







ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ನಾಗಮಂಡಲೋತ್ಸವ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥಕವಾಗಿ ಎ.5ರಂದು ಚತುಃಪವಿತ್ರ ನಾಗಮಂಡಲ ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಹಾಗೂ ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.



ಇಲ್ಲಿನ ಶಕ್ತಿ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಕಲ್ಯಾಣಾರ್ಥ ಹಾಗೂ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವುದು ಹಾಗೂ ಧರ್ಮ ಶೃದ್ಧೆ ಇನ್ನಷ್ಟು ಬೆಳೆಯಬೇಕು ಎಂಬ ಉದ್ದೇಶದಿಂದ ಟ್ರಸ್ಟ್ನ ವತಿಯಿಂದ ಪ್ರತಿವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ಬಾರಿ ನಾಗಮಂಡಲವನ್ನು ಆಯೋಜಿಸಲಾಗಿದೆ. ನಾಗನಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದ್ದು, ನಮ್ಮ ಧಾರ್ಮಿಕ ವ್ಯವಸ್ಥೆಯಲ್ಲಿ ನಾಗಾರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ವಿಶೇಷವಾಗಿ ಸಂತಾನ ಭಾಗ್ಯ, ಸಮೃದ್ಧಿ, ಆರೋಗ್ಯ ಭಾಗ್ಯ ಸೇರಿದಂತೆ ಹಲವು ಇಷ್ಟಾರ್ಥ ಈಡೇರಿಕೆಗಾಗಿ ನಾಗನಿಗೆ ವಿಶೇಷ ಸೇವೆಗಳನ್ನು ನಡೆಸಲಾಗುತ್ತದೆ. ನಾಗಮಂಡಲವೆನ್ನುವ ವಿಶೇಷವಾದ ನಾಗನ ಆರಾಧನೆಯನ್ನು ಎಲ್ಲರಿಗೂ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಮಾಜದ ಎಲ್ಲಾ ಹಿಂದೂ ಬಾಂಧವರು ಇದರಲ್ಲಿ ಪಾಲ್ಗೊಳ್ಳಬೇಕು. ಶ್ರೀ ನಾಗ ದೇವರ ಅನುಗ್ರಹ ಎಲ್ಲರಿಗೂ ದೊರೆಯಬೇಕು ಎನ್ನುವ ಉದ್ದೇಶದಿಂದ ಸಾರ್ವಜನಿಕವಾಗಿ ನಾವು ಇದನ್ನು ನಡೆಸುತ್ತಿದ್ದು, ಎಲ್ಲಾ ಸಾರ್ವಜನಿಕರಿಗೂ ನಾಗಮಂಡಲ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.



ಎ.4ರಂದು ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿದ್ದು, ನಾಗಮಂಡಲ ಸೇವೆ ಮಾಡಿಸುವವರಿಗೆ ಎ.5ರಂದು ಬೆಳಗ್ಗಿನಿಂದಲೇ ಸಂಕಲ್ಪಕ್ಕೆ ಸನ್ನಿಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2ರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಸಂಜೆ 3ರಿಂದ 6ರವರೆಗೆ ಖ್ಯಾತ ಗಾಯಕರಾದ ಅಜಯ್ ವಾರಿಯರ್, ಕೀರ್ತನ್ ಹೊಳ್ಳ ಮತ್ತು ಸಂಗೀತ ಬಾಲಚಂದ್ರ ತಂಡದವರಿಂದ ಭಕ್ತಿ- ಭಾವ ಸಂಗೀತೋತ್ಸವ ನಡೆಯಲಿದೆ. ಸಂಜೆ ೬ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಆಂಬುಲೆನ್ಸ್ಗಳ ಲೋಕಾರ್ಪಣೆ ನಡೆಯಲಿದೆ. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹಾಗೂ ಶ್ರೀ ಕೇಮಾರು ಕ್ಷೇತ್ರದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ನಾಗಮಂಡಲೋತ್ಸವ ಸಮಿತಿಯ ಅಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಎಲ್ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ದಿವಾಕರ ದಾಸ್ ನೇರ್ಲಾಜೆ ದೀಪ ಪ್ರಜ್ವಲನೆ ಮಾಡಲಿದು, ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ನ ಪೂರ್ವಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸೂರ್ಯ ಹಾಸ್ಪಿಟಲ್ನ ಆಡಳಿತ ನಿರ್ದೇಶಕ ಡಾ. ರಾಜೇಶ್ ಎಸ್. ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ನಾಗಮಂಡಲ: ಸ್ವಸ್ತಿ| ಶ್ರೀ ಪರಾಭವ ನಾಮ ಸಂವತ್ಸರದ ಮೀನ ಮಾಸ 22 ಸಲುವ ಸುಮುಹೂರ್ತದಲ್ಲಿ ರಾತ್ರಿ 7ರಿಂದ ಶ್ರೀ ಕೃಷ್ಣ ಪ್ರಸಾದ್ ವೈದ್ಯರ ನೇತೃತ್ವದಲ್ಲಿ ಚತುಃಪವಿತ್ರ ನಾಗಮಂಡಲವು ಆರಂಭಗೊಳ್ಳಲಿದೆ. ಲೋಕಕಲ್ಯಾಣಾರ್ಥಕವಾಗಿ, ನಮ್ಮೆಲ್ಲರ ತನು- ಮನಗಳನ್ನು ನಿರ್ಮಲಗೊಳಿಸಲು ನಾಗದೇವರಿಗೆ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷ ಹೇರಂಭ ಶಾಸ್ತ್ರಿ, ಕಾರ್ಯಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಅಧ್ಯಕ್ಷ ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಕೋಶಾಧಿಕಾರಿ ಯತೀಶ್ ಶೆಟ್ಟಿ ಉಪ್ಪಿನಂಗಡಿ, ಸ್ವಾಗತ ಸಮಿತಿಯ ಜಯಂತ ಪೊರೋಳಿ, ವೈದಿಕ ಸಮಿತಿಯ ಪ್ರದೀಪ ಶಗ್ರಿತ್ತಾಯ ಉಪಸ್ಥಿತರಿದ್ದರು.
