






ಹಿಂದುತ್ವವೇ ಈ ದೇಶದ ಅಸ್ಮಿತೆ; ಡಾ.ರವಿ


ನೆಲ್ಯಾಡಿ: ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ತಾಲೂಕು ನೆಲ್ಯಾಡಿ ಮಂಡಲ ಇದರ ವತಿಯಿಂದ ’ಹಿಂದೂ ಸಂಗಮ’ ಫೆ.1ರಂದು ಸಂಜೆ ನೆಲ್ಯಾಡಿ ಗಾಂಧಿಮೈದಾನದಲ್ಲಿ ನಡೆಯಿತು.




ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಸಂಘಟನೆ ಮುಖಂಡ ಡಾ.ರವಿ ಅವರು, ಭಾರತದಲ್ಲಿ ಜನಿಸಿರುವುದು ನಮ್ಮ ಮಹಾಭಾಗ್ಯ. ಎಲ್ಲರನ್ನೂ ಒಗ್ಗೂಡಿಸುವ ಹಿಂದುತ್ವ ಈ ನಾಡಿನ ಪ್ರಾಣ. ಜಗತ್ತಿನ ಮೇಲೆ ಆಕ್ರಮಣ ಮಾಡದೆ ಮಾನವತೆಯ ಮಾರ್ಗ ತೋರಿಸಿದ ದೇಶ ಭಾರತ ಮಾತ್ರ. ಸಾಧುಸಂತರು, ಮಹನೀಯರ ತ್ಯಾಗ ಈ ಮಣ್ಣಿನ ಶಕ್ತಿ. ಹಿಂದುತ್ವವೇ ಈ ರಾಷ್ಟ್ರದ ಅಸ್ಮಿತೆ, ಭಾರತ ಮತ್ತು ಹಿಂದುತ್ವವನ್ನು ಬೇರೆ ಬೇರೆ ಎಂದು ನೋಡುವುದೇ ಅಸಾಧ್ಯ. ಹಿಂದುತ್ವ ಅಂದರೆ ಭಾರತ, ಭಾರತವೇ ಹಿಂದುತ್ವ ಎಂದು ಡಾ.ರವಿ ಹೇಳಿದರು. ಬೆಂಗಳೂರು ಸತ್ಯಸಾಯಿ ಆಸ್ಪತ್ರೆಯ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಸಂತಿ ರುಕ್ಮಯ್ಯ ಗೌಡ ದಗ್ಗೋಡಿ ಅವರು ಮಾತನಾಡಿ, ನಾವು ಧರ್ಮವನ್ನು ಕಾಯ್ದುಕೊಂಡರೆ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಆಚಾರ-ವಿಚಾರಗಳನ್ನು ತಿಳಿಸಿಕೊಡುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೇವಸ್ಥಾನದ ಉಪಾಧ್ಯಕ್ಷ ಹರೀಶ್ ಪಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ದೋಂತಿಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಡಾ.ಸುಬ್ರಹ್ಮಣ್ಯ ಶಬರಾಯ, ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷ ಜಯರಾಜ್ ಕೊರಮೇಲು, ಕೊಣಾಲು ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಕಾವು-ಕೌಕ್ರಾಡಿ ಶ್ರೀ ತ್ರಿಗುಣಾತ್ಮಕ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಳದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಮಾದೇರಿ ಶಬರಿಗಿರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಳದ ಅಧ್ಯಕ್ಷ ಶಿವರಾಮ ಗೌಡ ಕೊರಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ವಿಷ್ಣು ಸಹಸ್ರನಾಮ ಪಠಣ, ಕುಣಿತ ಭಜನೆ, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ-ನೆಲ್ಯಾಡಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಬಳಿಕ ನಂದಿ ಪೂಜೆ, ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು.

ಮಂಡಲ ಸಂಯೋಜಕ ರವಿಪ್ರಸಾದ್ ಶೆಟ್ಟಿ ಬಲ್ಯ ಸ್ವಾಗತಿಸಿದರು. ಸುಪ್ರೀತಾ ರವಿಚಂದ್ರ ವಂದಿಸಿದರು. ಶೀನಪ್ಪ ಬರಮೇಲು ಹಾಗೂ ಸುರೇಶ್ ಪಡಿಪಂಡ ನಿರೂಪಿಸಿದರು. ಶ್ರೀರಾಮ ವಿದ್ಯಾಸಂಸ್ಥೆಯ ಮಾತಾಜಿಯವರು ಪ್ರಾರ್ಥಿಸಿದರು. ಕಾರ್ಯಕ್ರಮದ ಕೊನೆಗೆ ಶ್ರೀರಾಮ ಶಾಲಾ ವಿದ್ಯಾರ್ಥಿಗಳು ಶಾಂತಿಮಂತ್ರ ಪಠಿಸಿದರು. ನೆಲ್ಯಾಡಿ, ಗೋಳಿತ್ತೊಟ್ಟು, ಕೊಣಾಲು, ಕೌಕ್ರಾಡಿ, ಇಚ್ಲಂಪಾಡಿ ಗ್ರಾಮಗಳ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










