







ಪ್ರತಿ ವರ್ಷ ಅ: 24 ರಂದು ವಿಶ್ವಾದ್ಯಂತ ವಿಶ್ವ ಪೋಲಿಯೋ ದಿನವನ್ನು ಆಚರಿಸಲಾಗುತ್ತದೆ. ಪೋಲಿಯೋ ಎಂಬ ಭೀಕರ ಹೆಮ್ಮಾರಿಯಿಂದ ಜಗತ್ತಿನ ಮಕ್ಕಳನ್ನು ರಕ್ಷಿಸಲು ಮತ್ತು ಈ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ದಿನ ಇದಾಗಿದೆ. ಪೋಲಿಯೋ ಲಸಿಕೆಯನ್ನು ಸಂಶೋಧಿಸಿದ ಮಹಾನ್ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.


ಪೋಲಿಯೋ ಎಂಬುದು ಪೋಲಿಯೋ ವೈರಸ್ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗ. ಇದು ಮುಖ್ಯವಾಗಿ 5 ವರ್ಷದೊಳಗಿನ ಮಕ್ಕಳ ನರಮಂಡಲದ ಮೇಲೆ ದಾಳಿ ಮಾಡಿ, ಶಾಶ್ವತ ಅಂಗವೈಕಲ್ಯ ಅಥವಾ ಪಾರ್ಶ್ವವಾಯು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಪ್ರಾಣಾಪಾಯವನ್ನೂ ತರಬಹುದು. ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ, ಲಸಿಕೆ ನೀಡುವುದು ಒಂದೇ ಏಕೈಕ ತಡೆಗಟ್ಟುವ ಮಾರ್ಗವಾಗಿದೆ.



1988 ರಲ್ಲಿ ಜಾಗತಿಕ ಪೋಲಿಯೋ ನಿರ್ಮೂಲನೆ ಉಪಕ್ರಮ ಆರಂಭವಾದಾಗ ಜಗತ್ತಿನಲ್ಲಿ ಪ್ರತಿ ವರ್ಷ 3.5 ಲಕ್ಷಕ್ಕೂ ಹೆಚ್ಚು ಪೋಲಿಯೋ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಸತತ ಲಸಿಕಾ ಅಭಿಯಾನಗಳ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಪೋಲಿಯೋ ಪ್ರಕರಣಗಳು ಶೇಕಡಾ 99 ಕ್ಕಿಂತ ಹೆಚ್ಚು ಕಡಿಮೆಯಾಗಿವೆ. ಇಂದು ಜಗತ್ತಿನಾದ್ಯಂತ ಕೋಟ್ಯಂತರ ಮಕ್ಕಳು ಪೋಲಿಯೋ ಹನಿಗಳ ಕಾರಣದಿಂದಾಗಿ ಸುಕ್ಷೇಮವಾಗಿ ಮುನ್ನಡೆಯುತ್ತಿದ್ದಾರೆ. ಪ್ರಸ್ತುತ ವಿಶ್ವದಾದ್ಯಂತ ರೋಟರಿ ಸಂಸ್ಥೆಯ ನೇತೃತ್ವದಲ್ಲಿ “ಒಟ್ಟಾಗಿ, ನಾವು ಪೋಲಿಯೋ ಕೊನೆಗಾಣಿಸೋಣ” ಎಂಬ ಜಾಗತಿಕ ಘೋಷಣೆಯೊಂದಿಗೆ ಪೋಲಿಯೋ ನಿರ್ಮೂಲನೆಗೆ ಕಟಿಬದ್ಧರಾಗಿ ಶ್ರಮಿಸಲಾಗುತ್ತಿದೆ.

ಒಂದು ಕಾಲದಲ್ಲಿ ಜಗತ್ತಿನ ಒಟ್ಟು ಪೋಲಿಯೋ ಪ್ರಕರಣಗಳಲ್ಲಿ ಅರ್ಧದಷ್ಟು ಭಾರತದಲ್ಲೇ ವರದಿಯಾಗುತ್ತಿದ್ದವು. ಭಾರತದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವುದು ಅಸಾಧ್ಯ ಎಂದೇ ಜಗತ್ತು ಭಾವಿಸಿತ್ತು. ಆದರೆ ಭಾರತ ಸರ್ಕಾರ ಹಮ್ಮಿಕೊಂಡ “ಪಲ್ಸ್ ಪೋಲಿಯೋ ಅಭಿಯಾನ” ಇತಿಹಾಸ ಸೃಷ್ಟಿಸಿತು. ಭಾರತದಲ್ಲಿ ಪೋಲಿಯೋನ ಕೊನೆಯ ಪ್ರಕರಣ 2011 ರ ಜನವರಿ 13 ರಂದು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿತ್ತು. ಸತತ ಮೂರು ವರ್ಷಗಳ ಕಾಲ ದೇಶದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬರದ ಹಿನ್ನೆಲೆಯಲ್ಲಿ, 2014 ರ ಮಾರ್ಚ್ 27 ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಅಧಿಕೃತವಾಗಿ “ಪೋಲಿಯೋ ಮುಕ್ತ ದೇಶ” ಎಂದು ಘೋಷಿಸಿತು.
ಭಾರತದಲ್ಲಿ ಪೋಲಿಯೋ ನಿರ್ಮೂಲನೆಯ ಯಶಸ್ಸಿನ ಪ್ರಮಾಣ ಶೇಕಡಾ 100 ರಷ್ಟಿದೆ. ಕೋಟ್ಯಂತರ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯರು ಮತ್ತು ಸ್ವಯಂಸೇವಕರು ಮನೆ ಮನೆಗೆ ತೆರಳಿ ಬದುಕಿನ ಎರಡು ಹನಿಗಳು (ದೋ ಬೂಂದ್ ಜಿಂದಗಿ ಕೀ) ತಲುಪಿಸಿದ್ದು ಈ ಮಹಾನ್ ಯಶಸ್ಸಿಗೆ ಕಾರಣ.
ಇಂದು ಇಡೀ ಜಗತ್ತಿನಲ್ಲಿ ಕೇವಲ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಮಾತ್ರ ಪೋಲಿಯೋ ವೈರಸ್ ಇನ್ನೂ ಸಕ್ರಿಯವಾಗಿದೆ. ಆ ದೇಶಗಳಿಂದ ಮತ್ತೆ ರೋಗ ಹರಡದಂತೆ ತಡೆಯಲು ಭಾರತ ಸೇರಿದಂತೆ ಎಲ್ಲಾ ದೇಶಗಳು ಇಂದಿಗೂ ಮುಂಜಾಗ್ರತಾ ಕ್ರಮವಾಗಿ ಪೋಲಿಯೋ ಲಸಿಕಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದಿವೆ.
ಪೋಲಿಯೋ ಮುಕ್ತ ಭಾರತ ಸಾಧನೆ ಇಡೀ ಜಗತ್ತಿಗೆ ಒಂದು ಮಾದರಿ. ಜಗತ್ತಿನಾದ್ಯಂತ ಈ ರೋಗ ಸಂಪೂರ್ಣವಾಗಿ ನಾಶವಾಗುವವರೆಗೂ ನಾವು ಜಾಗರೂಕರಾಗಿರಬೇಕು. ನಿಮ್ಮ ಮನೆಯಲ್ಲಿರುವ 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.