ಲೈವ್ ದೋಸೆ, ಅನ್ನಪ್ರಸಾದ ವಿತರಣೆ
ನಾಗಮಂಡಲ ಸೇವೆಯಲ್ಲಿ ಅನ್ನದಾನಕ್ಕೆ ವಿಶೇಷ ಮಹತ್ವವಿದ್ದು, ಎ.5ರಂದು ಸಂಜೆ ೩ರಿಂದ ೭ರವರೆಗೆ ಭಕ್ತ ಜನಗಳಿಗೆ ಲೈವ್ ಸೆಟ್ ದೋಸೆ ವಿತರಣೆ ನಡೆಯಲಿದೆ. ರಾತ್ರಿ 8:30ರಿಂದ ಅನ್ನಸಂತರ್ಪಣೆ ನಡೆಯಲಿದೆ. ನಾವೀಗ 10 ಸಾವಿರ ಜನರ ನಿರೀಕ್ಷೆ ಇಟ್ಟುಕೊಂಡಿದ್ದು, ಜನ ಹೆಚ್ಚಾದರೂ ಅನ್ನ ಪ್ರಸಾದ ವಿತರಣೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಕಾರ್ಯಕ್ರಮ ದಿನ ವಿವಿಧ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸುಮಾರು 5೦೦ರಷ್ಟು ಸ್ವಯಂ ಸೇವಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಹಲವು ಸ್ವಯಂ ಸೇವಕರು ಕಳೆದ ಒಂದು ವಾರದಿಂದಲೇ ರಾತ್ರಿ ಹಗಲೆನ್ನದೆ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ ಎಂದು ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಎ.4ರಂದು ಹೊರೆಕಾಣಿಕೆ
ನಾಗಮಂಡಲ ಸೇವೆಗೆ ಸುಮಾರು ಐದು ಸಾವಿರ ಹಾಳೆ ಹಿಂಗಾರ ಮತ್ತು ೫ ಸಾವಿರ ಸೀಯಾಳದ ಅವಶ್ಯಕತೆಯಿದ್ದು, ಇದನ್ನು ಸಮರ್ಪಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಡಿಕೆ, ತೆಂಗಿನಮರಗಳು ಇಲ್ಲದ ಭಕ್ತಾದಿಗಳು 2೦೦ ರೂ.ನ ರಶೀದಿ ಪಡೆದು ಕಾರ್ಯಾಲಯದಿಂದ ಹಿಂಗಾರ ಹಾಗೂ ಸೀಯಾಳವನ್ನು ಪಡೆದು ಅದನ್ನು ನಾಗಮಂಡಲ ಸೇವೆಗೆ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಎ.4ರಂದು ಸಂಜೆ 5 ಗಂಟೆಗೆ ಗಾಂಧಿಪಾರ್ಕ್ನಿಂದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದವರೆಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದ್ದು, ಹಸಿರು ಹೊರೆಕಾಣಿಕೆಯನ್ನು ಈ ಸಂದರ್ಭ ಸಮರ್ಪಿಸಬಹುದಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಿಂದೂ ಸಮಾಜಕ್ಕೆ ಶಕ್ತಿ ತುಂಬಲು ಹಾಗೂ ಲೋಕಕಲ್ಯಾಣಾರ್ಥಕವಾಗಿ ಧಾರ್ಮಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿರುವುದಲ್ಲದೆ, ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ದಾನಿಗಳು