ದೇವರೂ ಅವಳೇ, ದೈವವೂ ಅವಳೇ, ಉಪ್ಪಿನಂಗಡಿಯ ಮಹಾಕಾಳಬ್ಬೆಯ ಕಾರ್ಣಿಕದ ಕಥೆ

0

ಬರಹ : ದಿನೇಶ ಎಂ. ಹಳೆನೇರೆಂಕಿ


ಸಂಗಮ ಕ್ಷೇತ್ರ ದಕ್ಷಿಣ ಕಾಶಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರನ ಸಾನಿಧ್ಯದಲ್ಲಿ ‘ಉಬಾರ್ ದ ಮಾಹಾಕಾಳಬ್ಬೆ’ ಅಂತಲೇ ಕರೆಸಿಕೊಳ್ಳುವ ಮಹಾಕಾಳಿಯ ಕಾರ್ಣಿಕ ನುಡಿಯೋದಕ್ಕೆ ಸಹಸ್ರ ನಾಲಗೆಯ ಆದಿಶೇಷನಿಗೂ ಅಸಾಧ್ಯ ಎಂದರೆ ತಪ್ಪಿಲ್ಲ.ಕರಾವಳಿಯ ಕಾವಲು ದೇವತೆ ಮಹಾಕಾಳಿಯು ಕೈಯಲ್ಲಿ ತ್ರಿಶೂಲ, ಖಡ್ಗ, ಡಮರುಗ ಮತ್ತು ಪಾನೀಯದ ಬಟ್ಟಲು ಹಿಡಿದು ವಿರಾಜಮಾನಳಾಗಿದ್ದಾಳೆ. ಈ ಕ್ಷೇತ್ರದಲ್ಲಿ ಕುಂಕುಮಾರ್ಚನೆ ಮತ್ತು ಬೂಲ್ಯ ಸೇವೆ(ರಂಗ ಪೂಜೆ) ಮಹಾಕಾಳಿಗೆ ಅತ್ಯಂತ ಪ್ರಿಯವಾದ ಪೂಜೆಗಳಾಗಿವೆ.


ಈ ವರ್ಷ ಉಪ್ಪಿನಂಗಡಿಯ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಫೆ.15ರಿಂದ ಆರಂಭಗೊಂಡು ಮಾ.24ರ ತನಕ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ನಡೆಯುತ್ತಿವೆ. ಮಾ.20ರಂದು ರಾತ್ರಿ ಮಹಾಕಾಳಿ ಮೆಚ್ಚಿ, ಮಾ.24ರಂದು ರಾತ್ರಿ ಕದಿಕ್ಕಾರು ಬೀಡಿನಿಂದ ಭಂಡಾರ ಬಂದು ದೇವಾಲಯದ ಸಂತೆ ಮಜಲಿನಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದೆ.


ಮೆಚ್ಚಿ ನೇಮೋತ್ಸವ ಎಂದು ಕರೆಯಲ್ಪಡುವ ಎರಡನೇ ವಿಧದ ಆರಾಧನೆ ದೇವಿಗೂ, ಭಕ್ತರಿಗೂ ವಿಶೇಷ. “ಸಾಂಕ್ಂಡ ಸಮ್ಮಲೆಯಾದ್, ಪೆದ್ದ್ಂಡ ಅಪ್ಪೆಯಾದ್, ದೇವೆರಾಪುಂಡಲಾ ಯಾನೆ, ದೈವ ಆಪುಂಡಲಾ ಯಾನೆ, ಮಾಯೆದ ಜಕ್ಕೆಲ್ ಡ್ ಮಾನಾದ್ ಸಾಂಕುವೆ” ಎನ್ನುವ ದೈವ ವಾಕ್ಯದಂತೆ, ಆಕೆ ದೇವರಾಗಿಯೂ, ದೈವವಾಗಿಯೂ ಜಾತಿ, ಮತ ಎಲ್ಲವನ್ನೂ ಮೀರಿದ ಜಗನ್ಮಾತೆಯಾಗಿ ಎಲ್ಲರನ್ನೂ ಪೊರೆಯುತ್ತಿದ್ದಾಳೆ.


