







ಕಡಬ: ಪಠ್ಯಪೂರಕ ಚಟುವಟಿಕೆಗಳ ಅಂಗವಾಗಿ ಸೈಂಟ್ ಜೋಕಿಮ್ಸ್ ಹಾಗೂ ಸೈಂಟ್ ಆನ್ಸ್ ಪ್ರೌಢಶಾಲೆಗಳ ಇಕೋ ಕ್ಲಬ್ ವತಿಯಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋಡಿಬೈಲು ಸುವರ್ಣ ನಿಲಯದ ದೇವಕಿ ಪೂಜಾರಿ ಅವರ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ನೇಜಿ ನಾಟಿ ಕುರಿತು ಪ್ರಾಯೋಗಿಕ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಗಳ ಸಂಚಾಲಕ ವಂದನೀಯ ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ ಮಾತನಾಡಿ, ವಿದ್ಯಾರ್ಥಿಗಳು ಕೃಷಿಯ ಮಹತ್ವವನ್ನು ಅರಿತುಕೊಳ್ಳಲು ಹಾಗೂ ಭತ್ತದ ಬೇಸಾಯದ ವಿವಿಧ ಹಂತಗಳನ್ನು ನೇರವಾಗಿ ಅನುಭವಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ. ಗದ್ದೆಯ ಮಣ್ಣಿನೊಂದಿಗೆ ಬೆರೆಯುವುದರಿಂದ ದೈಹಿಕ ಆರೋಗ್ಯಕ್ಕೂ ಉತ್ತಮ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.




ಈ ಸಂದರ್ಭದಲ್ಲಿ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್, ಆತಿಥೇಯರಾದ ಶ್ರೀಮತಿ ದೇವಕಿ ಪೂಜಾರಿ ಅವರ ಪುತ್ರರಾದ ಸತೀಶ್ ಹಾಗೂ ಸಂತೋಷ್, ಇಕೋ ಕ್ಲಬ್ ನಿರ್ದೇಶಕರಾದ ಪೂರ್ಣಿಮಾ ಪಿ., ಮಾನಸ, ದೀಕ್ಷಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸಮದ್ ಹಾಗೂ ಸುಪ್ರಿಯಾ ಉಪಸ್ಥಿತರಿದ್ದರು.
ಕೆಸರುಗದ್ದೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಜಾನ್ ವೇಗಸ್ ಹಾಗೂ ಶ್ರೀಮತಿ ದೇವಕಿ ಪೂಜಾರಿ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸಂಚಾಲಕರು ಸ್ಮರಣಿಕೆ ನೀಡಿ ಗೌರವಿಸಿದರು.
ಬೆಳಿಗ್ಗೆಯಿಂದಲೇ ಕೆಸರುಗದ್ದೆಗೆ ಇಳಿದ ವಿದ್ಯಾರ್ಥಿಗಳು ಅನುಭವಿ ಮಹಿಳಾ ಕೃಷಿಕರ ಮಾರ್ಗದರ್ಶನದಲ್ಲಿ ನೇಜಿ ತೆಗೆಯುವುದು, ನೇಜಿ ನಾಟಿ ಮಾಡುವ ವಿಧಾನ ಸೇರಿದಂತೆ ಭತ್ತದ ಕೃಷಿಯ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿ ಪಡೆದರು. ಬಳಿಕ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಹ್ಯಾಂಡ್‌ಬಾಲ್, ವಾಲಿಬಾಲ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಸುವರ್ಣ ನಿಲಯ, ಕೋಡಿಬೈಲು ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಅಚ್ಚುಕಟ್ಟಾಗಿ ನಿರೂಪಿಸಿದರು.