ಟ್ರಸ್ಟ್ಗೆ ನೀಡಿದ ಎರಡು ಆಂಬುಲೆನ್ಸ್ಗಳನ್ನು ಸಮಾಜಕ್ಕೆ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮವನ್ನು ನಡೆಸಲಾಗುವುದು. ಕಡಿಮೆ ಖರ್ಚಿನಲ್ಲಿ ರೋಗಿಗಳಿಗೆ ಇದರ ಸೇವೆ ಲಭ್ಯವಾಗಲಿದೆ. ಅತೀ ಬಡವರಿಗೆ ಉಚಿತವಾಗಿ ಆಂಬುಲೆನ್ಸ್ನ ಸೇವೆ ನೀಡಬೇಕು ಹಾಗೂ ಪ್ರತಿ ಗ್ರಾಮಕ್ಕೊಂದು ಆಂಬುಲೆನ್ಸ್ನ ವ್ಯವಸ್ಥೆ ಮಾಡಬೇಕೆಂಬ ಕನಸಿದೆ. ಪ್ರತಿ ತಿಂಗಳ ೨ನೇ ಆದಿತ್ಯವಾರ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರಗಳು ನಡೆಯುತ್ತಿದ್ದು, 16೦೦ ಜನರನ್ನು ಈಗಾಗಲೇ ಆಂಬುಲೆನ್ಸ್ನಲ್ಲಿ ಉಚಿತವಾಗಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಹಲವರ ವೈದ್ಯಕೀಯ ವೆಚ್ಚವನ್ನೂ ನೀಡಲಾಗಿದೆ. ಟ್ರಸ್ಟ್ನ ಒಂದು ಆಂಬುಲೆನ್ಸ್ ಈಗಾಗಲೇ ಬೆಟ್ಟಂಪಾಡಿ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ಹೊಸದಾದ ಎರಡು ಆಂಬುಲೆನ್ಸ್ಗಳಲ್ಲಿ ಒಂದನ್ನು ಉಪ್ಪಿನಂಗಡಿ ಭಾಗದಲ್ಲಿ ಹಾಗೂ ಇನ್ನೊಂದನ್ನು ಪುತ್ತೂರು ಭಾಗದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷರಾದ ಶ್ರೀರಾಮ ಭಟ್ ಪಾತಾಳ ಮಾತನಾಡಿ, ಟ್ರಸ್ಟ್ ಆರಂಭವಾದ ಬಳಿಕ ಉಪ್ಪಿನಂಗಡಿಯಲ್ಲಿ ನಡೆಸಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಳಿಕೆಯಾದ ಹಣವನ್ನು ಈ ಭಾಗದಲ್ಲಿ ಸಮಾಜಸೇವೆಗೆ ವಿನಿಯೋಗಿಸಲಾಗಿದೆ. ಮೊದಲನೇಯ ಕಾರ್ಯಕ್ರಮ ಮಾಡಿ ಅದರಲ್ಲಿ ಉಳಿಕೆಯಾದ ಹಣದಲ್ಲಿ ನೂಜಿಯಲ್ಲಿ ಅರ್ಧಕ್ಕೆ ನಿಂತ ಮನೆಯನ್ನು ಪೂರ್ತಿಗೊಳಿಸಿ ಅದರ ಗೃಹ ಪ್ರವೇಶ ನಡೆಸಿ ಫಲಾನುಭವಿಗೆ ಹಸ್ತಾಂತರಿಸಲಾಗಿದೆ. ಎರಡನೇ ಕಾರ್ಯಕ್ರಮವಾದ ಶನೈಶ್ಚರ ಪೂಜೆಯಲ್ಲಿ ಉಳಿಕೆಯಾದ ಹಣವನ್ನು ಎರಡು ಕ್ಯಾನ್ಸರ್ ಪೀಡಿತರಿಗೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿಯೂ ಉಳಿಕೆಯಾದ ಹಣವು ಸಮಾಜದ ಆಶಕ್ತರಿಗೆ ನೀಡಲಾಗುವುದು. ಈಗಾಗಲೇ ಟ್ರಸ್ಟ್ನಿಂದ ಸುಮಾರು 4೦೦-45೦ ಮಂದಿಗೆ ಆರ್ಥಿಕ ಸಹಾಯ ಮಾಡಲಾಗಿದ್ದು, ಯಾವುದೇ ಉಳಿಕೆ ಹಣ ಟ್ರಸ್ಟ್ನಲ್ಲಿ ಇಲ್ಲ. ಅದೆಲ್ಲವೂ ಸಮಾಜದಲ್ಲಿರುವ ಆಸಕ್ತರಿಗೆ ಸಮರ್ಪಿತವಾಗಿದೆ ಎಂದರು.