ಅವತ್ತು ಇಬ್ಬರು ಯುವಕರು ಉಪ್ಪಿನಂಗಡಿ ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ಉಳಿದವರಿಗಿಂತ ಭಿನ್ನವಾಗಿ ನಡೆದಾಡುತ್ತಿದ್ದರು. ಸನಿಹದ ನದಿಗಿಳಿಯುವ ಮೆಟ್ಟಿಲ ಬಳಿ ಒಂದಷ್ಟು ಹೊತ್ತು ಏನನ್ನೋ ಹುಡುಕುತ್ತಿರುವಂತೆ ಸಂಚರಿಸುತ್ತಿದ್ದ ಅವರು ಬಳಿಕ ಅಲ್ಲಿನ ಪುರೋಹಿತರೊಬ್ಬರಲ್ಲಿ ಏನನ್ನೋ ವಿಚಾರಿಸುತ್ತಿದ್ದರು.
ಬಳಿಕ ಅವರಲ್ಲಿ ಒಬ್ಬಾತ ದೂರದಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾದಿಂದ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ದೇವಾಲಯದ ಬಳಿಗೆ ಬಂದರು. ಅವರಿಬ್ಬರೂ ಬ್ಯಾರಿ ಭಾಷೆ ಮಾತನಾಡುತ್ತಿದ್ದುದರಿಂದ ಸಹಜವಾಗಿಯೇ ಅಲ್ಲಿದ್ದವರಿಗೆ ಅವರ ಕುರಿತು ಕುತೂಹಲ ಮೂಡಿತ್ತು. ಆ ಚೀಲದಲ್ಲಿ ತುಂಬಿದ್ದ ತೆಂಗಿನಕಾಯಿಗಳನ್ನು ಮಹಾಕಾಳಿ ದೇವಾಲಯದ ಬಳಿಯ ನದಿಗಿಳಿಯುವ ಮೆಟ್ಟಿಲಿನಲ್ಲಿ ಒಂದೊಂದೇ ಒಡೆಯ ತೊಡಗಿದ್ದರು. ಆಶ್ಚರ್ಯವೆಂದರೆ ಪ್ರತಿಯೊಂದು ತೆಂಗಿನ ಕಾಯಿ ಒಡೆದು ಮೇಲ್ಮುಖವಾಗಿ ಬೀಳತೊಡಗಿತ್ತು.


ಧಾರ್ಮಿಕ ನೆಲೆಗಟ್ಟಿನಲ್ಲಿ ತೆಂಗಿನಕಾಯಿ ಒಡೆಯುವಾಗ ಅದು ಒಡೆದು ಮೇಲ್ಮುಖವಾಗಿ ಬಿದ್ದರೆ ದೇವರು ಪ್ರಾರ್ಥನೆಯನ್ನು ಸ್ವೀಕರಿಸಿದ್ದಾನೆಂಬ ನಂಬಿಕೆ ಇರುವುದರಿಂದ ಯುವಕರು ಒಡೆದ ತೆಂಗಿನಕಾಯಿ ಬಿದ್ದ ಸ್ವರೂಪ ಭಗವಂತನ ಪ್ರೀತಿಗೆ ಪಾತ್ರವಾಗಿದೆ ಎಂಬ ಭಾವನೆ ಮೂಡಿ ಯುವಕರನ್ನು ಯಾಕಾಗಿ ಈ ತೆಂಗಿನಕಾಯಿ ಒಡೆದಿದ್ದೀರಿ ಎಂದು ಕೆಲವರು ಪ್ರಶ್ನಿಸಿದರು.
ಅದಕ್ಕವರು, ನಮ್ಮ ಮನೆಯಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ಮಹಾಕಾಳಿ ಅಮ್ಮನಿಗೆ ಪ್ರಾರ್ಥನೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದೆವು. ನಮ್ಮ ಪ್ರಾರ್ಥನೆ ಫಲಿಸಿ ಮದುವೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಹರಕೆಯನ್ನು ಹೇಗೆ ತೀರಿಸುವುದೆಂದು ತಿಳಿಯದೆ ಗೊಂದಲದಲ್ಲಿದ್ದೆವು. ಬಳಿಕ ದೇವಾಲಯದ ಬಳಿಯ ನದಿಗಿಳಿಯುವ ಮೆಟ್ಟಿಲಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದೇವೆ ಎಂದ ಅವರು ಕಾಣಿಕೆ ಹಣವನ್ನು ಅಲ್ಲಿನ ಕಾಣಿಕೆ ಡಬ್ಬಿಗೆ ಹಾಕಿ ಭಕ್ತಿಯಿಂದ ನಮಿಸಿ ನಿರ್ಗಮಿಸಿದರು. ಇದು ತಿಳಿದ ಕಥೆಯಾದರೆ, ಇನ್ನು ಹೇಳಿಕೊಳ್ಳದ ಮಹಾಕಾಳಬ್ಬೆಯ ಕರುಣೆಯ ಕಟಾಕ್ಷದ ಘಟನೆಗಳು ಅಸಂಖ್ಯ ಕುಟುಂಬಗಳ ಜೊತೆಗಿದೆ.


