪಡೆದುಕೊಂಡ ಮಾಲಕ ಅಬ್ದುಲ್ಲ, ಕೋರೆಯ ಮಾಲಕರಾದ ಇಬ್ರಾಹಿಂ ಬಾತೀಶ ಮತ್ತು ಬಶೀರ್ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪರಿಶೀಲನೆ ವೇಳೆ ಹಲವು ವಿಚಾರ ಬೆಳಕಿಗೆ:
ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಲಾರಿ ಮಾಲಕತ್ವ, ಲಾರಿಯ ಇನ್ಶೂರೆನ್ಸ್, ಫಿಟ್‌ನೆಸ್ ಲ್ಯಾಪ್ಸ್ ಆಗಿರುವುದು, ಚಾಲಕನಿಗೆ ಘನ ವಾಹನದ ಚಾಲನಾ ಪರವಾನಿಗೆಯಿಲ್ಲದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ರಾಯಚೂರಿಗೆ 578 ಕಿ.ಮೀ ಎರಡು ದಿನ ಅನುಮತಿ ಪತ್ರವಿರಿಸಿಕೊಂಡು ಲೋಕಲ್ ಎರಡು ಮೂರು ಟ್ರಿಪ್ ಹೊಡೆಯಲು ಹೆಚ್ಚಿನ ಲಾಭಗಳಿಸುವ ಉದ್ದೇಶವಿಟ್ಟಿರುವುದು ಬೆಳಕಿಗೆ ಬಂದಿದೆ. ಇನ್ನೂ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ತಮ್ಮ ಆದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಸಾಗಾಟ ಮಾಡಬಾರದು ಎಂದು ಆದೇಶಿಸಿದ್ದರೂ ಕೋರೆಯ ಮಾಲಿಕ ಇಬ್ರಾಹಿಂ ಬಾತೀಷ ಮತ್ತು ಬಶೀರ್ ರವರು ಆದೇಶವನ್ನು ಉಲ್ಲಂಘಿಸಿ ಹೊರ ಜಿಲ್ಲೆಗೆ ಸಾಗಾಟ ಮಾಡುವರೇ ಹೊಂದಿರುವ ಪರವಾನಿಗೆಯನ್ನು ನೋಡಿಯೂ ಕೂಡಾ ಖನಿಜ ಸಂಪತ್ತಾದ ಕೆಂಪುಕಲ್ಲನ್ನು ಮಾರಾಟ ಮಾಡಿ ಅಪರಾಧ ಎಸಗಿದ್ದಾರೆ ಎಂಬುದನ್ನು ಪೊಲೀಸರು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here