




ಪುತ್ತೂರು; ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡು ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಿ, ಇನ್ನೇನು ಎರಡು ವರ್ಷದಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯು ಶತಮಾನದ ಹಾದಿಯಲ್ಲಿ ಶತ ನೆನಪಿನೊಂದಿಗೆ ಶತ ಹೆಜ್ಜೆ' ಶಾಲಾ ನಡಿಗೆ ಹಿರಿಯ ವಿದ್ಯಾರ್ಥಿಗಳ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಿಸಿ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಡಿ.17ರಂದು ಚಾಲನೆ ನೀಡಲಾಯಿತು.



ಬೆಥನಿ ಶಿಕ್ಷಣ ಮಂಡಳಿಯ ಮಾರ್ಗದರ್ಶನದಂತೆ ನಡೆಯುವ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿನಿಯಾಗಿರುವ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈಯವರ ಕಲ್ಲಾರೆಯವಲ್ಲಿರುವ ಮನೆಗೆ ಭೇಟಿ ನೀಡುವ ಮೂಲಕ ಸಣಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.





ಗೌರಿ ಪೈಯವರು ಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವಶತಹೆಜ್ಜೆ’ ವಾಟ್ಸಪ್ ಗ್ರೂಪ್‌ಗೆ ತನ್ನ ನಂಬರ್ ಸೇರ್ಪಡೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಲಿಟ್ಲ್ ಫ್ಲವರ್ ಶಾಲೆಯು ನಮ್ಮದೇ ಶಾಲೆ. ನಾವು ಕಲಿತ ಶಾಲೆ ಎಂಬ ಪ್ರೀತಿ, ಅಭಿಮಾನ ನಮ್ಮಲ್ಲಿದೆ. ಹೀಗಾಗಿ ಶಾಲೆಗೆ ನಮ್ಮ ಸಹಕಾರ, ಬೆಂಬಲ ಸದಾ ಇದೆ. ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.
ನಂತರ ಹಲವು ಮಂದಿ ಹಿರಿಯ ವಿದ್ಯಾರ್ಥಿಗಳ ಮನೆ ಮನೆ ಸಂಪರ್ಕ ನಡೆಸಿದರು. ಶಾಲಾ ಸಂಚಾಲಕಿಭಗಿನಿ ಪ್ರಶಾಂತಿ ಬಿ.ಎಸ್., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಸದಸ್ಯ ಜಯರಾಮ್ ಆಚಾರ್ಯ, ಮಾಜಿ ಉಪಾಧ್ಯಕ್ಷ ರಾಮಚಂದ್ರ ಭಟ್, ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಮೊಟ್ಟೆತಡ್ಕ, ನಿವೃತ್ತ ಮುಖ್ಯಶಿಕ್ಷಕಿ ಭಗಿನಿ ಗ್ರೇಸಿ ಮೋನಿಕಾ ಸಾಂತ್ ಮಯೂರ್, ನಿವೃತ್ತ ಶಿಕ್ಷಕರಾದ ಕೆ.ಪಿ ಜೋಸೆಫ್, ರೋಸ್ಲಿನ್ ಡಿಸಿಲ್ವ, ಸಬೀನಾ ಲಸ್ರಾದೋ, ಮೇರಿ ಡಿಸಿಲ್ವ, ಡೋರತಿ ಮೇರಿ ಡಿಸೋಜ, ಲೀಡಿಯಾ ಮರಿಯಾ ರಸ್ಕಿನ್ಹಾ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್, ಶಿಕ್ಷಕರಾದ ಭಗಿನಿ ಜೆಸಿಂತಾ ಪ್ರಿಫೆಲ್ಡ ಡೇಸ, ವಿಲ್ಮಾ ಫೆರ್ನಾಂಡಿಸ್ ಹಾಗೂ ಬಾಲಕೃಷ್ಣ ರೈ ಪೊರ್ದಾಲ್ ಉಪಸ್ಥಿತರಿದ್ದರು.
1928ರಲ್ಲಿ ಪ್ರಾರಂಭಗೊಂಡಿರುವ ಸಂಸ್ಥೆಯ ಪಸ್ತುತ 98ರ ಶೈಕ್ಷಣಿಕ ವರ್ಷದಲ್ಲಿ ಮುನ್ನಡೆಯುತ್ತಿದೆ. ಮುಂದಿನ 2028ರಲ್ಲಿ ನೂರು ವರ್ಷಗಳನ್ನು ಪೂರೈಸಲಿದೆ. ಇದಕ್ಕೆ ಪೂರಕವಾಗಿ ಮುಂಬರುವ ಫೆಬ್ರವರಿ ತಿಂಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ನಡೆಸಿ ನಂತರ ಎಪ್ರಿಲ್ ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳನ್ನು ಒಟ್ಟು ಗೂಡಿಸಿ ಮಹಾ ಸಮ್ಮೇಳನ ಆಯೋಜಿಸಲಾಗುವುದು. 2028ರಲ್ಲಿ ಅದ್ಧೂರಿಯಾದ ಶತಮಾನೋತ್ಸವ ಸಂಭ್ರಮಾಚರಣೆಯು ನಡೆಯಲಿದೆ. ಮನೆ ಮನೆ ಸಂಪರ್ಕ ಅಭಿಯಾನವು ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.










