




ಪುತ್ತೂರು: ಕಾಲೇಜು ಪ್ರಾಂಶುಪಾಲರೋರ್ವರಿಗೆ ನಿವೃತ್ತಿ ವೇಳೆ ನಡೆಸುವ ಆಡಿಟ್ ನ ಕ್ಲೀಯರೆನ್ಸ್ ನೀಡಲು ಲಂಚ ಬೇಡಿಕೆಯಿಟ್ಟ ಪ್ರಕರಣದಲ್ಲಿ ಕಾಲೇಜ್ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರಾದ ಲೋಕೇಶ್ 227 ಸಿ.ಆರ್.ಪಿ.ಸಿರಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.



ಪ್ರಕರಣದ ವಿವರ
ಪುತ್ತೂರು ತಾಲೂಕು ನಿಡ್ಪಳ್ಳಿಯ ಎನ್. ರಾಧಾಕೃಷ್ಣ ಭಟ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬೆಟ್ಟಂಪಾಡಿಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿವೃತ್ತಿಯ ವೇಳೆ ನಡೆಸುವ ಅಡಿಟಿಂಗ್ ಕ್ಲಿಯರೆನ್ಸ್ ನೀಡಲು ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರಾದ ಲೋಕೇಶ್‌ರವರು 24.04.2019 ರಂದು ಕಾಲೇಜಿಗೆ ಬಂದು ಲೆಕ್ಕ ಪರಿಶೋಧನೆಯನ್ನು ಮಾಡುವಾಗ ನೀವು ಕಾಲೇಜಿನ ವೆಚ್ಚದ ದಾಖಲೆಗಳನ್ನು ಸರಿಯಾಗಿ ಇಟ್ಟಿಲ್ಲ ಎಂದು ಹೇಳಿ, ಆಡಿಟ್ ಮುಗಿಸಿದ ನಂತರ ಲೋಕೇಶ್‌ರವರು ರಾಧಾಕೃಷ್ಣ ಭಟ್ ರವರನ್ನು 25.01.2019 ರಂದು ರಾತ್ರಿ 9.00 ಗಂಟೆಗೆ ಅವರು ತಂಗಿದ್ದ ಪುತ್ತೂರು ಪ್ರವಾಸಿ ಮಂದಿರಕ್ಕೆ ಬರಲು ತಿಳಿಸಿದ್ದು, ಆಡಿಟಿಂಗ್‌ಗೆ ಬರುವವರು ಹಣದ ಬೇಡಿಕೆ ಇಡುವುದು ಸಾಮಾನ್ಯವಾಗಿರುವುದರಿಂದ ರಾಧಾಕೃಷ್ಣ ಭಟ್‌ರವರು ತನ್ನ ಮೊಬೈಲ್ ಫೋನ್‌ನಲ್ಲಿ ವಾಯ್ಸ್ ರೆಕಾರ್ಡ್‌ನ್ನು ಆನ್ ಮಾಡಿಕೊಂಡು ಪುತ್ತೂರು ಪ್ರವಾಸಿ ಮಂದಿರದಲ್ಲಿ ಲೋಕೇಶ್ ರನ್ನು ಭೇಟಿಯಾಗಿ ತನ್ನ ಅವಧಿಯ ಆಡಿಟ್‌ನ ಕ್ಲೀಯರೆನ್ಸ್ ನೀಡಲು ಬೇಡಿಕೊಂಡಾಗ, ಲೋಕೇಶ್ “ನೀವು ಎರಡುವರೆ ಲಕ್ಷಕ್ಕೆ ವ್ಯವಸ್ಥೆ ಮಾಡಿ” ಎಂದು ಹೇಳಿದ್ದು. ಈ ಹಣವನ್ನು 26.04.2019 ರಂದು ತಲುಪಿಸುವಂತೆ ಹೇಳಿದ್ದು. ಲಂಚದ ಹಣ ನೀಡಿ ಕ್ಲೀಯರೆನ್ಸ್ ಪಡೆಯಲು ಇಷ್ಟ ಇಲ್ಲದ ಕಾರಣ ರಾಧಾಕೃಷ್ಣ ಭಟ್‌ರವರು ತನ್ನ ಮೊಬೈಲ್ ಫೋನಿನ ವಾಯ್ಸ್ ರೆಕಾರ್ಡ್ ನಲ್ಲಿ ರೆಕಾರ್ಡ್ ಮಾಡಿಕೊಂಡು 26.04.2019 ರಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ. ಮಂಗಳೂರು ಇಲ್ಲಿಗೆ ಬಂದು ದೂರು ನೀಡಿದ್ದು, 26.04.2019 ರಂದು ಸಂಜೆ ಲೋಕೇಶ್ ರಾಧಾಕೃಷ್ಣ ಭಟ್‌ರವರಲ್ಲಿ ಮಂಗಳೂರು ತಾಲೂಕಿನ ಸುರತ್ಕಲ್‌ನಲ್ಲಿರುವ ಹೋಟೇಲ್‌ಗೆ ಬರಲು ತಿಳಿಸಿ. ನಂತರ ಹೋಟೇಲ್‌ನ ಪಾರ್ಕಿಂಗ್ ಸ್ಥಳದಲ್ಲಿ ರಾಧಾಕೃಷ್ಣ ಭಟ್ ರವರಿಂದ ರೂ.2.50.000/- ಲಂಚದ ಹಣವನ್ನು ಪ್ರಕರಣದ ಸಾಕ್ಷಿ ಕೆ.ಎಲ್. ಮನೋಹರ್‌ರವರ ಸಮಕ್ಷಮದಲ್ಲಿ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುತ್ತಾರೆ.





