ಸ್ವದೇಶೀ ಜಾಗರಣಕ್ಕಾಗಿ ಸೈಕ್ಲಿಂಗ್ ಜಾಥಾ-ಪುತ್ತೂರಿಗೆ ಆಗಮನ, ಭವ್ಯ ಸ್ವಾಗತ: ನೂರಾರು ಮಂದಿಯಿಂದ ನಗರದಲ್ಲಿ ಸಂಚರಿಸಿದ ಸೈಕಲ್ ಜಾಥಾ

0

ಪುತ್ತೂರು:`ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ, ಸಾಫ್ಟ್‌ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಡಿ.೧೭ರಂದು ಸಂಜೆ ಪುತ್ತೂರಿಗೆ ಆಗಮಿಸಿತು.

ಸುಳ್ಯ ಮಾರ್ಗವಾಗಿ ಪುತ್ತೂರಿಗೆ ಆಗಮಿಸಿದ ಅವರನ್ನು ದರ್ಬೆ ವಿನಾಯಕ ನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಪುತ್ತೂರಿನ ನಾಗರಿಕರು ಆರತಿ ಬೆಳಗಿ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಭಾಕರ ಭಟ್ ಅವರು, ನನ್ನ ದೇಶ ಎಂಬ ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು. ಯಾವುದೇ ಜಾಹಿರಾತುಗಳಿರಲಿ, ಯಾರು ಏನೇ ಹೇಳಲಿ, ನಾನು ನನ್ನ ಊರಿನ, ನನ್ನ ದೇಶದ ವಸ್ತುಗಳನ್ನೇ ಬಳಕೆ ಮಾಡುತ್ತೇನೆ ಎಂಬ ಸಂಕಲ್ಪ ಮಾಡುವ ಮೂಲಕ ಬದಲಾವಣೆ ತರಬೇಕು.

ಸ್ವದೇಶ ಉಳಿದರೆ ಸ್ವಾಭಿಮಾನ, ಸ್ವರಾಜ್ಯ, ಸ್ವರಾಜ್ಯ ಸ್ವಾತಂತ್ರ್ಯ. ಈ ನಿಟ್ಟಿನಲ್ಲಿ ದೇಶದ ಗಡಿಯಲ್ಲಿಯೂ ಸ್ವದೇಶಿ ಸೇವೆ ಮಾಡಿರುವ ಸೇನೆಯು ನಿವೃತ್ತ ಅಧಿಕಾರಿ ರವಿ ಮುನಿಸ್ವಾಮಿ ನೇತೃತ್ವದಲ್ಲಿ ಸ್ವದೇಶಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ ನಮ್ಮನ್ನು ಸ್ವದೇಶಿ ಹಲಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವದೇಶಿ ಬಳಕೆ ಅವರಿಗಾಗಿ ಅಲ್ಲ. ಅದು ನಮಗಾಗಿ ಮುಂದಿನ ಪೀಳಗೆಗಾಗಿ ಪ್ರತಿಯೊಬ್ಬರೂ ಮಾಡಬೇಕಾದ ಆವಶ್ಯಕತೆಯಿದೆ ಎಂದು ಹೇಳಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಕಳೆದ ೩೦ ವರ್ಷಗಳ ಹಿಂದೆ ಸಂಘ ಸ್ವದೇಶಿ ಅಭಿಯಾನ ಪ್ರಾರಂಭಿಸಿದ ಸಂದರ್ಭದಲ್ಲಿ ದೇಶಕ್ಕೆ ರೂ.೫೫,೦೦೦ಕೋಟಿ ಲಾಭ ಆಗುವ ಲೆಕ್ಕಾಚಾರವಿತ್ತು. ಇದೀಗ ೩೦ ವರ್ಷಗಳ ನಂತರ ಜನಸಂಖ್ಯೆ ಏರಿಕೆಯಾಗಿದ್ದು ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಕೆಯಾಗಲಿ ಎಂದರು.

ದರ್ಬೆ ವಿನಾಯಕ ನಗರದಿಂದ ಹೊರಟ ಸೈಕಲ್ ಜಾಥಾವು ಪುತ್ತೂರು ಮುಖ್ಯರಸ್ತೆಯಾಗಿ ನೆಹರುನಗರ ವಿವೇಕಾನಂದ ಕಾಲೇಜು ಅವರಣದ ತನಕ ಸೈಕಲ್ ಜಾಥಾ ನಡೆಯಿತು. ಸುಮಾರು ೫ ಕಿ.ಮೀ ದೂರದ ಜಾಥಾದಲ್ಲಿ ಮಾಜಿ ಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು, ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಪುತ್ತೂರಿನ ನಾಗರಿಕರು ಸೇರಿದಂತೆ ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಿದರು.

ಸೈಕಲ್ ಏರಿದ ಪ್ರಭಾಕರ ಭಟ್, ಗಣೇಶ್ ಕಾರ್ಣಿಕ್:
ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಪ್ರಭಾಕರ ಭಟ್, ವಿಧಾನ ಪರಿಷತ್ ಸದಸ್ಯ ಕ್ಯಾ,ಗಣೇಶ್ ಕಾರ್ಣಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಸೈಕಲ್ ಏರಿ ತಾವೇ ಸೈಕಲ್ ಸವಾರಿ ಮಾಡುವ ಮೂಲಕ ಜಾಥಾದಲ್ಲಿ ಸಾಗಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ಹರಿಪ್ರಸಾದ್ ಯಾದವ್, ಮಾಜಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ಮಣಿಕಂಠ, ತಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹರೀಶ್ ಬಿಜತ್ರೆ, ಪ್ರಮುಖರಾದ ವಿವೇಕಾನಂದ ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ., ಪ್ರಾಂಶುಪಾಲ ದೇವಿಚರಣ್ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸತೀಶ್ ರೈ, ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್, ರಮೇಶ್ ಪ್ರಭು, ಚಂದ್ರಶೇಖರ ಮೂಡಾಯೂರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೈಕಲ್ ಜಾಥಾ ವಿವೇಕಾನಂದ ಕಾಲೇಜು ತಲುಪಿದ ಬಳಿಕ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ, ಜಾಥಾದಲ್ಲಿ ಭಾಗವಹಿಸುತ್ತಿರುವ ತಂಡದ ಜೊತೆ ವಿಶೇಷ ಸಂವಾದ ನಡೆಯಿತು.

LEAVE A REPLY

Please enter your comment!
Please enter your name here