







ಪುತ್ತೂರು:ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವತಿಯಿಂದ 2026 ನೇ ಸಾಲಿನ ಅಧ್ಯಾಪಕ ಭೂಷಣ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ,ಜಿಡೆಕಲ್ಲು ಇದರ ಪ್ರಾಂಶುಪಾಲರಾದ ಪ್ರೊ| ಸುಬ್ಬಪ್ಪ ಕೈಕಂಬ ಇವರಿಗೆ ನೀಡಲಾಗಿದೆ.


ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲಾ ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಪ್ರೇರಣಾ ದಿವಸ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸೆ.26ರಂದು ಇನ್ಫೋಸಿಸ್ ಯಕ್ಷ ಕಲಾ ಕೇಂದ್ರದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಪ್ರೊ| ಮಾಧವ ಎಂ.ರವರು ತಿಳಿಸಿದ್ದಾರೆ.



ಪ್ರೊ|ಸುಬ್ಬಪ್ಪ ಕೈಕಂಬ ಅವರು ಸುಮಾರು 32 ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿದ್ದು 1994 ರಿಂದ ಬೆಳ್ಳಾರೆ ,ಸುಬ್ರಹ್ಮಣ್ಯ, ಕಾರ್ಕಳ ಮೂಡಬಿದಿರೆಗಳಲ್ಲಿ ಸೇವೆ ಸಲ್ಲಿಸಿ 2003ರಲ್ಲಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸರಕಾರಿ ಸೇವೆಗೆ ಸೇರಿದರು. ತದನಂತರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಂಗಳೂರಿನಲ್ಲಿ ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಜಿಡಕಲ್ಲು ಇಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ, ಶಿಕ್ಷಣ ,ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಕಾಲೇಜು ರಾಜ್ಯ ,ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಇವರ ಅಪಾರ ಶ್ರಮ ಇದೆ. ಅತ್ಯಂತ ಕಡಿಮೆ ಸಂಖ್ಯೆಯ ದಾಖಲಾತಿ ಹೊಂದಿದ್ದ ಪುತ್ತೂರು ಕಾಲೇಜಿನಲ್ಲಿ ದಾನಿಗಳ ನೆರವಿನೊಂದಿಗೆ ಉಚಿತ ಶಿಕ್ಷಣ, ಮಧ್ಯಾಹ್ನ ಉಚಿತ ಭೋಜನ, ವ್ಯವಸ್ಥೆಯಂತಹ ಯೋಜನೆಗಳೊಂದಿಗೆ ಕಾಲೇಜು ಮತ್ತೆ ಹೊಸ ಹುರುಪಿನೊಂದಿಗೆ ಕಾರ್ಯಾಚರಿಸುವಲ್ಲಿ ಇವರ ಪ್ರಯತ್ನ ಯಶಸ್ಸು ಕಂಡಿದೆ
ಮೂಲತಃ ಸುಬ್ರಹ್ಮಣ್ಯದ ಕೈಕಂಬದವರಾದ ಪ್ರೊ.ಸುಬ್ಬಪ್ಪ ಕೈಕಂಬರವರು ದಿ.ತಿಮ್ಮ ಕೈಕಂಬ ಮತ್ತು ಶ್ರೀಮತಿ ಭಾಗಿ ದಂಪತಿಗಳ ಪುತ್ರನಾಗಿದ್ದು ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ. ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ತೀವ್ರ ಆಸಕ್ತಿ ಮತ್ತು ಒಲವು ಇರುವ ಇವರು ಒಬ್ಬ ರಂಗ ಕಲಾವಿದ. ಹಲವಾರು ನಾಟಕಗಳಲ್ಲಿ ನಟನೆ ಮತ್ತು ಹಲವು ನಾಟಕಗಳ ನಿರ್ದೇಶನ ಕೂಡ ಮಾಡಿದ್ದಾರೆ. ಹವ್ಯಾಸಿ ಯಕ್ಷಗಾನ ಅರ್ಥದಾರಿಯೂ ಹೌದು, ಇವರ ಹಲವಾರು ಲೇಖನಗಳು ಪ್ರಕಟಗೊಂಡಿದ್ದು ಇತ್ತೀಚೆಗೆ ಕುವೆಂಪು ಭಾಷಾ ಪ್ರಾಧಿಕಾರದವರು ಇವರು ಅನುವಾದಿಸಿದ ಅವಳಿ ವೀರರು ಕೋಟಿ ಚೆನ್ನಯರುವಎನ್ನುವ ಕೃತಿಯನ್ನು ಪ್ರಕಟಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯನಾಗಿ ಆಗಿನ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡು ಸೇವೆ ಸಲ್ಲಿಸಿದ ಇವರು, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಹೌದು. ಕರ್ನಾಟಕ ನಾಟಕ ಅಕಾಡೆಮಿಯ ಸಹ ಸದಸ್ಯನಾಗಿ ಕಾರ್ಯನಿರ್ವಹಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಜೇಸಿ, ರೋಟರಿಯಂತಹ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಪ್ರೊ. ಸುಬ್ಬಪ್ಪ ಕೈಕಂಬರವರು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ .ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರೂ ಇವರಾಗಿದ್ದಾರೆ.










