ಕನ್ಯಾನ: ಸರ್ಕಾರಿ ಕಾಲೇಜಿನಲ್ಲಿ ‘ಸಂಭ್ರಮ’ ಪ್ರತಿಭಾ ದಿನ – ಸಾಂಸ್ಕೃತಿಕ ಕಲರವ

0

ಪುತ್ತೂರು: ಕನ್ಯಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಂಭ್ರಮ’ ಪ್ರತಿಭಾ ದಿನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪದ್ಮನಾಭ ಅವರು ಮಾತನಾಡಿ, ‘ಒಂದು ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿಸುವುದು ಸುಲಭದ ಕೆಲಸವಲ್ಲ. ಇದು ಬಹುದೊಡ್ಡ ಸವಾಲು’ ಎಂದರು.

ಮುಖ್ಯ ಅತಿಥಿ ಪಂಚಾಯತ್ ಉಪಾಧ್ಯಕ್ಷ ಶ್ರೀ ಅಬ್ದುಲ್ ರೆಹಮಾನ್, ‘ಈ ಕಾಲೇಜು ನಮ್ಮೂರಿನ ಹಿರಿಯರ ಕನಸು ಹಾಗೂ ಶ್ರಮದ ಫಲ. ಇದನ್ನು ಉಳಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.

ಕನ್ಯಾನ ಭಾರತೀ ಸೇವಾಶ್ರಮದ ಸಂಚಾಲಕ ಶ್ರೀ ಈಶ್ವರ ಭಟ್ ಮಾತನಾಡಿ, ‘ಕನ್ಯಾನದಂತಹ ಗ್ರಾಮೀಣ ಪ್ರದೇಶದಲ್ಲಿ ಪದವಿ ಕಾಲೇಜು ನಿರ್ಮಿಸುವುದು ಸಲೀಸಿನ ಕಾರ್ಯವಾಗಿರಲಿಲ್ಲ. ಊರಿನ ಉತ್ಸಾಹ, ಗಣ್ಯರ ಪ್ರೋತ್ಸಾಹದಿಂದ ತಲೆಯೆತ್ತಿದ ಈ ಕಾಲೇಜನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಖಾ, ಕಾರ್ಯದರ್ಶಿ ಶ್ರೀ ರುಕ್ಮಯ ದಾಸ್, ಸದಸ್ಯ ಶ್ರೀ ಅಬ್ದುಲ್ ಮಜೀದ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಲರಾಯ ದೈವಸ್ಥಾನದ ಕಾರ್ಯದರ್ಶಿ ಶ್ರೀ ಕೆ.ಪಿ. ಗಂಗಾಧರ್, ಸಿಡಿಸಿ ಸದಸ್ಯ ಶ್ರೀ ಬಿ.ಕೆ. ಇಬ್ರಾಹಿಂ, ವಿದ್ಯಾರ್ಥಿ ಸಂಯೋಜಕಿ ಕು. ಶರಣ್ಯ ಉಪಸ್ಥಿತರಿದ್ದರು. ವಾರ್ಷಿಕ ಚಟುವಟಿಕೆಯ ಭಾಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಅಶ್ವಿನಿ ಬಿ, ಜೊವಿಟಾ ಪ್ರಿಯಾ ಗೊನ್ಸಾಲ್ವಿಸ್, ನಿಕ್ಷಿತಾ ಬಿ, ಲೋಹಿತ್ ಕುಮಾರ್ ವಿಜೇತರ ಹೆಸರು ವಾಚಿಸಿದರು. ಹೇಮಚಂದ್ರ ಹಾಗೂ ಶಂಕರಿ ಬಿ ಸಹಕರಿಸಿದರು.

ಶರಣ್ಯ ಮತ್ತು ಬಳಗ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕಿ ಚೈತ್ರಾ ಸ್ವಾಗತಿಸಿ, ಸವಿತಾ ವಂದಿಸಿದರು. ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಹೆತ್ತವರು, ವಿದ್ಯಾರ್ಥಿಗಳು, ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here