Home ಇತ್ತೀಚಿನ ಸುದ್ದಿಗಳು ಕಲಾವಿದರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ ಆರೋಪ :ಮಹೇಶ್ ಶೆಟ್ಟಿ ತಿಮರೋಡಿಗೆ ನಿರೀಕ್ಷಣಾ...

ಕಲಾವಿದರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ ಆರೋಪ :ಮಹೇಶ್ ಶೆಟ್ಟಿ ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು

0

ಪುತ್ತೂರು:ಕಲಾವಿದರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ, ಕಲಾವಿದ ‘ರಂಗ್‌ದರಾಜೆ’ ಸುಂದರ ರೈ ಮಂದಾರ ಅವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ನಮ್ಮ ಕುಡ್ಲ ಟಿ.ವಿ.ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯಕ್ಷ ತೆಲಿಕೆ’ ಎಂಬ ಕಾರ್ಯಕ್ರಮದಲ್ಲಿ ‘ಬುರುಡೆ’ ಟೈಟಲ್ ಇಟ್ಟು ಎಪಿಸೋಡ್ ಮಾಡಲಾಗಿತ್ತು.ಇದರಲ್ಲಿ ತುಳುನಾಡಿನ ಖ್ಯಾತ ಕಲಾವಿದರಾದ ಸುಂದರ್ ರೈ ಮಂದಾರ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ದಿನೇಶ್ ರೈ ಕಡಬ ಮತ್ತು ದಿನೇಶ್ ಕೋಡಪದವು ಅಭಿನಯಿಸಿದ್ದರು.ಯಕ್ಷ ತೆಲಿಕೆಯ ಕಾರ್ಯಕ್ರಮಕ್ಕೆ ಬುರುಡೆ ಟೈಟಲ್ ಇಟ್ಟುಕೊಂಡಿರುವುದಕ್ಕೆ ಕೋಪಗೊಂಡ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ,ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು.ಇವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯನ್ನು ಪ್ರಜ್ವಲ್ ಕುಮಾರ್ ಅವರು ಸುಂದರ್ ರೈ ಮಂದಾರ ಅವರಿಗೆ ಕಳುಹಿಸಿದ್ದರು.ಈ ಆಡಿಯೋವನ್ನು ಸುಂದರ್ ರೈ ಅವರು ಕೇಳಿಸಿಕೊಂಡಾಗ ಅದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರಜ್ವಲ್ ಕುಮಾರ್ ಅವರಲ್ಲಿ ‘ನಿನ್ನ ಒಂಜಿ ವೀಡಿಯೋ ತೂತೆ’ ಎಂದು ತುಳು ಭಾಷೆಯಲ್ಲಿ ಮಾತು ಆರಂಭಿಸಿ ಬಳಿಕ, ನಿನ್ನ ತಂದೆಯ ಕಥೆ ಹೇಳುವುದಾ ಎಂದು ಪ್ರಶ್ನಿಸಿದ್ದಾರೆ.ಮುಂದುವರೆದು, ಬುರುಡೆಯ ಒಂದು ವೀಡಿಯೋ ಮಾಡಿರುತ್ತೀಯಾ ಎಂದು ಕೇಳಿದ್ದಾರೆ.ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ.ಆಯೆ ಉಲ್ಲೆ ಅತ್ತಾ ಕೋಡಪದವು, ಮಂದಾರ ಎಂದು ಹೆಸರು ಉಲ್ಲೇಖಿಸಿ ಕೀಳು ಮಟ್ಟದ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ.