ಒಂಬತ್ತು ವೇದಿಕೆಗಳಲ್ಲಿ `ಮಾತೇ – ನೃತ್ಯ ನವಾಹ’ -ಕಲಾದೀಪ ದಂಪತಿಯಿಂದ ೫ನೇ ವೇದಿಕೆಯಲ್ಲಿ ಜಗನ್ಮಾತೆಗೆ ನೃತ್ಯನಮನ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮದ ಅಂಗವಾಗಿ ಕಲಾದೀಪ' ದಂಪತಿಯಾದ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರು ಪ್ರಸ್ತುತಪಡಿಸುತ್ತಿರುವ ಮಾತೇ – ನೃತ್ಯ ನವಾಹ’ ಜಗನ್ಮಾತೆಗೆ ನೃತ್ಯನಮನ ಸರಣಿ ಕಾರ್ಯಕ್ರಮವು ಒಂಬತ್ತು ವಿಭಿನ್ನ ವೇದಿಕೆಗಳಲ್ಲಿ ನಡೆಯುತ್ತಿದ್ದು, ಅ.27ರಂದು
ಬಿ.ಸಿ.ರೋಡ್‌ನ ಡಾ.ಎನ್.ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ಪ್ರಸ್ತುತಿಗೊಂಡಿತು.

`ಮಾತೇ – ಜಗನ್ಮಾತೆಗೆ ನೃತ್ಯನಮನ’ ಸರಣಿಯ ಮೊದಲ ಪ್ರಸ್ತುತಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯದಲ್ಲಿ ನಡೆದಿದ್ದು, ಎರಡನೇ ಪ್ರಸ್ತುತಿ ಅ. 14ರಂದು ಕಲ್ಲಡ್ಕ ಸಮೀಪದ ದಾಸಕೋಡಿಯ ಕಲಾಶ್ರಯದಲ್ಲಿ, 3ನೇ ಪ್ರಸ್ತುತಿ ಅ. 24ರಂದು ಬಜಪೆಯ ತಲಕಳ ಕಾಶಿ ಶ್ರೀ ವಿಶ್ವನಾಥೇಶ್ವರ ಕ್ಷೇತ್ರದಲ್ಲಿ, 4ನೇ ಪ್ರಸ್ತುತಿ ಅ. 25ರಂದು ಪುತ್ತೂರು ಸಾಮೆತ್ತಡ್ಕದ ಕಲಾಕೇಂದ್ರ ಉದಯಗಾನ ಭಜನಾ ಮಂದಿರದಲ್ಲಿ ನಡೆಯಿತು. ಇದೀಗ ೫ನೇ ಪ್ರಸ್ತುತಿ ಬಿ.ಸಿ.ರೋಡಿನಲ್ಲಿ ನಡೆದಿದೆ. ಸಂಗೀತ ವಿದ್ವಾಂಸ ಯತಿರಾಜ ಆಚಾರ್ಯ ಮತ್ತು ಸಂಚಯಗಿರಿ ನಾಗರಿಕ ಕ್ರಿಯ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು.

ಕಲೆಯ ಸೌಂದರ್ಯದೊಂದಿಗೆ ಭಕ್ತಿಯ ಅನುಭೂತಿಯನ್ನೂ ಮೂಡಿಸುವ ಈ ಪ್ರಸ್ತುತಿ, ನೃತ್ಯದ ಮೂಲಕ ಜಗನ್ಮಾತೆಗೆ ಸಲ್ಲಿಸುವ ವಿಶಿಷ್ಟ ಆರಾಧನೆಯಾಗಿದೆ. ನ. 5ರಂದು ಕಡಂಬು ಅರಳಿ ವೃಂದ ಶ್ರೀ ವೆಂಕಟರಮಣ ಭಜನಾ ಮಂದಿರದಲ್ಲಿ, ನ. 6ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ, ನ. 8ರಂದು ಪುತ್ತೂರಿನ ಶಿವಸದನದಲ್ಲಿ ಹಾಗೂ ನ.9ರಂದು ಮಂಚಿಯ ಲಯನ್ಸ್ ಕ್ಲಬ್ ವಸುಧಾರಾ ಕಲಾಕೇಂದ್ರದಲ್ಲಿ ನೃತ್ಯಪ್ರಸ್ತುತಿ ನಡೆಯಲಿದೆ.

ಅ.31, ನ.1ಕ್ಕೆ 30ರ ಸಂಭ್ರಮಾಚರಣೆ
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ. ದೀಪಕ್ ಕುಮಾರ್ ಅವರು ದೂರದರ್ಶನದ `ಎ ಟಾಪ್’ ಕಲಾವಿದರಾಗಿದ್ದು, ದಕ್ಷಿಣ ಕನ್ನಡದ ಉಭಯ ಜಿಲ್ಲೆಗಳ ಪ್ರಥಮ ಕಲಾವಿದರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ 30 ವರ್ಷಗಳ ಹಿಂದಿನ ರಂಗಪ್ರವೇಶದ ಕ್ಷಣಗಳನ್ನು ಸ್ಮರಿಸುವ ಉದ್ದೇಶದಿಂದ ಅಂದು ಪ್ರಸ್ತುತಪಡಿಸಿದ್ದ ನೃತ್ಯಗಳನ್ನೇ ಮತ್ತೊಮ್ಮೆ ಯಶಸ್ವಿಯಾಗಿ ಪ್ರದರ್ಶಿಸಿದ್ದರು.

ಇದೀಗ ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯು ಅ. 31 ಮತ್ತು ನ. 1ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ನೃತ್ಯ ಅಭ್ಯಾಸ ಮಾಡಿ ಹೋಗಿರುವ ಹಿರಿಯರು ಮತ್ತು ಹಾಲಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಸಮಾಗಮದಲ್ಲಿ ನೃತ್ಯ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಆಳ್ವಸ್‌ನ ವಿದ್ಯಾರ್ಥಿಗಳಿಂದಲೂ ನೃತ್ಯ ಕಾರ್ಯಕ್ರಮಗಳು ಸಂಯೋಜನೆಯಾಗಲಿದೆ. ಇದರ ಅಂಗವಾಗಿ ವಿವಿಧ ಸ್ಥಳಗಳಲ್ಲಿ ವಿಭಿನ್ನ ನೃತ್ಯಪ್ರಸ್ತುತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

LEAVE A REPLY

Please enter your comment!
Please enter your name here