







ಹಿರಿಯರ ದೂರದರ್ಶಿತ್ವದ ಕೊಡುಗೆ, ಮಾರ್ಗದರ್ಶನ ಅವಿಸ್ಮರಣೀಯ-ಸತೀಶ್ ಕುಮಾರ್ ಕೆಡೆಂಜಿ


ಪುತ್ತೂರು:- ಪುತ್ತೂರು ತಾಲೂಕು ಬಿಲ್ಲವ ಸಂಘದ ನಿರ್ಮಾಣದಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ದೂರದರ್ಶಿತ್ವದ ಕೊಡುಗೆಯಿಂದಾಗಿ ಸಂಘವು ಇಂದು 50 ಸಂವತ್ಸರಗಳನ್ನು ಪೂರೈಸುವಲ್ಲಿ ಸಾಧ್ಯವಾಗಿದೆ. ಇದು ಸಮಾಜದ ಬಂಧುಗಳ ಶಕ್ತಿ ಮತ್ತು ಏಕತೆಯ ಪ್ರತೀಕವಾಗಿದೆ. ಎಲ್ಲರ ಸಹಕಾರದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಸದಸ್ಯರಿಗೂ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವಿಭಜಿತ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.



ಜು.5 ರಂದು ಬಪ್ಪಳಿಗೆ-ಬೈಪಾಸ್ ಇಲ್ಲಿನ ಬಿಲ್ಲವ ಸಂಘದ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಂಘದ ಮುಖ್ಯ ಉದ್ದೇಶ ಸಮಾಜವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ, ಯುವಕರಿಗೆ ಉದ್ಯೋಗ ಮಾರ್ಗದರ್ಶನ, ಮಹಿಳೆಯರ ಸಬಲೀಕರಣ ಹಾಗೂ ಸಮಾಜದ ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ನೆರವು ನೀಡುವ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸುವ ಸಂಕಲ್ಪವನ್ನು ಹೊಂದಿದ್ದೇವೆ.
ಸಂಘದ ಬೆಳವಣಿಗೆ ಕೇವಲ ಪದಾಧಿಕಾರಿಗಳಿಂದ ಸಾಧ್ಯವಲ್ಲ. ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವ, ಸಲಹೆ ಮತ್ತು ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲರೂ ಸಂಘದ ಸದಸ್ಯತ್ವವನ್ನು ವೃದ್ಧಿಸಿ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದರು.
ಅವಿಭಜಿತ ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ವರದಿ ಮಂಡಿಸಿದರು. ಬಿಲ್ಲವ ಸಂಘ ಹಾಗೂ ಗುರುಮಂದಿರದ ಲೆಕ್ಕಪತ್ರವನ್ನು ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ ಮಂಡಿಸಿದರು. ಗುರುಮಂದಿರದ ಸದಸ್ಯರಾದ ಮೋಹನ್ ತೆಂಕಿಲ ಪ್ರಾರ್ಥಿಸಿದರು. ಪ್ರಥಮ ಉಪಾಧ್ಯಕ್ಷರಾದ ಚಿದಾನಂದ ಸುವರ್ಣ ಸ್ವಾಗತಿಸಿ, ದ್ವಿತೀಯ ಉಪಾಧ್ಯಕ್ಷೆ ಪುಷ್ಪಾವತಿ ಕೇಕುಡೆ ವಂದಿಸಿದರು. ಸಂಘದ ಸದಸ್ಯರು ವಿವಿಧ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ , ಚರ್ಚೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.










