






ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸುತ್ತಿರುವ ಉಪ್ಪಿನಂಗಡಿ ಪ್ರವೇಶದ ಸರ್ವೀಸ್ ರಸ್ತೆಯ ಕಾಮಗಾರಿಯಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ಆ.15ರಂದು ರಾಜ್ಯ ಲೋಕೋಪಯೋಗಿ ಇಲಾಖಾಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಜಂಟಿ ಪರಿಶೀಲನೆ ನಡೆಯಿತು.


ಪ್ರಸಕ್ತ ಉಪ್ಪಿನಂಗಡಿ ಪೇಟೆಗೆ ಸಂಪರ್ಕ ಸಾಧಿಸುವ ರಸ್ತೆಯ ಸ್ವಲ್ಪ ಭಾಗವನ್ನು ಹೆದ್ದಾರಿ ಪ್ರಾಧಿಕಾರವು ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದು, ಇದೇ ಸ್ಥಳವನ್ನು ಒಳಗೊಂಡು ಉಪ್ಪಿನಂಗಡಿ ನೇತ್ರಾವತಿ ಸೇತುವೆಯವರೆಗೆ ಚತುಷ್ಫಥ ರಸ್ತೆ ನಿರ್ಮಿಸಲು ಶಾಸಕ ಅಶೋಕ್ ಕುಮಾರ್ ರೈಯವರು 3 ಕೋ. ರೂ. ಅನುದಾನವನ್ನು ನೀಡಿದ್ದರು. ಇದರಲ್ಲಿ 15 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. ಪ್ರಸಕ್ತ ಹೆದ್ದಾರಿ ಪ್ರಾಧಿಕಾರವು 8 ಮೀಟರ್ ಅಗಲದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸುತ್ತಿದ್ದು, ಉಳಿದ 7 ಮೀಟರ್ ರಸ್ತೆಯ ಬಗ್ಗೆ ಗೊಂದಲ ಉಂಟಾಗಿತ್ತು. ವಿಷಯವನ್ನು ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ಕುಮಾರ್ ರೈಯವರು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಗಮನಕ್ಕೆ ತಂದು ಅಲ್ಲಿ ಮುಂದಕ್ಕೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ಥಳಾವಕಾಶ ಬಿಡುವಂತೆ ಹೇಳಿದ್ದರು. ಅಲ್ಲದೇ, ಸಂಸದ ಕ್ಯಾ. ಬ್ರಿಜೇಶ್ ಚೌಟರವರ ಗಮನಕ್ಕೂ ಈ ವಿಷಯವನ್ನು ತರಲಾಗಿತ್ತು. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಅವರ ನಿರ್ದೇಶನದ ಮೇರೆಗೆ ಇಲಾಖಾ ಎಂಜಿನಿಯರ್ ಆಗಿ ಅನುಭವ ಹೊಂದಿರುವ ಪ್ರಸನ್ನ ದರ್ಬೆಯವರ ಮುಂದಾಳತ್ವದಲ್ಲಿ ಉಭಯ ಇಲಾಖಾ ಎಂಜಿನಿಯರ್‌ಗಳ ಮೂಲಕ ಸ್ಥಳ ಪರಿಶೀಲನೆ ನಡೆಸಲಾಯಿತು. ಪ್ರಸಕ್ತ ನಡೆಯುವ ಕಾಮಗಾರಿಗೂ ಮುಂದಕ್ಕೆ ನಡೆಯುವ ಚತುಷ್ಪಥ ಕಾಮಗಾರಿಗೂ ಹೊಂದಾಣಿಕೆ ಮೂಡುವಂತೆ ಈ ಸಂದರ್ಭ ನಿರ್ದೇಶನ ನೀಡಲಾಯಿತು.



ಪರಿಶೀಲನೆಯ ವೇಳೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಜೇಶ್ ರೈ, ಹೆದ್ದಾರಿ ಕಾಮಗಾರಿ ವಿಭಾಗದ ಇಂಜಿನಿಯರ್ ರಘುನಾಥ ರೆಡ್ಡಿ, ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪ್ರಮುಖರಾದ ಆದೇಶ್ ಶೆಟ್ಟಿ, ತೌಸೀಫ್ ಯು.ಟಿ., ಸುರೇಶ್ ಅತ್ರಮಜಲು, ಧನಂಜಯ ನಟ್ಟಿಬೈಲು, ಎನ್. ರಾಘವೇಂದ್ರ ನಾಯಕ್, ಸಿದ್ದೀಕ್ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.