ಪ್ರಕರಣದ ತನಿಖಾಧಿಕಾರಿ ಯೋಗೀಶ್ ಕುಮಾರ್ ಬಿ.ಸಿ. ರವರು ತನಿಖೆಯನ್ನು ನಡೆಸಿ, ಅಂತಿಮ ವರದಿಯನ್ನು ಸಲ್ಲಿಸಿದ್ದು, ಮುಂದೆ ಪ್ರಕರಣದ ಮುಂದಿನ ತನಿಖಾಧಿಕಾರಿ ಶ್ಯಾಮ್ ಸುಂದರ್ ಹೆಚ್.ಎಂ. ರವರು ಲೋಕೇಶ್ ಮೇಲೆ ದೋಷಾರೋಪಣ ಪಟ್ಟಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಎನ್.ಹೆಚ್. ಕಂದಾರಿ. ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರು ಲೋಕೇಶ್ ಮೇಲೆ ಅಭಿಯೋಜನಾ ಮಂಜೂರಾತಿ ಆದೇಶವನ್ನು ನೀಡಿದ್ದು, ಮಂಜುನಾಥ ಬಿ. ಕವರಿ ರವರು ದೂರನ್ನು ಸ್ವೀಕರಿಸಿ ತನಿಖಾಧಿಕಾರಿಗಳಿಗೆ ತನಿಖೆಯನ್ನು ಮಾಡಲು ಆದೇಶ ನೀಡಿರುತ್ತಾರೆ.
ಲೋಕೇಶ್ ನ್ಯಾಯಾಲಯಕ್ಕೆ ಹಾಜರಾಗಿ ವಕೀಲರ ಮೂಲಕ ಪ್ರಕರಣದ ತನಿಖಾ ಸಮಯದಲ್ಲಿ 227 ಸಿ.ಆರ್.ಪಿ.ಸಿ. ರಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರಕರಣದಲ್ಲಿ ತನ್ನನ್ನು ಡಿಸ್ಟಾರ್ಜ್ ಮಾಡುವಂತೆ ಕೇಳಿಕೊಂಡಿದ್ದು, ಸದ್ರಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ನ್ಯಾಯಾಲಯವು ಆರೋಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣದಲ್ಲಿ ಪೂರ್ಣ ಮಟ್ಟದ ಆದೇಶವನ್ನು ನ್ಯಾಯಾಧೀಶರಾದ ಸುನೀತಾ ಎಸ್.ಜಿ. ರವರು ನೀಡಿದ್ದು. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿದರು.









