ದೋಳ್ಪಾಡಿ: ತರವಾಡು ಮನೆ ವಿಚಾರ-ವ್ಯಕ್ತಿಗೆ ತಂಡದಿಂದ ಹಲ್ಲೆ ಆರೋಪ: ಕೇಸು ದಾಖಲು

0

ಕಡಬ: ತರವಾಡು ಮನೆಯ ದೈವ-ದೇವರ ಚಾಕ್ರಿ ಹಾಗೂ ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಗುಂಪಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೋಳ್ಪಾಡಿ ಗ್ರಾಮದ ಗಣಪಯ್ಯ ಗೌಡರ ಮಗ ನಿವಾಸಿ ಜಗನ್ನಾಥ ಡಿ. (56) ಹಲ್ಲೆಗೊಳಗಾದವರು. “ಕಳೆದ 50 ವರ್ಷಗಳಿಂದ ತಂದೆಯ ಕಾಲದಿಂದಲೂ ತಮ್ಮ ತರವಾಡು ಮನೆಯಲ್ಲಿ ದೈವ-ದೇವರ ಚಾಕ್ರಿ ಹಾಗೂ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿದ್ದೆ. ಮಾ.14ರಂದು ತರಕಾರಿಯನ್ನು ಮಾರಾಟ ಮಾಡಲು ಕಾಣಿಯೂರು ಪೇಟೆಗೆ ಹೋಗಿದ್ದೆ.ಮಧ್ಯಾಹ್ನ ಮನೆಗೆ ಮರಳಿ ಬಂದಾಗ, ಮನೆಯ ನೀರಿನ ಟ್ಯಾಂಕ್ ಮುಗುಚಿ ಪೈಪ್ ತುಂಡು ಮಾಡಲಾಗಿತ್ತು. ಅಲ್ಲದೆ ಮನೆಯ ಹಂಚು ತೆಗೆದು, ಬೋರ್ ಪಂಪ್ ಪೈಪ್ ಕತ್ತರಿಸಿ ಹಾನಿ ಮಾಡಲಾಗಿತ್ತು. ಈ ಬಗ್ಗೆ ಮನೆಯ ಪಕ್ಕದ ಆಶ್ಲೇಷ ಎಂಬ ಹುಡುಗನೊಂದಿಗೆ ಕೇಳಿದಾಗ, ತರವಾಡು ಮನೆಯ ಕುಟುಂಬದವರೆಲ್ಲ ಸೇರಿ ಮಾಡಿದ್ದಾಗಿ ತಿಳಿಸಿದ್ದಾರೆ. ಅದೇ ದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾನು ತಮ್ಮ ಸ್ಕೂಟಿಯಲ್ಲಿ ಅಲೆಕ್ಕಾಡಿಗೆ ತೆರಳುತ್ತಿದ್ದಾಗ, ಆರೋಪಿಗಳಾದ ಜಯಚಂದ್ರ, ಗೋಪಿನಾಥ, ಜನಾರ್ದನ, ಶಿವರಾಮ ಹಾಗೂ ಜಯಪ್ರಕಾಶ್ ಎಂಬುವವರು ರಿಕ್ಷಾ ಮತ್ತು ಬೈಕ್‌ಗಳಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಈ ವೇಳೆ ಜಯಚಂದ್ರ ಎಂಬವರು “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದರೆ, ಜನಾರ್ದನ ಎಂಬವರು ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ನಿನ್ನನ್ನು ತರವಾಡು ಮನೆಯಿಂದ ಹೊರಹಾಕದೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾಗಿ” ಜಗನ್ನಾಥ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಹಲ್ಲೆಯಿಂದಾಗಿ ಜಗನ್ನಾಥ ಅವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ನೋವು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರರ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here