







ಪೊಲೀಸರ ಮೇಲೆ ಕಾರು ಹರಿಸಿ ಬೆಂಗಾವಲು ವಾಹನ ಚಾಲಕ ಪರಾರಿ-ಪ್ರಕರಣ ದಾಖಲು


ವಿಟ್ಲ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ಪೊಲೀಸರು ಎರಡು ಜಾನುವಾರು ವಶಕ್ಕೆ ಪಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ನಡೆದಿದೆ. ಪೊಲೀಸರು ಪಿಕಪ್ ವಾಹನ ತಡೆದು ನಿಲ್ಲಿಸುತ್ತಿದ್ದಂತೆ ಜಾನುವಾರು ಸಾಗಾಟ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಕಾರು ಚಾಲಕ ತನ್ನ ವಾಹನವನ್ನು ಪೊಲೀಸರ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿರುವ ಘಟನೆಯೂ ನಡೆದಿದೆ.



ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕ ಬಂಟ್ವಾಳ ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಫ್ ಹಾಗೂ ಕಾರು ಚಾಲಕ ಬಶೀರ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನವೊಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಮೇ.21ರಂದು ವಿಟ್ಲ ಪೊಲೀಸ್ ಠಾಣಾ ಎಸ್.ಐ. ರಾಮಕೃಷ್ಣ ರವರಿಗೆ ಖಚಿತ ಮಾಹಿತಿ ಲಭಿಸಿದ್ದು, ಅದರಂತೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಆ ದಾರಿಯಾಗಿ ಬಂದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಎರಡು ಜಾನುವಾರುಗಳು ಪತ್ತೆಯಾಗಿತ್ತು. ಇದೇ ಸಂದರ್ಭದಲ್ಲಿ ಆ ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಸ್ವಿಪ್ಟ್ ಕಾರನ್ನು ಅದರ ಚಾಲಕ ಬಶೀರ್ ಎಂಬಾತ ಸ್ಥಳದಲ್ಲಿ ಪಿಕಪ್ ವಾಹನ ಚಾಲಕನನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರ ಪ್ರಾಣಕ್ಕೆ ಅಪಾಯವಾಗುವಂತೆ ತನ್ನ ಸ್ವಿಪ್ಟ್ ಕಾರನ್ನು ಚಲಾಯಿಸಿಕೊಂಡು ಬಂದು ಪರಾರಿಯಾಗಿದ್ದ. ಬಳಿಕ ಜಾನುವಾರು ಸಾಗಿಸುತ್ತಿದ್ದ ಪಿಕಪ್ ಚಾಲಕನನ್ನು ಮತ್ತಷ್ಟು ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು, ಜಾನುವಾರು ಸಹಿತ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಪಿಕಪ್ ಚಾಲಕ ಹಾಗೂ ಸ್ವಿಪ್ಟ್ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










