







ಕಾಂಚನ: ಸುಪ್ರೀಂಕೋರ್ಟ್‌ನ ಸಂಗ್ರಹ ಸಾಕ್ಷ್ಯಗಳ ಸುಧಾರಣಾ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲ್ಯಾರು ಅವರಿಗೆ ಕಾಂಚನದ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಲಕ್ಷ್ಮಿನಾರಾಯಣ ಸಂಗೀತ ಶಾಲೆಯಲ್ಲಿ ಅಭಿನಂದನಾ ಹಾಗೂ ಸಂತೋಷ ಕೂಟ ಕಾರ್ಯಕ್ರಮ ನಡೆಯಿತು.


ಪುತ್ತೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಮುಕುಂದ ಬಜತ್ತೂರು ಅಭಿನಂದಿಸಿ ಮಾತನಾಡಿ, ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ರಾಷ್ಟ್ರಮಟ್ಟದ ಗೌರವವನ್ನು ಪಡೆದಿರುವ ಶ್ರೀ ರಾಜಶೇಖರ್ ಹಿಲ್ಯಾರ್ ಅವರು ಯುವಜನತೆಗೆ ಮಾದರಿಯಾಗಿದ್ದಾರೆ. ಅವರ ಸಾಧನೆಯು ಶಿಕ್ಷಣ, ಪರಿಶ್ರಮ ಮತ್ತು ಸಮಾಜಸೇವೆಯ ಮೂಲಕ ಉನ್ನತ ಸ್ಥಾನವನ್ನು ತಲುಪಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಚನ ನಡ್ಪ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಗೌಡ ನಡ್ಪ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿಯ ಸಚಿನ್ ಸಂಸ್ಥೆಗಳ ಮಾಲಕರಾದ ಸುಂದರ ಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡೆನ್ನಿಸ್ ಪಿಂಟೋ ಪುಯಿಲ, ಕಾಂಚನ ಮನೆತನದ ಕಾಂಚನ ರಂಜಿನಿ, ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಣ ಗೌಡ ಮತ್ತು ರಾಧಾಕೃಷ್ಣ, ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಹೊಸಮನೆ, ಶಾಲಾ ಶಿಕ್ಷಕ -ರಕ್ಷಕ ಸಂಘ ಅಧ್ಯಕ್ಷರಾದ ಮಧುಶ್ರೀ ಯಾದವ ಗೌಡ ನೆಕ್ಕರೆ, ನಯನ ಹರೀಶ್ ಊರಾಬೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ನ್ಯಾಯವಾದಿ ರಾಜಶೇಖರ್ ಹಿಲ್ಯಾರ್ ಅವರ ಕಾನೂನು ಕ್ಷೇತ್ರದ ಅಪೂರ್ವ ಸಾಧನೆ, ಸಮಾಜಮುಖಿ ಚಿಂತನೆ ಹಾಗೂ ರಾಷ್ಟ್ರಮಟ್ಟದ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶ ದೊರೆತಿರುವುದು ಕಾಂಚನ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜಶೇಖರ್ ಹಿಲ್ಯಾರ್ ಹಾಗೂ ಅವರ ಪತ್ನಿ ಕಾಂಚನ ಶೃತಿ ರಂಜಿನಿ ಅವರನ್ನು ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀ ದೇವರ ಪ್ರಸಾದದೊಂದಿಗೆ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ್ ಹಿಲ್ಯಾರ್, “ನನಗೆ ದೊರೆತಿರುವ ಈ ರಾಷ್ಟ್ರೀಯ ಜವಾಬ್ದಾರಿ ವೈಯಕ್ತಿಕ ಸಾಧನೆಯಲ್ಲ; ನನ್ನನ್ನು ಬೆಳೆಸಿದ ಕುಟುಂಬ, ಗುರುಗಳು, ಊರು ಹಾಗೂ ಸಮಾಜದ ಆಶೀರ್ವಾದದ ಫಲವಾಗಿದೆ. ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಕಾಂಚನದ ಜನರ ಪ್ರೀತಿ ಮತ್ತು ವಿಶ್ವಾಸ ನನಗೆ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ಹೇಳಿದರು.
ಧೃತಿ,ಯಶ್, ರುಷಿಕ್ ಮತ್ತು ಹಿತಾಶ್ರೀ ಪ್ರಾರ್ಥಿಸಿದರು. ಉಪನ್ಯಾಸಕ ಮೋಹನ್ ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ವಿಕ್ರಂ ಯುವಕ ಮಂಡಲದ ಅಧ್ಯಕ್ಷ ಶ್ರೀ ರಾಮಚಂದ್ರ ವಂದನಾರ್ಪಣೆ ಸಲ್ಲಿಸಿದರು. ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಕ್ಷೇತ್ರದ ಗಣ್ಯರು, ಜನಪ್ರತಿನಿಧಿಗಳು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ರಾಜಶೇಖರ್ ಹಿಲ್ಯಾರ್ ದಂಪತಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿ, ಭೋಜನ ನೀಡಿ ಸಹಕರಿಸಿದರು.










