







ಪುತ್ತೂರು: ಪಡ್ನೂರು ಪ್ರಾಥಮಿಕ ಶಾಲೆ, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಪಡ್ನೂರಿನ ಶ್ರೀರಾಂ ಪ್ರೆಂಡ್ಸ್ ಕಬಡ್ಡಿ ತಂಡದ ಆಟಗಾರರೂ ಆಗಿದ್ದ ಯುವ ವಕೀಲ ಮಂಜುನಾಥ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.


ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯ 2025ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಽಶರ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು ಡಿಸೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ಹಾಗೂ ಜನವರಿ ತಿಂಗಳಿನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಡೆದಿದ್ದ ನೇರ ಸಂದರ್ಶನದ ಮೂರು ಹಂತದ ಕಠಿಣ ಪರೀಕ್ಷೆಗಳನ್ನು ಪೂರೈಸಿರುವ ಮಂಜುನಾಥ್ ಅವರು ಇದೀಗ ನ್ಯಾಯಾಽಶರಾಗಿ ಆಯ್ಕೆಯಾಗಿದ್ದಾರೆ.



ಮೂಲತಃ ಬೆಳಗಾವಿಯವರಾಗಿರುವ ಶಿವಲಿಂಗಯ್ಯ ಮತ್ತು ನಿಂಗಮ್ಮ ಅವರ ಪುತ್ರರಾದ ಮಂಜುನಾಥ್ ಅವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ವಾಸವಿದ್ದಾರೆ. ಒಂದನೇ ತರಗತಿಯಿಂದ 6ನೇ ತರಗತಿಯವರೆಗೆ ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು 7 ಮತ್ತು 8ನೇ ತರಗತಿಯ ವಿದ್ಯಾಭ್ಯಾಸವನ್ನು ಪುತ್ತೂರು ತಾಲೂಕಿನ ಪಡ್ನೂರು ಶಾಲೆಯಲ್ಲಿ ಪೂರೈಸಿದ್ದರು. 9ರಿಂದ ದ್ವಿತೀಯ ಪಿಯುಸಿಯವರೆಗೆ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಈ ವೇಳೆ ಮಂಜುನಾಥ್ ಅವರು ಬೆಸ್ಟ್ ಔಟ್‌ಗೋಯಿಂಗ್ ಸ್ಪೋರ್ಟ್ಸ್ ಸ್ಟೂಡೆಂಟ್ ಅವಾರ್ಡ್ ಪಡೆದಿದ್ದರು. ಕರಾಟೆ ಸ್ಪರ್ಧೆಯಲ್ಲಿ 15ಕ್ಕೂ ಅಧಿಕ ಬಾರಿ ರಾಜ್ಯಮಟ್ಟದ ಪದಕ ಪುರಸ್ಕೃತರಾಗಿರುವ ಇವರು ಕರ್ನಾಟಕ ಸ್ಟೇಟ್ ಲಾ ಯೂನಿವರ್ಸಿಟಿ ನಡೆಸಿದ ಸ್ಪರ್ಧಾಕೂಟದಲ್ಲಿ ವಿವೇಕಾನಂದ ಕಾಲೇಜ್ ಪ್ರತಿನಿಧಿಸಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ಪಡ್ನೂರಿನ ಶ್ರೀರಾಂ ಫ್ರೆಂಡ್ಸ್ ಕಬಡ್ಡಿ ತಂಡದಲ್ಲಿ ಉತ್ತಮ ಆಟಗಾರನಾಗಿದ್ದ ಮಂಜುನಾಥ್ ಅವರು ಪ್ರಸ್ತುತ ಬೆಳ್ತಂಗಡಿಯ ಮಿನಿವಿಧಾನ ಸೌಧದ ಬಳಿ ಕಾರ್ಯ ನಿರ್ವಹಿಸುತ್ತಿರುವ ವಕೀಲ ಯತೀಶ್ ಶೆಟ್ಟಿ ಅವರ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು.