ಆಕೆಯ ಶಿಲೆ ನಿರ್ಮಾಣವೂ ಆಕೆಯ ಮೇಲಿನ ಭಕ್ತರ ಪ್ರೀತಿಗೆ ಮತ್ತು ಆಕೆಯ ಮಹಿಮೆಗೆ ಒಂದು ನಿದರ್ಶನದಂತಿದೆ. 1934ರಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ವೇಳೆ ಆಗಿನ ಪ್ರಸಿದ್ಧ ಶಿಲ್ಪಿ ರಂಜಲಾ ಗೋಪಾಲ್ ಶೆಣೈ 1953ರಲ್ಲಿ ಯಾವುದೇ ಸಂಭಾವನೆಯನ್ನು ಪಡೆಯದೆಯೇ ದೇವಿಯ ವಿಗ್ರಹವನ್ನು ಕೆತ್ತಿದ್ದರು ಎನ್ನುವುದು ವಿಶೇಷ.
ಇನ್ನು ಆಕೆಯ ಲೀಲೆಗಳ ಬಗ್ಗೆ ಜಾನಪದ ಕಥೆಗಳು ಹಲವಿದೆ. ತುಳುನಾಡ ದೈವಗಳಾದ ಕಲ್ಕುಡ – ಕಲ್ಲುರ್ಟಿ ಮಾಯಾ ರೂಪದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ತಟದಲ್ಲಿ ಬಂದು ನೆಲೆಸಲು ನಿರ್ಧರಿಸಿದ ವೇಳೆ ರಾತ್ರಿ- ಹಗಲಾಗುವುದರ ಒಳಗೆ ಕಲ್ಕುಡ ತನ್ನ ಸ್ಥಾನವನ್ನು ಕಟ್ಟಲು ಮುಂದಾದಾಗ ಆತನನ್ನು ನಿಲ್ಲಿಸಲು ಮಹಾಕಾಳಿಯು ಕೋಳಿಯಂತೆ ಕೂಗುತ್ತಾಳೆ. ಆತ ಬೆಳಗಾಯ್ತು ಎಂದು ಕೆಲಸ ನಿಲ್ಲಿಸಿ ಮಾಯವಾಗುತ್ತಾನೆ ಎನ್ನುವ ಮಾತುಗಳೂ ಇವೆ.


