







ಪುತ್ತೂರು: ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.5ರಂದು ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ್ ಕಲ್ಲಿಮಾರ್ ಮಾತನಾಡಿ, ದೈವಸ್ಥಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡಿದ್ದು, ಇದರ ಕಾಮಗಾರಿ ಪೂರ್ಣಗೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ರೂ.5ಲಕ್ಷ ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಲಿದೆ. ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ದೊರೆಯುವ ಅನುದಾನಗಳನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದರು. ಕಳೆದ ವರ್ಷದ ನೇಮೋತ್ಸವ ಹಾಗೂ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು ಮುಂದೆಯೂ ಪ್ರತಿಯೊಬ್ಬರೂ ಸಹಕರಿಸಬೇಕು. ನೇಮೋತ್ಸವದ ಯಶಸ್ವಿಯಾಗಿ ನೆರವೇರುವಲ್ಲಿ ಯುವಕರ ಶ್ರಮ ಬಹಳಷ್ಟಿದ್ದು ಯುವಕರು ಆಡಳಿತ ಮಂಡಳಿಯಲ್ಲಿ ಆಜೀವ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.



ಸಭಾಂಗಣ ಬಾಡಿಗೆಗೆ ನೀಡಲು ಅನುಮೋದನೆ:
ದೈವಸ್ಥಾನದಲ್ಲಿ ಸಭಾಂಗಣ ಹಾಗೂ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಸೌಲಭ್ಯಗಳಿವೆ. ದೈವಸ್ಥಾನಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಸಭಾಂಗಣವನ್ನು ಕಾರ್ಯಕ್ರಮಗಳಿಗೆ ಬಾಡಿಗೆ ನೆಲೆಯಲ್ಲಿ ನೀಡುವುದು ಹಾಗೂ ಸಭಾಂಗಣದ ಸ್ವಚ್ಚತೆ ಹಾಗೂ ಉಸ್ತುವಾರಿಗೆ ಓರ್ವರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಭಾಂಗಣವನ್ನು ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವಂತೆ ಮಹಾಸಭೆ ಒಪ್ಪಿಗೆ ಸೂಚಿಸಿತು. ಬಾಡಿಗೆ ಹಾಗೂ ವೇತನ ನಿಗಧಿ ಪಡಿಸುವ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸುವಂತೆ ಸಭೆಯು ಅನುಮೋದನೆ ನೀಡಿತು.
ತಾರಾನಾಥ ರೈ, ಸಂತೋಷ್ ಬೋನಂತಾಯ, ಸಂಪತ್ ಕುಮಾರ್, ಕರುಣಾಕರ ಪಾಂಗಳಾಯಿ, ಪುರುಷೋತ್ತಮ ನಾೖಕ್, ವಿನಯ ಭಂಡಾರಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ವೀಕ್ಷಿತ್ ಕಲ್ಲಿಮಾರ್, ಜತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಆಡಳಿತ ಮಂಡಳಿ ಸದಸ್ಯ ಕರುಣಾಕರ ಆಲೆಟ್ಟಿ ಸ್ವಾಗತಿಸಿದರು. ಮುಂಡ್ಯತ್ತಾಯ ಮಹಿಳಾ ಭಜನಾ ಸದಸ್ಯರಾದ ಚಂದ್ರಾವತಿ ಆಚಾರ್ಯ ಹಾಗೂ ಸುಜಾತ ಗಂಗಾಧರ ನಾೖಕ್ ಪ್ರಾರ್ಥಿಸಿದರು.
ಕಾರ್ಯದರ್ಶಿ ಸರೋಜಿನಿ ಅಬಿಕಾರ್ ನೋಟೀಸ್ ಓದಿದದರು. ಕೋಶಾಧಿಕಾರಿ ಜಯಶಂಕರ ರೈ ಲೆಕ್ಕಪತ್ರ ಮಂಡಿಸಿದರು. ಸೂರಪ್ಪ ಗೌಡ ಕಾರ್ಯಕ್ರಮ ನಿರೂಪಿಸಿ, ಉಮಾಶಂಕರ ನಾೖಕ್ ಪಾಂಗಳಾಯಿ ವಂದಿಸಿದರು.
ಸದಸ್ಯರಾದ ಲಿಂಗಪ್ಪ ಗೌಡ, ರಾಜಗೋಪಾಲ ಶಗ್ರಿತ್ತಾಯ, ಪ್ರಶಾಂತ್ ಪಾಂಗಳಾಯಿ, ಪ್ರದೀಪ್ ಆಚಾರ್ಯ, ಪರಮೇಶ್ವರ ನಾೖಕ್, ಆನಂದ ಗೌಡ, ಸುರೇಶ್ ನಾೖಕ್, ಆನಂದ ಆಚಾರ್ಯ, ತಿಮ್ಮಪ್ಪ ನಾಯ್ಕ, ರಶ್ಮೀ ಉಮಾಶಂಕರ್ ನಾೖಕ್, ಚಂದನ್ ಶಿವಪ್ಪ ಗೌಡ, ಪ್ರತೀಕ್, ವಾಸು ಪೂಜಾರಿ, ರವಿರಾಜ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಹಾಲಿ ಸಮಿತಿಯೇ ಮುಂದುವರಿಕೆ:
ದೈವಸ್ಥಾನದ ನೂತನ ಆಡಳಿತ ಮಂಡಳಿ ಆಯ್ಕೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಹಾಲಿ ಸಮಿತಿಯನ್ನೇ ಮುಂದುವರಿಸುವಂತೆ ಮಹಾಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು. ಅದರಂತೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯ್ಕ್ ಕಲ್ಲಿಮಾರ್, ಕಾರ್ಯದರ್ಶಿಯಾಗಿ ಸರೋಜಿನಿ ಅಬಿಕಾರ್, ಉಪಾಧ್ಯಕ್ಷ ವೀಕ್ಷಿತ್ ಕಲ್ಲಿಮಾರ್, ಜತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಹಾಗೂ ಕೋಶಾಧಿಕಾರಿ ಜಯಶಂಕರ ರೈ ಅವರು ಪದಾಧಿಕಾರಿಗಳಾಗಿ ಮುಂದುವರಿಯಲಿರುವುದಾಗಿ ಮಹಾಸಭೆಯಲ್ಲಿ ಘೋಷಣೆ ಮಾಡಲಾಯಿತು.