ಇದು ತನ್ನ ಗೌರವಕ್ಕೆ, ಅಭಿಮಾನಕ್ಕೆ ಧಕ್ಕೆ ತಂದಿದೆ. ಅಲ್ಲದೆ ಸಮಾಜದ ಬೇರೆ ಬೇರೆ ಜಾತಿಗಳ ಮಧ್ಯೆ ಗಲಭೆ, ದೊಂಬಿ ಹಾಗೂ ದ್ವೇಷ ಉಂಟು ಮಾಡಲು ಕಾರಣವಾಗಿದೆ.ದಿನೇಶ್ ಕೋಡಪದವು ಅವರ ತಾಯಿಯ ಬಗ್ಗೆ ಅಪಮಾನವಾಗುವ ರೀತಿಯಲ್ಲಿ ಮಹೇಶ್ ಶೆಟ್ಟಿ ಮಾತನಾಡಿದ್ದಾರೆ. ಆ ಮೂಲಕ ಹೆಣ್ಣು ಹೆಂಗಸಿನ ಚಾರಿತ್ರ್ಯಕ್ಕೆ ಮಸಿ ಬಳಿಯುವ, ಕಳಂಕ ಬರುವ ಅವಹೇಳನಕರವಾದ ಮಾತುಗಳನ್ನು ಆಡಿದ್ದಾರೆ. ಇದು ಜಾತಿ ವೈಷಮ್ಯಕ್ಕೆ, ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವಂತಿದೆ.ತಾನು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಮತ್ತು ಉತ್ತಮ ಸ್ಥಾನಮಾನವನ್ನು ಹೊಂದಿದ್ದು ಇದೇ ಕಾರಣಕ್ಕೆ ಈ ರೀತಿಯಾಗಿ ಮಾನಹಾನಿಕರವಾದ ಪದಗಳನ್ನು ಬಳಸಿ, ಪತ್ನಿ ಹಾಗೂ ತಾಯಿ ಬಗ್ಗೆ ಕೂಡ ಮಹೇಶ್ ಶೆಟ್ಟಿ ಕೆಟ್ಟದಾಗಿ ಮಾತನಾಡಿದ್ದಾರೆ. ಮಹೇಶ್ ಶೆಟ್ಟಿ ಅವರು ತೇಜೋವಧೆ, ಮಾನಭಂಗ ಮಾಡಬೇಕು ಎಂಬ ಕುರಿತಾದ ಉದ್ದೇಶದಿಂದಲೇ ಈ ರೀತಿ ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ. ಈ ಸಂಭಾಷಣೆಯಿಂದ ಪತ್ನಿ,ತಾಯಿ ಹಾಗೂ ಮನೆಯವರಿಗೆ ತೀವ್ರವಾದ ಆಘಾತವಾಗಿದೆ.ಅಲ್ಲದೆ ಮಹೇಶ್ ಶೆಟ್ಟಿ ಅವರು ಪದೇ ಪದೇ ತನ್ನ ಮತ್ತು ದಿನೇಶ್ ಕೋಡಪದವು ಅವರ ಹೆಸರು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ.ಈ ಬಗ್ಗೆ ತಾನು ಪ್ರಜ್ವಲ್ ಅವರನ್ನು ಸಂಪರ್ಕಿಸಿದಾಗ ಪ್ರಜ್ವಲ್ ಅವರ ಮೊಬೈಲ್ ಸಂಖ್ಯೆಗೆ ಮಹೇಶ್ ಶೆಟ್ಟಿ ತಿಮರೋಡಿ ಏ.11ರಂದು ಸಾಯಂಕಾಲ 6:16 ಗಂಟೆಗೆ ಫೋನ್ ಕರೆ ಮಾಡಿ ಮಾತನಾಡಿರುವುದಾಗಿದೆ ತಿಳಿದು ಬಂದಿದೆ ಎಂದು ಸುಂದರ್ ರೈ ಮಂದಾರ ಅವರು ನೀಡಿದ್ದ ದೂರಿನ ಮೇರೆಗೆ ಏ.15ರಂದು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಲಂ 196(1),352,351(4),79 ಬಿಎನ್‌ಎಸ್ ಅಡಿಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದಲ್ಲಿ ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಜೂ.4ರಂದು ಆದೇಶಿಸಿದೆ.ಆರೋಪಿ ಪರ ವಕೀಲರಾದ ವಿಜಯವಾಸು ಪೂಜಾರಿ ಉಡುಪಿ,ನೋಯೆಲ್ ಪ್ರಶಾಂತ್ ಕುಕಡ,ಚಂದ್ರಾವತಿ ಟಿ.ಪುತ್ತೂರು ವಾದಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Breaking