ನೇತ್ರಾವತಿ ಕುಮಾರಧಾರ ನದಿಯ ನೀರು ಆಕೆಯ ಪುಣ್ಯ ಪಾದ ಸ್ಪರ್ಶಿಸಿ ಆಕೆಯ ಗುಡಿಯನ್ನು ಸುತ್ತಿ ಸಂಗಮಗೊಳ್ಳುವ ರೀತಿಯೇ ಭಕ್ತರಿಗೆ ದೈವೀಕ ಅನುಭವ ಮತ್ತು ಪ್ರಕೃತಿಯೇ ಆಕೆಯ ಮಡಿಲಲ್ಲಿ ಶರಣಾಗುವ ಬಗೆಯೇ ರೋಮಾಂಚಕ. ಕಣ್ಣಿಗೆ ಕಾಣುವ ನದಿಗಳು ಎರಡಾದ್ರೂ ಗುಪ್ತಗಾಮಿನಿಯಾಗಿ ಸರಸ್ವತಿಯು ಸಂಗಮಗೊಳ್ಳುತ್ತಾಳೆ ಹಾಗಾಗಿ ಇದು ತ್ರಿವೇಣಿ ಸಂಗಮ ಎನ್ನುವುದು ಪ್ರತೀತಿ ಇದೆ. ಈ ಸಂಗಮಕ್ಕೂ ಜಾನಪದ ಕಥೆಗಳಿವೆ. ಕುಮಾರಧಾರದಲ್ಲಿ ಕಲ್ಲುಗಳು ಹೆಚ್ಚು ಹಾಗಾಗಿ ಆತ ಕೋರೆಹಲ್ಲಿನ ಕುಮಾರಧಾರ ನೇತ್ರಾವತಿಯನ್ನು ಪ್ರೇಮಿಸಿ ಸೇರಲು ವರ್ಷವೂ ಬಂದು ಆಕೆಯನ್ನು ಅಡ್ಡಗಟ್ಟುತ್ತಾನೆ, ಕೋರೆ ಹಲ್ಲಿನವ ನನಗೆ ಬೇಡ ಎಂದು ನೇತ್ರಾವತಿ ಕೋಪಿಸಿಕೊಂಡು, ಕಾಳಿಯ ಬಳಿ ದೂರುತ್ತಾಳೆ, ಆಕೆ ಸಮಾಧಾನಿಸಿ ಇಬ್ಬರನ್ನೂ ಕಳುಹಿಸುತ್ತಾಳೆ. ಬಳಿಕ ತನ್ನ ಪ್ರವಾಹವನ್ನು ತಗ್ಗಿಸಿ ನೇತ್ರಾವತಿ ಹೋಗುತ್ತಾಳೆ ಎನ್ನುವುದು ಒಂದು ಸುಂದರ ಜಾನಪದ ನಂಬಿಕೆ.


ಈ ಕ್ಷೇತ್ರದಲ್ಲಿ ಕಾಳಿಯ ಜೊತೆ ಕಾಲಭೈರವನೂ ನೆಲೆಸಿದ್ದಾನೆ, ಜೊತೆಗೆ ಸಾವಿರದ ಒಂದು ದೈವಗಳೂ ಇಲ್ಲಿ ನೆಲೆಸಿದ್ದಾರೆ ಎನ್ನುವ ಈ ಪುಣ್ಯ ದಕ್ಷಿಣ ಕಾಶಿ ಮುಕ್ತಿ ಧಾಮವೂ ಹೌದು. ಹಾಗಾಗಿ ಕಾಲವಾದ ಪಿತೃಗಳಿಗೆ ಈ ಕಾಳಿಯ ಪದತಳದಲ್ಲಿ ಪಿಂಡ ಪ್ರದಾನದಂತಹ ಅಂತ್ಯ ಕ್ರಿಯೆಗಳನ್ನು ಮಾಡುವುದು ಅತ್ಯಂತ ಪವಿತ್ರವೆಂದು ನಂಬಲಾಗಿದೆ. ನೇತ್ರಾವತಿಯ ಒಡಲಲ್ಲಿ ಸಹಸ್ರಲಿಂಗೇಶ್ವರನ ಸಾನಿಧ್ಯವಿರುದರಿಂದ, ಇಲ್ಲಿ ಯಾವ ಕಲ್ಲು ಹೆಕ್ಕಿದರೂ ಅದು ಶಿವಲಿಂಗ ಹಾಗಾಗಿ ಅಲ್ಲಿಂದ ಕಲ್ಲು ಕೊಂಡುಹೋಗಬಾರದೆನ್ನುವ ಮಾತೂ ಇದೆ.
ಇಲ್ಲಿನ ಪ್ರತಿಯೊಂದು ಕಲ್ಲುಗಳೂ ಸಹಸ್ರ ಲಿಂಗಗಳಾಗಿವೆ, ಇಲ್ಲಿನ ಮಣ್ಣಿನ ಪ್ರತಿ ಕಣಗಳಲ್ಲೂ ಸಹಸ್ರ ದೈವಗಳ ನೆಲೆಯಿದೆ. ಹಾಗಾಗಿ ಇದು ದಕ್ಷಿಣದ ದೇವಭೂಮಿ. ಕಾಳಿಯೂ ಕಾಲನೂ ಒಂದಾಗಿ ಪ್ರಕೃತಿಯೇ ಪುರುಷನ ಜೊತೆ ಸಂಗಮಗೊಳ್ಳುವ ದೈವಿಕ ಭೂಮಿ ಈ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ಸಾನಿಧ್ಯ.

LEAVE A REPLY

Please enter your comment!
Please enter your name here