






ಗಾಯಾಳುಗಳನ್ನು ರಕ್ಷಿಸಲು ಹೋದ ಅಂಗಡಿ ಮಾಲೀಕರಿಗೆ ಬೈಕ್ ಡಿಕ್ಕಿ
ಡಿಕ್ಕಿ ಹೊಡೆದು ಬೈಕ್ ಸಹಿತ ಸವಾರ ಪರಾರಿ!


ಪುತ್ತೂರು: ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಟ್ಟೆಯೊಂದಕ್ಕೆ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಹಾಗೂ ಸಹಸವಾರೆ ಗಾಯಗೊಂಡ ಹಾಗೂ ಗಾಯಾಳುಗಳನ್ನು ರಕ್ಷಿಸಲು ಹೋದ ವ್ಯಕ್ತಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದ ಘಟನೆ ಕುಂಬ್ರ ಸಮೀಪದ ಸಾರೆಪುಣಿಯಲ್ಲಿ ಜ.18ರಂದು ನಡೆದಿದೆ.



ಸಾರೆಪುಣಿಯಿಂದ ಗಟ್ಟಮನೆಗೆ ಹೋಗುವ ರಸ್ತೆ ಕಡೆಗೆ ದ್ವಿಚಕ್ರ ವಾಹನವನ್ನು ಸವಾರೆ ತಿರುಗಿಸಿದ ವೇಳೆ ಹಿಂದಿನಿಂದ ಕಾರೊಂದು ಬಂದಿದ್ದು ಈ ವೇಳೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಬದಿಯಲ್ಲಿದ್ದ ಕಟ್ಟೆಗೆ ಡಿಕಿ ಹೊಡೆದಿದೆ, ಡಿಕ್ಕಿ ಹೊಡೆದ ದ್ವಿಚಕ್ರ ವಾಹನದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಡಿಕ್ಕಿಯ ರಭಸಕ್ಕೆ ಬಿದ್ದು ಗಾಯಗೊಂಡಿದ್ದರು. ಇದನ್ನು ನೋಡಿದ ಸ್ಥಳೀಯ ಅಂಗಡಿ ಮಾಲಕ ಅರಬ್ಬಿಕುಂಞಿ ತಮ್ಮ ಅಂಗಡಿಯಿಂದ ರಸ್ತೆಯ ಇನ್ನೊಂದು ಬದಿಗೆ ರಸ್ತೆ ದಾಟಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅರಬ್ಬಿಕುಂಞಿ ಅವರು ರಸ್ತೆಗೆಸೆಯಲ್ಪಟ್ಟಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಬ್ಬಕುಂಞಿ ಅವರ ಕಿವಿ ಮತ್ತು ಕೆನ್ನೆಯ ಭಾಗಕ್ಕೆ ಗಾಯವಾಗಿದೆ. ಅರಬ್ಬಿಕುಂಞಿ ಅವರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಬೈಕ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಸ್ಥಳೀಯವಾಗಿ ಯಾವುದೇ ಅಪಘಾತ ನಡೆದರೂ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಉಪಚರಿಸುವ ಅರಬ್ಬಿಕುಂಞಿ ಅವರಿಗೇ ಅಪಘಾತ ಆಗಿರುವುದು ಬಹಳ ದುಖ ತಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಅನೇಕ ಅಪಘಾತಗಳು ನಡೆಯುತ್ತಿದ್ದು ಇತ್ತೀಚೆಗೆ ವಿದ್ಯಾರ್ಥಿಯೊಬ್ಬರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಮುಖ್ಯರಸ್ತೆಯಿಂದ ಗಟ್ಟಮನೆ ರಸ್ತೆಗೆ ನೇರವಾಗಿ ವಾಹನಗಳನ್ನು ತಿರುಗಿಸುವುದು ಮತ್ತು ಗಟ್ಟಮನೆ ರಸ್ತೆಯಿಂದ ಮುಖ್ಯರಸ್ತೆಗೆ ವೇಗವಾಗಿ ವಾಹನಗಳು ಬರುವ ಪ್ರಮೇಯ ಇಲ್ಲಿ ಕಂಡು ಬರುತ್ತಿದ್ದು ಇದು ಹೆಚ್ಚಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಟ್ಟಮನೆ ರಸ್ತೆಯಿಂದ ಮುಖ್ಯರಸ್ತೆಗೆ ಸೇರುವಲ್ಲಿ ಹಂಪ್ಸ್ ಅಳವಡಿಕೆ ಮಾಡಬೇಕೆನ್ನುವ ಆಗ್ರಹಗಳೂ ಸ್ಥಳೀಯವಾಗಿ ಕೇಳಿ ಬಂದಿದೆ.










